ಬೆಳಗಾವಿ: ₹20 ಕೋಟಿ ತಲೆದಂಡದಿಂದ ತಪ್ಪಿಸಿಕೊಳ್ಳಲು, ಕಾಮಗಾರಿಗೆ ಬಳಸಿಕೊಂಡ ಭೂಮಿಯನ್ನು ಮರಳಿ ನೀಡಲು ಮಹಾನಗರ ಪಾಲಿಕೆ ಮುಂದಾಗಿದೆ. ಇದಕ್ಕೆ ಭೂ ಮಾಲೀಕರೂ ಒಪ್ಪಿಕೊಂಡಿದ್ದಾರೆ. ಇದರ ಮೂಲಕ ಪಾಲಿಕೆ ಅಧಿಕಾರಿಗಳು, ಜನಪ್ರತಿನಿಧಿಗಳೂ ಕೂಡ ಹೊಸ ‘ಪಾಠ’ ಕಲಿತಂತಾಗಿದೆ.
ಹೈಕೋರ್ಟ್‌ನ ಧಾರವಾಡ ಪೀಠದಲ್ಲಿ ಈ ಕುರಿತು ಬುಧವಾರ ನಡೆದ ವಿಚಾರಣೆ ವೇಳೆ ಎರಡೂ ಕಡೆಯ ಕಕ್ಷಿಗಾರರು ಒಪ್ಪಿಗೆ ಸೂಚಿಸಿದರು.
ಈ ವ್ಯಾಜ್ಯ ಗುರುವಾರ (ಸೆ.12) ನಿಗದಿಯಾಗಿತ್ತು. ಆದರೆ, ಒಂದು ದಿನ ಮುಂಚಿತವಾಗಿಯೇ ವಿಷಯ ಎತ್ತಿಕೊಂಡ ನ್ಯಾಯಮೂರ್ತಿಗಳು ಎರಡೂ ಕಡೆಯಿಂದ ದೃಢವಾದ ನಿರ್ಧಾರ ಬಯಸಿದರು. ಮುಂದಿನ ವಾರ ಇದರ ಅಂತಿಮ ತೀರ್ಪು ಕಾಯ್ದಿರಿಸಿದರು. ಸದ್ಯ ಎರಡೂ ಕಡೆಯಿಂದ ವಾದ– ಪ್ರತಿವಾದಗಳು ಮುಗಿದಿವೆ. ತೀರ್ಪು ಮಾತ್ರ ಬಾಕಿ ಇದೆ.
ಪ್ರಕರಣ ಏನು?: ನಗರದ ಎಸ್‌ಪಿಎಂ ರಸ್ತೆಯಲ್ಲಿರುವ ಬ್ಯಾಂಕ್ ಆಫ್ ಇಂಡಿಯಾದಿಂದ ಹಳೇ ಪಿ.ಬಿ. ರಸ್ತೆಯವರೆಗೆ ದ್ವಿಮುಖ ರಸ್ತೆ ನಿರ್ಮಾಣಕ್ಕಾಗಿ 2021ರಲ್ಲಿ 23 ಗುಂಟೆ ಜಾಗ ಬಳಸಿಕೊಳ್ಳಲಾಗಿತ್ತು. ಆದರೆ, ಭೂ ಸ್ವಾಧೀನ ಪ್ರಕ್ರಿಯೆಗೂ ಮುನ್ನವೇ ಕಾಮಗಾರಿ ಮಾಡಲಾಗಿದೆ. ಬಳಿಕ ದರ ನಿಗದಿ ಮಾಡಲಾಗಿದೆ. ಈಗ ಪರಿಹಾರ ನೀಡಿ ಸ್ವಾಧೀನ ಪ್ರಕ್ರಿಯೆ ಮುಗಿಸಬೇಕಾಗಿದೆ.
ಭೂ ಮಾಲೀಕ ಬಾಳಾಸಾಹೇಬ ಪಾಟೀಲ ಅವರಿಗೆ ಪ್ರತಿ ಚದರ್ ಅಡಿಗೆ ₹3,500ಕ್ಕೂ ಹೆಚ್ಚು ಪರಿಹಾರ ಕೊಡಬೇಕು ಎಂದು ಆಗಿನ ಭೂಸ್ವಾಧೀನ ಅಧಿಕಾರಿ ನಿಗದಿ ಮಾಡಿದ್ದರು. ಅದರ ಪ್ರಕಾರ ₹20 ಕೋಟಿ ಕೊಡಬೇಕಾಗಿತ್ತು.
ಈ ಎಲ್ಲ ಬೆಳವಣಿಗೆಗಳು ಪಾಲಿಕೆ ಆಡಳಿತ ಮಂಡಳಿ ಇಲ್ಲದ ಸಂದರ್ಭದಲ್ಲಿ, ಆಡಳಿತಾಧಿಕಾರಿ ನೇತೃತ್ವದಲ್ಲಿ ನಡೆದಿವೆ. ಹೀಗಾಗಿ, ಪರಿಹಾರ ಮೊತ್ತದ ಕುರಿತು ಈಗ ಪರ– ವಿರೋಧ ಚರ್ಚೆಗಳು ಶುರುವಾದವು. ಏತನ್ಮಧ್ಯೆ, ಭೂ ಮಾಲೀಕ ಬಾಳಾಸಾಹೇಬ ಧಾರವಾಡ ಹೈಕೋರ್ಟ್ ಮೊರೆ ಹೋದರು. ಮುಂಚಿತವಾಗಿ ಅಧಿಕಾರಿಗಳೇ ಒಪ್ಪಿಕೊಂಡಿದ್ದರಿಂದ ₹20 ಕೋಟಿ ಪರಿಹಾರ ಕೊಡಬೇಕಾಗುತ್ತದೆ ಎಂದು ಹೈಕೋರ್ಟ್ ಪೀಠ ಆದೇಶ ನೀಡಿತ್ತು.
ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದ ಪಾಲಿಕೆ ಅಧಿಕಾರಿಗಳು, ಬುಧವಾರ ಪೀಠದ ಮುಂದೆ ಹಾಜರಾದರು. ರಸ್ತೆಗೆ ಬಳಸಿಕೊಂಡ ಭೂಮಿಯನ್ನು ಮರಳಿ ಅದರ ಮಾಲೀಕರಿಗೇ ನೀಡುತ್ತೇವೆ ಎಂದು ಹೇಳಿಕೆ ನೀಡಿದರು. ಇದಕ್ಕೆ ಭೂ ಮಾಲೀಕರೂ ಸಮ್ಮಿತಿ ಸೂಚಿಸಿದರು ಎಂದು ಪಾಲಿಕೆ ಮೂಲಗಳು ತಿಳಿಸಿವೆ.
ಮುಂದಿನ ಗೊಂದಲ ಏನು?: ಕಾಮಗಾರಿ ಮಾಡಲಾದ ಜಾಗವನ್ನು ಮರಳಿ ಮಾಲೀಕರಿಗೆ ನೀಡಬೇಕೆಂದರೂ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಚರ್ಚಿಸಬೇಕೆ– ಬೇಡವೇ ಎಂಬ ಸವಾಲು ಈಗ ತಲೆದೋರಿದೆ.
ಇದೇ ಸಂಬಂಧ ಕಳೆದ ತಿಂಗಳು ನಡೆದ ಕೌನ್ಸಿಲ್ ಸಭೆಯಲ್ಲಿ ಆಡಳಿತ ಗುಂಪಿನ ಬಿಜೆಪಿ ಹಾಗೂ ವಿರೋಧ ಪಕ್ಷವಾದ ಕಾಂಗ್ರೆಸ್ ಮಧ್ಯೆ ತೀವ್ರ ವಾಗ್ವಾದ ಉಂಟಾಗಿತ್ತು.
ಪರಿಹಾರ ಕಡ್ಡಾಯವಾಗಿ ಕೊಡಲೇಬೇಕು ಎಂದು ಶಾಸಕ ಅಭಯ ಪಾಟೀಲ ಹಾಗೂ ಬಿಜೆಪಿ ಸದಸ್ಯರು ಪಟ್ಟು ಹಿಡಿದಿದ್ದರು. ಮೇಯರ್ ಸವಿತಾ ಕಾಂಬಳೆ ಆದೇಶ ಹೊರಡಿಸಿದ್ದರು.
ಎಲ್ಲವನ್ನೂ ತಳ್ಳಿಹಾಕಿದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ‘ಈ ನಿರ್ಣಯ ಒಪ್ಪಿಕೊಳ್ಳುವುದಿಲ್ಲ. ಮರಳಿ ನ್ಯಾಯಾಲಯಕ್ಕೆ ಹೋಗುತ್ತೇವೆ. ಅಲ್ಲದೇ, ಜಿಲ್ಲಾಧಿಕಾರಿ ನೇತೃತ್ವದಲ್ಲಿ ತನಿಖೆ ಮಾಡಿಸುತ್ತೇವೆ’ ಎಂದಿದ್ದರು.
ಪಾಲಿಕೆ ಈಗಾಗಲೇ ರಾಜಕೀಯ ದಾಳಕ್ಕೆ ಸಿಕ್ಕು ನಲುಗುತ್ತಿದೆ. ಈಗ ಮತ್ತೆ ಕೌನ್ಸಿಲ್ ಸಭೆಯಲ್ಲಿ ಚರ್ಚೆ ಬಂದರೆ ಮತ್ತಷ್ಟು ‘ಬಿಸಿ’ ತಟ್ಟುವ ಸಾಧ್ಯತೆ ಹೆಚ್ಚಾಗಿದೆ ಎನ್ನುತ್ತಾರೆ ಕೆಲ ಸದಸ್ಯರು.
ಭೂ ಸ್ವಾಧೀನ ಕೈಗೊಳ್ಳುವಾಗ ಕಾಮಗಾರಿ ಮಾಡುವಾಗ ಅಧಿಕಾರಿಗಳು ಜನಪ್ರತಿನಿಧಿಗಳು ಎಚ್ಚರಿಕೆ ವಹಿಸಲೇಬೇಕು. ಇಲ್ಲದಿದ್ದರೆ ಇಂಥ ಪಜೀತಿಗೆ ಸಿಕ್ಕಿಕೊಳ್ಳಬೇಕಾಗುತ್ತದೆಅಶೋಕ ಚಂದರಗಿ ಅಧ್ಯಕ್ಷ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ
‘ದರೋಡೆ’ ಎಂದು ಎಚ್ಚರಿಸಿದ ಹೈಕೋರ್ಟ್!
‘ಭೂ ಸ್ವಾಧೀನ ಪ್ರಕ್ರಿಯೆ ಮುಗಿಸದೇ ಜಮೀನು ಬಳಸಿ ರಸ್ತೆ ಮಾಡಲು ಹೇಗೆ ಸಾಧ್ಯ? ಇದೊಂದು ದರೋಡೆಯೇ ಸರಿ’ ಎಂದು ಹೈಕೋರ್ಟ್‌ನ ಧಾರವಾಡ ಪೀಠ ಬೆಳಗಾವಿ ಮಹಾನಗರ ಪಾಲಿಕೆಗೆ ಚಾಟಿ ಬೀಸಿದೆ. ಬುಧವಾರ ಪ್ರಕರಣ ಕೈಗೆತ್ತಿಕೊಂಡ ನ್ಯಾಯಮೂರ್ತಿಗಳು ಪಾಲಿಕೆ ಅಧಿಕಾರಿಗಳ ನಡೆಯನ್ನು ‘ರಾಬರಿ’ ಎಂದರು. ‘ಕೇಳಿದಷ್ಟು ಪರಿಹಾರ ಕೊಡಿ ಇಲ್ಲವೇ ಜಾಗ ಮರಳಿ ಕೊಡಿ ಆದ ನಷ್ಟ ಭರಿಸಿಕೊಡಿ. ಇದಕ್ಕೆ ಸಂಬಂಧಿಸಿದಂತೆ ಪ್ರತಿಜ್ಞಾನ ಪತ್ರ ಬರೆದುಕೊಡಿ’ ಎಂದೂ ಸೂಚಿಸಿದರು. ಪಾಲಿಕೆ ಪರವಾಗಿ ಚೈತನ್ಯ ಮುನವಳ್ಳಿ ಹಾಗೂ ಭೂ ಮಾಲೀಕರ ಪರವಾಗಿ ಕೆ.ಎಲ್. ಪಾಟೀಲ ಅವರು ವಕಾಲತು ವಹಿಸಿದರು.
ಪಾಲಿಕೆ ಮುಂದಿನ ಆಯ್ಕೆಗಳೇನು?
* ಹೈಕೋರ್ಟ್ ಆದೇಶವನ್ನು ಚಾಚೂತಪ್ಪದೇ ಪಾಲಿಸುವುದು * ಅದೇ ಜಾಗವನ್ನು ಮತ್ತೊಮ್ಮೆ ನಿಯಮಾನುಸಾರ ಸ್ವಾಧೀನ ಮಾಡಿಕೊಂಡು ಪರಿಹಾರ ನೀಡುವುದು
* ಈಗ ಮಾಡಲಾದ 80 ಅಡಿ ಅಗಲದ ರಸ್ತೆ ಅಗೆದು ಮೊದಲಿನಿಂತೆ 30 ಅಡಿಗೆ ಸೀಮಿತ ಮಾಡುವುದು
* ಬಾಳಾಸಾಹೇಬ ಪಾಟೀಲ ಅವರ ಜಾಗದ ಹೊರತಾಗಿ ಬಲಬದಿಯಲ್ಲಿ ಇರುವ ಜಾಗ ಸ್ವಾಧೀನ ಮಾಡಿಕೊಳ್ಳುದುವುದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.