ಬುಧವಾರ, ಮೇ 18, 2022
27 °C
ಬಜೆಟ್‌ನಲ್ಲಿ ಅನುದಾನ ಕೋರಿಕೆ: ಸುರೇಶ್‌ಕುಮಾರ್‌

50 ವರ್ಷದ ಶಾಲೆಗಳ ಪುನಶ್ಚೇತನಕ್ಕೆ ಯೋಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಗಡಿ ಸೇರಿದಂತೆ ರಾಜ್ಯದಾದ್ಯಂತ ಇರುವ ಐವತ್ತು ವರ್ಷ ದಾಟಿದ ಶಾಲೆಗಳ ಕಟ್ಟಡಗಳ ಪುನಶ್ಚೇತನಕ್ಕಾಗಿ ಯೋಜನೆ ರೂಪಿಸಲಾಗಿದೆ.  ಅದಕ್ಕಾಗಿ ಈ ಬಜೆಟ್‌ನಲ್ಲಿ ವಿಶೇಷ ಅನುದಾನ ನಿಗದಿಪಡಿಸುವಂತೆ ಮುಖ್ಯಮಂತ್ರಿಯನ್ನು ಕೋರಲಾಗುವುದು’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್‌ ತಿಳಿಸಿದರು.

ಜಿಲ್ಲೆಯ ಖಾನಾಪುರ ಪಟ್ಟಣದ ಬಿಇಒ ಕಚೇರಿ ಆವರಣದಲ್ಲಿ ಸೋಮವಾರ ವಿಜ್ಞಾನ ಉದ್ಯಾನ ಉದ್ಘಾಟಿಸಿದ ಬಳಿಕ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

‘ಹಣಕಾಸಿನ ಲಭ್ಯತೆ ಮೇರೆಗೆ ಶಾಲೆಗಳ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು’ ಎಂದರು.

‘ಕೋವಿಡ್ ಕಾರಣದಿಂದಾಗಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಾಲೆಗಳಿಗೆ ಬಹುತೇಕ ರಜೆಯೇ ಇತ್ತು. ಹೀಗಾಗಿ, ಬೇಸಿಗೆ ರಜೆಯ ಅವಧಿ ಕಡಿತಗೊಳಿಸಲಾಗುವುದು. ಆರ್ಥಿಕ ಪರಿಸ್ಥಿತಿ ಸರಿ ಇಲ್ಲದಿರುವ ಕಾರಣದಿಂದ ಹಾಗೂ ಇನ್ನೂ 8ನೇ ತರಗತಿಗಳು ಪುನರಾರಂಭ ಆಗಿಲ್ಲದಿರುವುದರಿಂದ ಈ ಸಾಲಿನಲ್ಲಿ ಸೈಕಲ್ ವಿತರಣೆ ಸಾಧ್ಯತೆ ಕಡಿಮೆ ಇದೆ. ಪ್ರಾಥಮಿಕ ಶಾಲೆಗಳು ಪ್ರಾರಂಭವಾದ ನಂತರ ಕ್ಷೀರಭಾಗ್ಯ ಯೋಜನೆ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು. 9 ಹಾಗೂ 10ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ವಿತರಣೆ ಸಂಬಂಧ, ಕೇಂದ್ರದಿಂದ ಇನ್ನೂ ಮಾರ್ಗಸೂಚಿ ಬಂದಿಲ್ಲ’ ಎಂದು ಪ್ರತಿಕ್ರಿಯಿಸಿದರು.

‘ಕಳೆದ ಸಾಲಿನಂತೆ ಆಯ್ದ ಸರ್ಕಾರಿ ಶಾಲೆಗಳಲ್ಲಿ ದ್ವಿ ಮಾಧ್ಯಮ (ಒಂದೇ ಪಠ್ಯಪುಸ್ತಕದಲ್ಲಿ ಇಂಗ್ಲಿಷ್ ಹಾಗೂ ಕನ್ನಡ ಪಠ್ಯವೆರಡೂ ಇರಲಿದೆ) ಕಲಿಕೆ ಮುಂದುವರಿಯುತ್ತದೆ. ಗೋವಾದಲ್ಲಿನ ಎಸ್ಸೆಸ್ಸೆಲ್ಸಿ ಕನ್ನಡದ ವಿದ್ಯಾರ್ಥಿಗಳಿಗೆ ಅಲ್ಲಿಯೇ ಪರೀಕ್ಷೆ ನಡೆಸಲಾಗುವುದು’ ಎಂದು ಪ್ರತಿಕ್ರಿಯಿಸಿದರು.

ಕನ್ನಡ ಕಲಿಸುವುದು ಕಡ್ಡಾಯ

‘ಬೆಂಗಳೂರಿನ ಕೇಂದ್ರೀಯ ಶಾಲೆಯಿಂದ ಹಿಡಿದು ಶಾಲೆ ಯಾವುದೇ ಆಗಿರಬಹುದು. ಅಲ್ಲಿ ಕನ್ನಡವನ್ನು ಭಾಷೆಯಾಗಿ ಕಲಿಸಬೇಕು. ಇದು ಈ ನೆಲದ ಕಾನೂನು. ಅದನ್ನು ಯಾರೂ ಉಲ್ಲಂಘಿಸುವಂತಿಲ್ಲ’ ಎಂದು ಸುರೇಶ್‌ಕುಮಾರ್‌ ಸ್ಪಷ್ಟಪಡಿಸಿದರು.

‘ಇತರ ಮಾಧ್ಯಮದ ಶಾಲೆಗಳಲ್ಲಿ ಕನ್ನಡ ಕಲಿಸಲು ಶಿಕ್ಷಕರ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಎಲ್ಲೆಲ್ಲಿ ಕೊರತೆ ಇದೆ ಎಂಬ ವರದಿ ತೆಗೆದುಕೊಂಡಿದ್ದೇವೆ. ಗಡಿ ಭಾಗವಷ್ಟೇ ಅಲ್ಲ, ಎಲ್ಲಾ ಕಡೆಯೂ ಶಿಕ್ಷಕರ ಕೊರತೆ ಇದೆ. ಕೆಲವು ಕಡೆಗಳಲ್ಲಿ ವಿಶೇಷವಾಗಿ ನಗರ ಪ್ರದೇಶಗಳ ಶಾಲೆಗಳಲ್ಲಿ ಶಿಕ್ಷಕರ ಸಂಖ್ಯೆ ಹೆಚ್ಚಿದೆ. ಗಡಿಯ ಶಾಲೆಗಳಿಗೆ ಬರಲು ಶಿಕ್ಷಕರು ಸ್ವಲ್ಪ ಹಿಂಜರಿಯುತ್ತಿದ್ದಾರೆ. ಯಾವ್ಯಾವ ಶಾಲೆಯಲ್ಲಿ ಕೊರತೆ ಇದೆಯೋ ಅಲ್ಲಿಗೆ ಶಿಕ್ಷಕರನ್ನು ನೇಮಿಸಲಾಗುವುದು’ ಎಂದು ಹೇಳಿದರು.

‘1ನೇ ತರಗತಿಯಿಂದ ಉಳಿದ ಎಲ್ಲ ತರಗತಿಗಳನ್ನೂ ಆರಂಭಿಸುವಂತೆ ಬೇಡಿಕೆ ಕೇಳಿಬರುತ್ತಿದೆ. ವಿಶೇಷವಾಗಿ, ಗ್ರಾಮೀಣ ಭಾಗದಲ್ಲಿ ಮಕ್ಕಳು ಕಲಿಕೆಯಿಂದ ದೂರವಾಗುತ್ತಿದ್ದಾರೆ. ಹೀಗೆಯೇ ಮುಂದುವರಿದರೆ, ಅವರನ್ನು ಮತ್ತೆ ಕಲಿಕೆಯ ಮುಖ್ಯವಾಹಿನಿಗೆ ತರುವುದು ಕಷ್ಟವಾಗುತ್ತದೆ ಎಂಬ ಅಭಿಪ್ರಾಯವಿದೆ. ಹೀಗಾಗಿ, ಆರೋಗ್ಯ ಇಲಾಖೆಯ ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಚರ್ಚಿಸಿ, ಎಲ್ಲ ಶಾಲೆಗಳ ಪುನರಾರಂಭಕ್ಕೆ ಶೀಘ್ರವೇ ತೀರ್ಮಾನಿಸಲಾಗುವುದು’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು