ಬುಧವಾರ, ಏಪ್ರಿಲ್ 14, 2021
31 °C

Pv Web Exclusive | ಸವದತ್ತಿ ಯಲ್ಲಮ್ಮ ಜಾತ್ರೆ ಇಲ್ಲ; ಸಂಭ್ರಮಕ್ಕೆ ಕೊರತೆ ಇಲ್ಲ!

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ನೆರೆಯ ಮಹಾರಾಷ್ಟ್ರದಲ್ಲಿ ಕೋವಿಡ್–19 ಹೆಚ್ಚುತ್ತಿರುವ ಕಾರಣದಿಂದಾಗಿ, ಜಿಲ್ಲೆಯ ಸುಕ್ಷೇತ್ರ ಯಲ್ಲಮ್ಮನ ದೇಗುಲಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ. ಫೆ. 27ರಂದು ನಡೆಯಲಿರುವ ಪ್ರಖ್ಯಾತ ‘ಭಾರತ ಹುಣ್ಣಿಮೆ ಜಾತ್ರೆ’ ರದ್ದುಪಡಿಸಲಾಗಿದೆ. ಆದರೆ, ಸಂಭ್ರಮಕ್ಕೆ ಯಾವುದೇ ಕೊರತೆ ಉಂಟಾಗಿಲ್ಲ.

ಯಲ್ಲಮ್ಮನ ಸನ್ನಿಧಿಗೆ ವಿಶೇಷ ವಿದ್ಯುತ್‌ ದೀಪಾಲಂಕಾರ ಮಾಡಿರುವುದು ಮೆರುಗು ಹೆಚ್ಚಿಸಿದೆ. ಈ ವಿದ್ಯುದ್ದೀಪಾಲಂಕಾರ ಮಾರ್ಚ್‌ 1ರವರೆಗೂ ಇರಲಿದೆ. ಇದನ್ನು ಮಹಾರಾಷ್ಟ್ರದ ಕೊಲ್ಹಾಪುರದ ಮಾಜಿ ಮೇಯರ್‌ ಆಗಿರುವ ಸಾಗರ್ ಪ್ರಹ್ಲಾದ್ ಚವ್ಹಾಣ ಅವರು ಮಾಡಿಕೊಟ್ಟಿರುವುದು ವಿಶೇಷ.

ಭಾರತ ಹುಣ್ಣಿಮೆಗಾಗಿ


ದೇಗುಲಕ್ಕೆ ವಿದ್ಯುದ್ದೀಪಾಲಂಕಾರ

ಕೋವಿಡ್ ಪರಿಸ್ಥಿತಿ ಇಲ್ಲದಿದ್ದರೆ, ಭಾರತ ಹುಣ್ಣಿಮೆಯ ಈ ಸಂದರ್ಭದಲ್ಲಿ ಗುಡ್ಡದಲ್ಲಿ ಲಕ್ಷಾಂತರ ಮಂದಿ ಸೇರುತ್ತಿದ್ದರು. ಈ ವೇಳೆಯನ್ನು ಮತ್ತಷ್ಟು ವಿಶೇಷವಾಗಿಸಲು ಈ ಬಾರಿ ವಿಶೇಷ ದೀಪಾಲಂಕಾರ ಮಾಡಲಾಗಿದೆ. ಆದರೆ, ಕೋವಿಡ್ ಹರಡದಂತೆ ನೋಡಿಕೊಳ್ಳುವ ಮುಂಜಾಗ್ರತಾ ಕ್ರಮದ ಭಾಗವಾಗಿ ಭಕ್ತರಿಗೆ ದೇವಸ್ಥಾನಕ್ಕೆ ಪ್ರವೇಶಿಸಲು ನಿರ್ಬಂಧವಿದೆ. ಈ ನಡುವೆಯೂ ಸಾವಿರಾರು ಭಕ್ತರು ಗುಡ್ಡಕ್ಕೆ ಬರುತ್ತಿದ್ದಾರೆ. ಅಲ್ಲಲ್ಲಿ ತಾತ್ಕಾಲಿಕ ಟೆಂಟ್ ಹಾಕಿಕೊಂಡು ಅಲ್ಲೇ ನೈವೇದ್ಯ ಸಿದ್ಧಪಡಿಸಿ ದೇವಿಗೆ ಸಮರ್ಪಿಸಿ, ದೂರದಿಂದಲೇ ಏಳುಕೊಳ್ಳದ ಅಮ್ಮನಿಗೆ ನಮಿಸುತ್ತಿದ್ದಾರೆ. ವಿಶೇಷ ದೀಪಾಲಂಕಾರವು ದೇಗುಲದ ಆಕರ್ಷಣೆ ಹೆಚ್ಚಿಸಿ ಮೆರುಗು ನೀಡಿರುವುದನ್ನು ದೂರದಿಂದಲೇ ಕಣ್ತುಂಬಿಕೊಳ್ಳುತ್ತಿದ್ದಾರೆ.

ದೇಗುಲವು ಭಂಡಾರದಲ್ಲಿ ಮೀಯುವುದು ಮಾಮೂಲಿ. ಈ ಬಾರಿ ಗೋಪುರದ ಮೇಲೆ ಏಳು ರೀತಿಯ ಬಣ್ಣದ ದೀಪಗಳು ಬೀಳುವಂತೆ ವ್ಯವಸ್ಥೆ ಮಾಡಲಾಗಿದೆ. ಸಂಜೆ 6.30ರಿಂದ ರಾತ್ರಿ 9.30ರವರೆಗೆ ದೀಪಾಲಂಕಾರ ಇರಲಿದೆ.

 

ಉಚಿತವಾಗಿ ಮಾಡಿದ್ದಾರೆ

‘ಫೆ.23ರಂದು ಆಕರ್ಷಕ ವಿದ್ಯುತ್‌ದೀಪಾಲಂಕಾರಕ್ಕೆ ಚಾಲನೆ ನೀಡಲಾಗಿದೆ. ದೇವಿಯ ಭಕ್ತರಾದ ಮಹಾರಾಷ್ಟ್ರದ ಸಾಗರ್ ಅವರು ಈ ವ್ಯವಸ್ಥೆಯನ್ನು ಉಚಿತವಾಗಿ ಮಾಡಿಕೊಟ್ಟು ಭಕ್ತಿ ಸಮರ್ಪಿಸಿದ್ದಾರೆ. 230ಕ್ಕೂ ಹೆಚ್ಚಿನ ಎಲ್‌ಇಡಿ ಸ್ಪಾಟ್‌ಲೈಟ್‌ಗಳನ್ನು ಬಳಸಿದ್ದಾರೆ. ಕೊಲ್ಹಾಪುರ ಮಹಾಲಕ್ಷ್ಮಿ ದೇವಾಲಯದ ಮಾದರಿಯಲ್ಲಿ ಇಲ್ಲೂ ಆಕರ್ಷಕ ಅಲಂಕಾರಕ್ಕೆ ಕೈಜೋಡಿಸಿದ್ದಾರೆ. ಭಕ್ತಿಗೆ ಗಡಿ ಅಥವಾ ಭಾಷೆಯ ಹಂಗಿಲ್ಲ ಎನ್ನುವುದನ್ನು ನಿರೂಪಿಸಿದ್ದಾರೆ’ ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೋಟಾರಗಸ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ತಂದೆ ಹಿಂದೆ ಸ್ಕೂಟರ್‌ನಲ್ಲಿ ಬಂದು ಸಣ್ಣ ಪ್ರಮಾಣದಲ್ಲಿ ಲೈಟಿಂಗ್ ಮಾಡುತ್ತಿದ್ದರು. ದೇವಿ ಕೃಪೆಯಿಂದಾಗಿ ನಾವು ಬೆಳೆದಿದ್ದೇವೆ. ಹೀಗಾಗಿ, ದೊಡ್ಡ ಪ್ರಮಾಣದಲ್ಲಿ ವಿದ್ಯುದ್ದೀಪಾಲಂಕಾರ ಮಾಡಿದ್ದೇನೆ ಎನ್ನುತ್ತಾರೆ ಸಾಗರ್. ಲೈಟಿಂಗ್ ಮತ್ತು ಡೆಕೋರೇಷನ್ ಉದ್ಯಮದಲ್ಲಿ ಬಹಳಷ್ಟು ಹೆಸರು ಮಾಡಿದ್ದಾರೆ’ ಎಂದರು.


ವಿದ್ಯುದ್ದೀಪಾಲಂಕಾರ

ಒಳಿತಾಗಲೆಂದು ಪ್ರಾರ್ಥನೆ

‘ಗುಡ್ಡದಲ್ಲಿ ಲಕ್ಷಾಂತರ ಮಂದಿ ಸೇರುವ ಭಾರತ ಹುಣ್ಣಿಮೆ ಜಾತ್ರೆ ರದ್ದಾಗಿದೆ. ಸಾರ್ವಜನಿಕರಿಗೆ ದರ್ಶನ ನಿರ್ಬಂಧಿಸಲಾಗಿದೆ. ಆದರೆ, ಸಂಭ್ರಮಕ್ಕೆ ಹಾಗೂ ಧಾರ್ಮಿಕ ವಿಧಿ–ವಿಧಾನಗಳಲ್ಲಿ ಕೊರತೆ ಆಗದಂತೆ ನೋಡಿಕೊಳ್ಳಲಾಗುತ್ತಿದೆ. ಕಲ ಜೀವರಾಶಿಗೂ ಒಳಿತಾಗಲೆಂದು ದೇವಿಯನ್ನು ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ’ ಎಂದು ಹೇಳಿದರು.

‘ಏಳು ಬಣ್ಣಗಳ ದೀಪಗಳನ್ನು ಒಂದಾದ ಮೇಲೊಂದರಂತೆ ಗೋಪುರದ ಮೇಲೆ ಫೋಕಸ್ ಮಾಡಲಾಗಿದೆ. ಇದನ್ನು ಸ್ಥಳೀಯರು ಹಾಗೂ ಸುತ್ತಮುತ್ತಲ ಜನರು ದೂರದಿಂದಲೇ ಕಣ್ತುಂಬಿಕೊಂಡು  ಸಂಭ್ರಮಿಸುತ್ತಿದ್ದಾರೆ. ಈ ವಿಶೇಷ ವಿದ್ಯುದ್ದೀಪಾಲಂಕಾರವನ್ನು ಶಾಶ್ವತವಾಗಿ ಮಾಡಿಸುವುದಕ್ಕೆ ಉದ್ದೇಶಿಸಲಾಗಿದೆ. ಇದಕ್ಕೆ ₹ 10–₹ 15 ಲಕ್ಷ ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ದಾನಿಗಳ ಮೂಲಕ ಪಡೆಯುವ ಪ್ರಯತ್ನವೂ ನಡೆದಿದೆ’ ಎನ್ನುತ್ತಾರೆ ಅವರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು