ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ‘ನೀರಿನ ಮಟ್ಟ’ ನಿಗಾಕ್ಕೆ ಅತ್ಯಾಧುನಿಕ ಸಾಧನ

ಕೃಷ್ಣಾ, ಮಲಪ್ರಭಾ ಸೇತುವೆಗಳ ಮೇಲೆ ರೈಲ್ವೆಯಿಂದ ಅಳವಡಿಕೆ
Last Updated 24 ಜೂನ್ 2020, 16:15 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯಲ್ಲಿ ಕೃಷ್ಣಾ ಹಾಗೂ ಮಲಪ್ರಭಾ ನದಿಗಳ ನೀರಿನ ಮಟ್ಟದ ಮೇಲೆ ನಿಗಾ ವಹಿಸುವುದಕ್ಕಾಗಿ, ನೈರುತ್ಯ ರೈಲ್ವೆಯು ತನ್ನ ಎರಡು ಪ್ರಮುಖ ಸೇತುವೆಗಳ ಮೇಲೆ ಅತ್ಯಾಧುನಿಕ ಸಾಧನಗಳನ್ನು ಅಳವಡಿಸಿದೆ.

ಗುಂಜಿ–ಖಾನಾಪುರ ರೈಲು ನಿಲ್ದಾಣದ ನಡುವೆ ಮಲಪ್ರಭಾ ನದಿ ಹಾಗೂ ಕುಡಚಿ–ಉಗಾರಖುರ್ದ್‌ ನಿಲ್ದಾಣ ನಡುವಿನ ಕೃಷ್ಣಾ ನದಿ ಸೇತುವೆ ಮೇಲೆ ಸಾಧನಗಳನ್ನು ಹಾಕಲಾಗಿದೆ.

ಮಳೆಗಾಲದಲ್ಲಿ, ಸೇತುವೆಗಳ ಬಳಿ ನೀರಿನ ಮಟ್ಟ ಎಷ್ಟಿದೆ ಎನ್ನುವುದನ್ನು ತಿಳಿದುಕೊಳ್ಳುವುದು ಮಹತ್ವದ್ದಾಗಿದೆ. ರೈಲುಗಳ ಸಂಚಾರಕ್ಕಾಗಿ ಇದು ಅತ್ಯಗತ್ಯವಾಗಿ ಬೇಕಾಗುತ್ತದೆ. ಪ್ರಸ್ತುತ ಸೇತುವೆ ಬಳಿ ಬಣ್ಣದಿಂದ ಹಾಕಿರುವ ಮಾರ್ಕ್‌ವರೆಗೆ ನೀರು ಬಂದಿದೆಯೋ ಇಲ್ಲವೋ ಎನ್ನುವುದನ್ನು ಗಮನಿಸಿ ಮಟ್ಟ ಅಳೆಯಲಾಗುತ್ತಿತ್ತು. ಈಗ, ಈ ಕೆಲಸವನ್ನು ಸಾಧನೆಗಳೆ ಮಾಡಿ ಮಾಹಿತಿ ರವಾನಿಸಲಿವೆ ಎಂದು ಇಲಾಖೆ ತಿಳಿಸಿದೆ.

ಈ ಸಾಧನಗಳನ್ನು, ದೂರದಿಂದಲೇ ಎಲ್ಲಿಂದ ಹಾಗೂ ಯಾವಾಗ ಬೇಕಾದರೂ (ಇಂಟರ್‌ನೆಟ್‌ ಮೂಲಕ) ರಿಮೋಟ್‌ನಿಂದ ನಿರ್ವಹಿಸಬಹುದಾಗಿದೆ. ಕೇಂದ್ರೀಕೃತ ಸರ್ವರ್‌ಗೆ ಅವು ಮಾಹಿತಿ ರವಾನಿಸುತ್ತವೆ. ವಿಶೇಷವಾಗಿ ಮುಂಗಾರು ಮಳೆಗಾಲದ ಸಂದರ್ಭದಲ್ಲಿ ಸುರಕ್ಷಿತವಾಗಿ ಮಾಹಿತಿ ಪಡೆಯುವುದಕ್ಕೆ ಇವು ಸಹಕಾರಿಯಾಗಲಿವೆ. ಪ್ರವಾಹ ಪರಿಸ್ಥಿತಿ ಉಂಟಾದಲ್ಲಿ ತ್ವರಿತವಾಗಿ ಗೊತ್ತಾಗುತ್ತದೆ. ಸಂಬಂಧಿಸಿದ ಅಧಿಕಾರಿಯ ಮೊಬೈಲ್‌ ಫೋನ್‌ಗೆ ಎಸ್‌ಎಂಎಸ್‌ ರವಾನಿಸುವ ವ್ಯವಸ್ಥೆಯೂ ಇದರಲ್ಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹೊಸ ವ್ಯವಸ್ಥೆಯಿಂದಾಗಿ, ಯಾರಾದರೂ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿ ಮಾಹಿತಿ ರವಾನಿಸುವ ಪ್ರಮೇಯ ಇರುವುದಿಲ್ಲ. ಸಾಧನಗಳು ಕನಿಷ್ಠ ವಿದ್ಯುತ್ ಬಳಸುತ್ತವೆ. ಮೈಕ್ರೋವೇವ್ ತಂತ್ರಜ್ಞಾನದ ಮೇಲೆ ಅಭಿವೃದ್ಧಿಪಡಿಸಲಾಗಿದೆ. ಅವುಗಳಲ್ಲಿರುವ ರಡಾರ್‌ 30 ಮೀಟರ್‌ ದೂರದವರೆಗಿನ ನೀರಿನ ಮಟ್ಟವನ್ನು ನಿರಂತರ ಹಾಗೂ ನಿಖರವಾಗಿ ಅಳೆಯುವ ಸಾಮರ್ಥ್ಯ ಹೊಂದಿದೆ. ಈ ಸಾಧನಗಳ ಅಳವಡಿಕೆಗೆ ತಲಾ ₹ 10 ಲಕ್ಷ ವೆಚ್ಚವಾಗಿದೆ. ಇವುಗಳಿಂದ ಸೇತುವೆಗಳ ನಿರ್ವಹಣೆಗೆ ಅನುಕೂಲ ಆಗಲಿದೆ ಎಂದು ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅಜಯ್‌ಕುಮಾರ್‌ ಸಿಂಗ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT