ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹದಗೆಟ್ಟ ರಸ್ತೆ ಸರಿ‍ಪಡಿಸಿ

Last Updated 21 ಸೆಪ್ಟೆಂಬರ್ 2022, 15:40 IST
ಅಕ್ಷರ ಗಾತ್ರ

ಬೆಳಗಾವಿ: ಕಾಕತಿವೇಸ್‌ ರಸ್ತೆಯಿಂದ ಜಿಲ್ಲಾಧಿಕಾರಿ ಕಚೇರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹದಗೆಟ್ಟಿದ್ದು, ಜನರು ತೊಂದರೆ ಅನುಭವಿಸುವಂತಾಗಿದೆ. ಕೆಲವರು ಇದೇ ರಸ್ತೆ ಪಕ್ಕದಲ್ಲೇ ಬೇಕಾಬಿಟ್ಟಿಯಾಗಿ ವಾಹನಗಳನ್ನು ನಿಲುಗಡೆ ಮಾಡುತ್ತಿರುವುದರಿಂದ ಸಂಚಾರ ಸಮಸ್ಯೆಯೂ ತಲೆದೋರುತ್ತಿದೆ.

ಈ ಮಾರ್ಗದಲ್ಲಿ ನಗರ ಕೇಂದ್ರ ಗ್ರಂಥಾಲಯ, ವಿವಿಧ ಇಲಾಖೆಗಳ ಕಚೇರಿಗಳಿವೆ. ವಿವಿಧ ಬೇಡಿಕೆಗಳನ್ನು ಹೊತ್ತು ನಿತ್ಯ ನೂರಾರು ಜನರು ಜಿಲ್ಲಾಧಿಕಾರಿ ಕಚೇರಿಗೆ ಬರುತ್ತಾರೆ. ಇದೇ ಮಾರ್ಗದಲ್ಲಿ ಹಲವು ವಿದ್ಯಾರ್ಥಿಗಳು ಶಾಲಾ–ಕಾಲೇಜಿಗೆ ಹೋಗುತ್ತಾರೆ. ಹಾಗಾಗಿ ಆದ್ಯತೆ ಮೇರೆಗೆ ಈ ರಸ್ತೆ ನಿರ್ಮಿಸಿ ಜನರಿಗೆ ಅನುಕೂಲ ಕಲ್ಪಿಸಿಕೊಡಬೇಕು.

ರಾಹುಲ್‌ ಹೆದ್ದೂರಶೆಟ್ಟಿ, ಬೆಳಗಾವಿ

ಅಪಾಯಕಾರಿ ಮರ ತೆರವುಗೊಳಿಸಿ

ಬೆಳಗಾವಿ: ನಗರದ ಮುಖ್ಯರಸ್ತೆಗಳು ಹಾಗೂ ವಿವಿಧ ಬಡಾವಣೆಗಳಲ್ಲಿ ರಸ್ತೆಬದಿ ಅಪಾಯಕಾರಿ ಹಂತದಲ್ಲಿರುವ ಮರಗಳು ಜನರಲ್ಲಿ ಆತಂಕ ಸೃಷ್ಟಿಸುತ್ತಿವೆ. ಯಾವುದಾದರೂ ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂಬ ಪ್ರಶ್ನೆ ತಲೆದೋರಿದೆ.

ಇಲ್ಲಿನ ಅರಣ್ಯ ಇಲಾಖೆ ಕಚೇರಿ ಮುಂದಿನ ಹಳೇ ಪಿ.ಬಿ. ರಸ್ತೆಯಲ್ಲಿ ಇತ್ತೀಚೆಗೆ ಬೃಹತ್‌ ಮರ ಬಿದ್ದು, ಎರಡು ಆಟೋರಿಕ್ಷಾ ಮತ್ತು ಒಂದು ಇನ್ನೋವಾ ಕಾರಿಗೆ ಹಾನಿಯಾಗಿದೆ. ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಮರ ಬಿದ್ದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೊಬ್ಬ ಬೈಕ್‌ ಸವಾರ ಗಾಯಗೊಂಡಿದ್ದಾರೆ. ಹೀಗೆ ಒಂದಿಲ್ಲೊಂದು ಘಟನೆ ನಡೆಯುತ್ತಿವೆ. ಹಾಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು, ಅಪಾಯ ತರುವ ಹಂತದಲ್ಲಿರುವ ಮರಗಳನ್ನು ತೆರವುಗೊಳಿಸಬೇಕು.

ಕಾರ್ತಿಕ ಗವಳಿ, ಬೆಳಗಾವಿ

ಸೇತುವೆ ಮೇಲಿನ ಗುಂಡಿ ಮುಚ್ಚಿ

ರಾಮದುರ್ಗ: ಪಟ್ಟಣದ ಹೊರವಲಯದ ದೊಡ್ಡ ಸೇತುವೆ ಮೇಲೆ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ . ಆದರೆ ಸೇತುವೆ ಮೇಲೆ ಹಲವು ಗುಂಡಿಗಳು ಬಿದ್ದಿವೆ. ಅಲ್ಲದೇ ಸೇತುವೆಯ ಎರಡೂ ಬದಿಗಳಲ್ಲಿ ಮಣ್ಣು ಸಂಗ್ರಹವಾದ ಕಾರಣ, ಮಳೆಯ ನೀರು ಹರಿದು ಹೋಗುವ ಸಲುವಾಗಿ ಸೇತುವೆ ಎರಡೂ ಬದಿಗೆ ಅಳವಡಿಸಿರುವ ಚಿಕ್ಕ ನಾಲೆಗಳು ಮಣ್ಣಿನಿಂದ ಮುಚ್ಚಿವೆ. ಮಳೆಯಾದಾಗ ಸೇತುವೆಯುದ್ದಕ್ಕೂ ಮಳೆನೀರು ನಿಲ್ಲುತ್ತದೆ. ಇದು ವಾಹನಗಳು ಮಾತ್ರವಲ್ಲದೇ, ಪಾದಚಾರಿಗಳಿಗೂ ಸಂಕಷ್ಟ ತಂದೊಡ್ಡಿದೆ. ಸೇತುವೆಗೆ ಹೊಂದಿಕೊಂಡ ರಾಜ್ಯ ಹೆದ್ದಾರಿಯ ಎರಡೂ ಕಡೆ ಗಿಡಗಂಟಿ ಬೆಳೆದಿದೆ. ಅಪಘಾತವಾಗುವ ಮುನ್ನ ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸಬೇಕು.

ಮಲ್ಲನಗೌಡ ಪಾಟೀಲ, ರಾಮದುರ್ಗ

ಮೂತ್ರಾಲಯ ಸ್ಥಳಾಂತರಿಸಿ

ರಾಮದುರ್ಗ: ತಾಲ್ಲೂಕಿನ ಹಲಗತ್ತಿ ಗ್ರಾಮದಲ್ಲಿ ಗಂಗರೆಡ್ಡಿ ಪ್ಲಾಟ್‌ ರಸ್ತೆಯಲ್ಲಿ ಪುರುಷರಿಗಾಗಿ ಮೂತ್ರಾಲಯ ಕಟ್ಟಲಾಗಿದೆ. ಇದು ಮುಖ್ಯ ರಸ್ತೆಗೇ ಹೊಂದಿಕೊಂಡಿದೆ. ಇದರಿಂದ ಈ ರಸ್ತೆಯಲ್ಲಿ ಓಡಾಡುವ ಹೆಣ್ಣುಮಕ್ಕಳು ಮುಜುಗರ ಅನುಭವಿಸುವಂತಾಗಿದೆ.

ಇದರ ಸಮೀಪದಲ್ಲೇ ದೇವಸ್ಥಾನವಿದೆ. ಪ್ರತಿದಿನ ಮಕ್ಕಳು, ಹಿರಿಯರು ಕೂಡ ದೇವಸ್ಥಾನಕ್ಕೆ ಬರುತ್ತಾರೆ. ಮೂತ್ರದ ಜಾಗ ಇರುವುದರಿಂದ ದೇವಸ್ಥಾನಕ್ಕೆ ಬರುವವರಿಗೂ ಕಿರಿಕಿರಿ ಆಗುತ್ತಿದೆ. ಆದ್ದರಿಂದ ಇದನ್ನು ಬೇರೆಡೆ ಸ್ಥಳಾಂತರಿಸಬೇಕು. ಈ ಬಗ್ಗೆ ಗ್ರಾಮ ಪಂಚಾಯಿತಿಗೆ ಸಾಕಷ್ಟು ಬಾರಿ ಮನವಿ ಮಾಡಲಾಗಿದೆ. ಈಗಲಾದರೂ ಪಂಚಾಯಿತಿ ಅಧಿಕಾರಿಗಳು ಈ ಕಡೆ ಗಮನ ಹರಿಸಬೇಕು.

ಬಿ.ಎಸ್. ಮುಳ್ಳೂರ, ಹಲಗತ್ತಿ

*

ಬೀದಿನಾಯಿಗಳ ಕಾಟ ತಪ್ಪಿಸಿ

ಬೆಳಗಾವಿ: ಇಲ್ಲಿನ ಅಜಂ ನಗರದ ತುಂಬ ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ. ಪ್ರತಿ ದಿನ ನಾಯಿಗಳು ಮುಖ್ಯರಸ್ತೆಯ ಪಕ್ಕದಲ್ಲೇ ಮಲಗಿರುತ್ತವೆ. ವಾಹಗಳ ಸದ್ದು ಕೇಳಿದ ತಕ್ಷಣ ಎದ್ದು ಅಡ್ಡ ಓಡಿಬರುತ್ತದೆ. ಇದರಿಂದ ಹಲವರು ಈಗಾಗಲೇ ಬಿದ್ದು ಕೈ– ಕಾಲು ಮುರಿದುಕೊಂಡಿದ್ದಾರೆ.

ರಸ್ತೆಯ ಪಕ್ಕದಲ್ಲಿ ಎಸೆಯುವ ತ್ಯಾಜ್ಯವನ್ನು ಹರಡಿ ಪರಿಸರ ಹಾಳು ಮಾಡುತ್ತಿವೆ. ಈ ಬಗ್ಗೆ ಮನವಿ ಮಾಡಿದ ನಂತರ ಪಾಲಿಕೆ ಸಿಬ್ಬಂದಿ ಕೆಲವು ದಿನ ನಾಯಿಗಳನ್ನು ಹಿಡಿದುಕೊಂಡು ಹೋಗಿದ್ದರು. ಅವುಗಳಿಗೆ ಸಂತಾನಶಕ್ತಿ ಹರಣ ಚಿಕಿತ್ಸೆ ನೀಡಿ ಮತ್ತೆ ತಂದು ಅಲ್ಲೇ ಬಿಟ್ಟಿದ್ದಾರೆ. ತಡರಾತ್ರಿಯವರೆಗೂ ಹಿಂಡು ಹಿಂಡಾಗಿ ಓಡಾಡುವ ನಾಯಿಗಳು ನಿದ್ರೆ ಭಂಗ ಮಾಡುತ್ತಿವೆ. ಸಂಜೆ ಹಾಗೂ ಬೆಳಿಗ್ಗೆ ವಾಯು ವಿಹಾರಿಗಳಿಗೆ, ಶಾಲೆಗೆ ಸೈಕಲ್‌ ಮೇಲೆ ಹೋಗುವ ಮಕ್ಕಳಿಗೆ ಕಂಟಕವಾಗಿ ಪರಿಣಮಿಸಿವೆ. ಆದ್ದರಿಂದ ನಾಯಿಗಳನ್ನು ಸ್ಥಳಾಂತರಿಸಬೇಕು.

ಬಕುಲ್‌ ನದಾಫ, ಫೌಜಿಯಾ ಮೊಹಮ್ಮದ್‌, ಅಜಂ ನಗರ, ಬೆಳಗಾವಿ

*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT