ಮಂಗಳವಾರ, ಆಗಸ್ಟ್ 20, 2019
25 °C
ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಮಾಹಿತಿ

ಸಂತ್ರಸ್ತರ ಕುಟುಂಬಗಳಿಗೆ ‘ಪಡಿತರ ಕಿಟ್’

Published:
Updated:

ಬೆಳಗಾವಿ: ‘ಪರಿಹಾರ ಕೇಂದ್ರಗಳಲ್ಲಿರುವ ಪ್ರವಾಹ ಸಂತ್ರಸ್ತ ಕುಟುಂಬಗಳು ಸ್ವಯಂಪ್ರೇರಣೆಯಿಂದ ಮನೆಗಳಿಗೆ ವಾಪಸ್ ಹೋಗಲು ಮುಂದಾದರೆ ವಿಶೇಷ ಪಡಿತರ ಕಿಟ್ ನೀಡಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ತಿಳಿಸಿದರು.

ಗುರುವಾರ ತಹಶೀಲ್ದಾರರೊಂದಿಗೆ ನಡೆಸಿದ ವಿಡಿಯೊ ಸಂವಾದದಲ್ಲಿ ಈ ವಿಷಯ ತಿಳಿಸಿದರು.

‘ಸಂತ್ರಸ್ತ ಕುಟುಂಬಗಳಿಗೆ ಸಿದ್ಧಪಡಿಸಲಾಗಿರುವ ಪ್ರತಿ ರೇಷನ್ ಕಿಟ್‌ 10 ಕೆ.ಜಿ. ಅಕ್ಕಿ, ಒಂದು ಕೆ.ಜಿ. ತೊಗರಿಬೇಳೆ, 1 ಕೆ.ಜಿ.ಸಕ್ಕರೆ, 1 ಕೆ.ಜಿ. ಅಯೋಡಿನ್‌ಯುಕ್ತ ಉಪ್ಪು, ಒಂದು ಲೀಟರ್ ತಾಳೆಎಣ್ಣೆ ಮತ್ತು 5 ಲೀಟರ್ ಸೀಮೆ ಎಣ್ಣೆ ಒಳಗೊಂಡಿರುತ್ತದೆ. ಪ್ರವಾಹ ಪರಿಸ್ಥಿತಿ ಸುಧಾರಿಸಿರುವ ಗ್ರಾಮದ ಜನರು ತಾವಾಗಿಯೇ ತೆರಳಲು ಮುಂದಾದರೆ ಇದನ್ನು ಕೊಡಲಾಗುವುದು’ ಎಂದರು.

ಮಾನವೀಯತೆ ತೋರಿ: ‘ಕಿಟ್ ವಿತರಣೆ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಸದಸ್ಯರನ್ನು ಆಹ್ವಾನಿಸುವುದು ಕಡ್ಡಾಯ. ತಾಲ್ಲೂಕುವಾರು ಕಿಟ್‌ಗಳ ಬೇಡಿಕೆ ಬಗ್ಗೆ ಮಾಹಿತಿ ನೀಡಿದರೆ ಒದಗಿಸಲಾಗುವುದು’ ಎಂದು ಹೇಳಿದರು.

‘ಮನೆ, ಕುಸಿತ ಹಾಗೂ ಮೂಲಸೌಕರ್ಯಗಳ ಹಾನಿ ಸೇರಿದಂತೆ ಪ್ರವಾಹದಿಂದ ಉಂಟಾಗಿರುವ ಹಾನಿಯ ಬಗ್ಗೆ ಮಾಹಿತಿ ಒದಗಿಸಲು ಸರ್ಕಾರ ನೀಡಿರುವ ನಿಗದಿತ ನಮೂನೆಯನ್ನೇ ಬಳಸಬೇಕು. ಮನೆ ಕುಸಿತದ ಬಗ್ಗೆ ವರದಿ ನೀಡುವಾಗ ಮಾನವೀಯತೆ ತೋರಬೇಕು’ ಎಂದರು.

ಸ್ವಚ್ಛಗೊಳಿಸಿ: ‘ಗ್ರಾಮ ಪಂಚಾಯ್ತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳವರು ಲಭ್ಯ ಅನುದಾನ ಬಳಸಿಕೊಂಡು ಕೂಡಲೇ ಸ್ವಚ್ಛತೆ ಕೈಗೊಳ್ಳಬೇಕು. ಸಂಗ–ಸಂಸ್ಥೆಗಳ ಸಹಯೋಗ ಪಡೆಯಬೇಕು. ಅನೇಕ ದಿನಗಳ ಕಾಲ ನೀರು ನಿಂತಿದ್ದರಿಂದ ರೋಗರುಜಿನಗಳು ಹರಡುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ಜನರು ಗ್ರಾಮಗಳಿಗೆ ಹಿಂದಿರುಗುವ ಮುಂಚೆ ಸ್ವಚ್ಛತಾ ಕೆಲಸ ನಡೆಸಬೇಕು’ ಎಂದು ತಾಕೀತು ಮಾಡಿದರು.

‘ಪ್ರತಿ ತಾಲ್ಲೂಕಿನಲ್ಲಿ ಸ್ವೀಕರಿಸಲಾಗುವ ಪರಿಹಾರ ಸಾಮಗ್ರಿಗಳ ದಾಸ್ತಾನು ಕೊಠಡಿಗಳಿಗೆ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು. ಸಾಮಗ್ರಿಗಳ ವಿವರಗಳನ್ನು ದಾಸ್ತಾನು ವಹಿಗಳಲ್ಲಿ ನಮೂದಿಸಬೇಕು’ ಎಂದು ಜಿಲ್ಲಾ ನೋಡಲ್ ಅಧಿಕಾರಿಯೂ ಆಗಿರುವ ಹೆಚ್ಚುವರಿ ಪ್ರಾದೇಶಿಕ ಆಯುಕ್ತ ಶಶಿಧರ ಕುರೇರ ತಿಳಿಸಿದರು.

‘ಪ್ರವಾಹ ಸಂಬಂಧಿಸಿದ ಕೆಲಸಗಳಲ್ಲಿ ನಿರ್ಲಕ್ಷ್ಯ ತೋರುವ ಹಾಗೂ ನೋಡಲ್ ಅಧಿಕಾರಿಗಳಿಗೆ ಸಹಕರಿಸಿದ ಅಧಿಕಾರಿಗಳನ್ನು ಅಮಾನತುಗೊಳಿಸಲಾಗುವುದು. ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸುವ ಉದ್ದೇಶದಿಂದ ಹಿರಿಯ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಅವರು ಕಡ್ಡಾಯವಾಗಿ ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಬೇಕು. ತಹಶೀಲ್ದಾರರ ಕೋರಿಕೆ ಮೇರೆಗೆ ಪರಿಹಾರ ನೀಡಲು ಈಗಾಗಲೇ ಅನುದಾನ ಕೊಡಲಾಗಿದೆ. ಇನ್ನೂ ಅಗತ್ಯವಿದ್ದರೆ ತಕ್ಷಣವೇ ಬಿಡುಗಡೆ ಮಾಡಲಾಗುವುದು’ ಎಂದು ಹೇಳಿದರು.

ಜಿಲ್ಲಾ ಪಂಚಾಯ್ತಿ ಸಿಇಒ ಡಾ.ಕೆ.ವಿ. ರಾಜೇಂದ್ರ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎಚ್‌.ಬಿ. ಬೂದೆಪ್ಪ, ನಗರಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಉಪ ವಿಭಾಗಾಧಿಕಾರಿ ಡಾ.ಕವಿತಾ ಯೋಗಪ್ಪನವರ ಇದ್ದರು.

Post Comments (+)