ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕೋಡಿ: ಬತ್ತಿದ ಜಲ ಮೂಲಗಳು, ಕಮರುತ್ತಿವೆ ಬೆಳೆಗಳು

ಒಣಗಿಹೋದ ಕೃಷ್ಣಾ, ದೂಧಗಂಗಾ ನದಿಗಳು, ಕುಡಿಯುವ ನೀರಿಗೂ ತಪ್ಪದ ಹಾಹಾಕಾರ
Published 27 ಜೂನ್ 2023, 4:25 IST
Last Updated 27 ಜೂನ್ 2023, 4:25 IST
ಅಕ್ಷರ ಗಾತ್ರ

ಸುಧಾಕರ ತಳವಾರ

ಚಿಕ್ಕೋಡಿ: ಹಿರಿಹೊಳೆ ಕೃಷ್ಣೆ ಮತ್ತು ದೂಧಗಂಗಾ ನದಿಗಳು ಹರಿಯುವ ತಾಲ್ಲೂಕಿನಲ್ಲಿ ಬರದ ಛಾಯೆ ಆವರಿಸಿದೆ. ಮಳೆಯ ವಿಳಂಬದಿಂದಾಗಿ ಜೀವಜಲ ಮೂಲಗಳು ಬತ್ತಿ ಹೋಗುತ್ತಿದ್ದು, ಜನ ಜಾನುವಾರುಗಳ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಸುಡು ಬಿಸಿಲಿನಿಂದಾಗಿ ಬೆಳೆಗಳು ಒಣಗುತ್ತಿವೆ.

ಬಹು ನಿರೀಕ್ಷಿತ ಮೃಗಶಿರ ಮಳೆ ಕೈಕೊಟ್ಟಿದೆ. ಕೃಷಿಕರು ಮುಂಗಾರು ಬಿತ್ತನೆಗಾಗಿ ಭೂಮಿ ಸ್ವಚ್ಛಗೊಳಿಸಿ, ಆರಿದ್ರಾ ಮಳೆಯ ನಿರೀಕ್ಷೆಯಲ್ಲಿದ್ದಾರೆ. ವಡ್ರಾಳ, ಹಾಲಟ್ಟಿ, ವಡಗೋಲ, ಮೀರಾಪುರಹಟ್ಟಿ ಸೇರಿದಂತೆ ತಾಲ್ಲೂಕಿನ ಬಹುತೇಕ ಕೆರೆಕಟ್ಟೆಗಳು ಒಣಗಿ ಹೋಗಿವೆ. ಕೃಷ್ಣಾ ಮತ್ತು ದೂಧಗಂಗಾ ನದಿಗಳಲ್ಲಿ ಕುಡಿಯುವ ನೀರಿಗಾಗಿ ಮಾತ್ರ ಸಾಲುವಷ್ಟು ನೀರು ಉಳಿದಿದೆ. ಈ ನದಿ ಪಾತ್ರಗಳಲ್ಲೂ ಬೆಳೆಗಳಿಗೆ ನೀರು ಸಿಗುತ್ತಿಲ್ಲ. ಕಬ್ಬು ಸೇರಿದಂತೆ ಇತರೆ ಬೆಳೆಗಳೂ ಒಣಗಿ ರವದಿಯಂತಾಗಿವೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆದ ಬೆಳೆಗಳು ಕಮರುತ್ತಿರುವುದನ್ನು ಕಂಡು ಕೃಷಿಕ ಮರಗುತ್ತಿದ್ದಾನೆ. ಜಾನುವಾರುಗಳಿಗೆ ಹಸಿ ಮೇವಿನ ಸಮಸ್ಯೆ ಎದುರಾಗಿದ್ದು, ರೈತರು ಒಣಗಿದ ಬೆಳೆಗಳನ್ನೇ ಕಟಾವು ಮಾಡಿ ಜಾನುವಾರುಗಳಿಗೆ ಹಾಕುತ್ತಿದ್ದಾರೆ.

ತಾಲ್ಲೂಕಿನ ನಾಗರಮುನ್ನೋಳಿ ಹೋಬಳಿ ಮತ್ತು ಹಲವು ಗ್ರಾಮಗಳು ಮಳೆಯನ್ನೇ ಆಶ್ರಯಿಸಿವೆ. ಪ್ರಸಕ್ತ ವರ್ಷ ಜೂನ್ ಅಂತ್ಯದವರೆಗೆ ವಾಡಿಕೆಗಿಂತ ಶೇ 96.2 ರಷ್ಟು ಮಳೆ ಕೊರತೆಯಾಗಿದೆ. ಒಂದು ವೇಳೆ ಸರ್ಕಾರದ ತೆರೆದ ಬಾವಿ, ಬಹುಗ್ರಾಮ ಕುಡಿಯುವ ನೀರಿನ ಸರಬರಾಜು ಯೋಜನೆ ಸೇರಿದಂತೆ ವಿವಿಧ ಜಲಮೂಲಗಳು ಬಂದ್ ಆದ್ದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವರದಿ ಆಧರಿಸಿ ಒಟ್ಟು 22 ತೋಟಪಟ್ಟಿಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ತಹಶೀಲ್ದಾರ ಚಿದಂಬರ ಕುಲಕರ್ಣಿ ತಿಳಿಸಿದ್ದಾರೆ.

‘ಮಳೆಯ ಕೊರತೆಯಿಂದಾಗಿ ಬರಗಾಲ ಪರಿಸ್ಥಿತಿ ನಿರ್ಮಾಣವಾಗಿದೆ. ಜಲ ಮೂಲಗಳು ಬತ್ತಿ ಹೋದ ಕಾರಣ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉದ್ಬವಿಸುತ್ತಿದೆ. ಸರ್ಕಾರ ಕೂಡಲೇ ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಿ, ಸೂಕ್ತ ಕ್ರಮ ಜರುಗಿಸಬೇಕು. ಪ್ರತಿ ಮನೆಗೂ ಟ್ಯಾಂಕರ್ ಮೂಲಕ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಒದಗಿಸಬೇಕು' ಎಂದು ಕರ್ನಾಟಕ ರಾಜ್ಯ ರೈತ ಸಂಘದ ವಕ್ತಾರ ತ್ಯಾಗರಾಜ್ ಕದಂ ಆಗ್ರಹಿಸುತ್ತಾರೆ.

ಸಂಭವನೀಯ ನೆರೆ ಎದುರಿಸಲು ಸನ್ನದ್ಧ: ಜಿಲ್ಲೆಯಲ್ಲಿ ಬರವಿದ್ದರೂ ಮಹಾರಾಷ್ಟ್ರದಲ್ಲಿ ಸುರಿಯುವ ಮಳೆಯ ಕಾರಣ ಪ್ರವಾಹ ಪರಿಸ್ಥಿತಿ ತಲೆದೋರುವ ಆತಂಕವಿದೆ.

ತಾಲ್ಲೂಕಿನಲ್ಲಿ ಕೃಷ್ಣಾ ಮತ್ತು ದೂಧಗಂಗಾ ನದಿಗಳಿಗೆ ಎದುರಾಗಬಹುದಾದ ಸಂಭವಮೀಯ ನೆರೆ ಹಾವಳಿ ಹಾಗೂ ಮಳೆಯಾಶ್ರಿತ ಪ್ರದೇಶಗಳಲ್ಲಿ ಸಂಭವನೀಯ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ತಾಲ್ಲೂಕು ಆಡಳಿತ ಸಕಲ ಸಿದ್ದತೆಗಳನ್ನು ಕೈಗೊಂಡಿದೆ. ಇಲ್ಲಿನ ತಹಶೀಲ್ದಾರ, ಉಪವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮೂರು ಪ್ರತ್ಯೇಕ ಸಭೆಗಳನ್ನು ನಡೆಸಿ ಅಗತ್ಯ ಮುಂಜಾಗ್ರತೆ ಕೈಗೊಳ್ಳಲಾಗಿದೆ. ತಾಲ್ಲೂಕಿನಲ್ಲಿ ಕೃಷ್ಣಾ ಮತ್ತು ದೂಧಗಂಗಾ ನದಿಗಳಿಗೆ ಪ್ರವಾಹ ಎದುರಾದ್ದಲ್ಲಿ 11 ಗ್ರಾಮಗಳು ಬಾಧಿತವಾಗಲಿದ್ದು, ಆ ಗ್ರಾಮಗಳಲ್ಲಿ ತಲಾ ಒಬ್ಬ ನೊಡಲ್ ಅಧಿಕಾರಿಯನ್ನು ನೇಮಕ ಮಾಡಲಾಗಿದೆ.

ಸಮುದಾಯ ಭವನ, ಸರ್ಕಾರಿ ಶಾಲೆಗಳು ಸೇರಿದಂತೆ 11 ಕಡೆಗಳಲ್ಲಿ ಕಾಳಜಿ ಕೇಂದ್ರಗಳನ್ನು ಸ್ಥಾಪಿಸಲು ಸ್ಥಳಗಳನ್ನು ಗುರುತು ಮಾಡಲಾಗಿದೆ. ತುತರ್ು ಪರಿಸ್ಥಿತಿಯಲ್ಲಿ ಸಂತ್ರಸ್ಥರ ಸ್ಥಳಾಂತರಕ್ಕಾಗಿ 12 ಸರ್ಕಾರಿ ಮತ್ತು 2 ಖಾಸಗಿ ಬೋಟಗಳನ್ನು ಸಜ್ಜುಗೊಳಿಸಲಾಗಿದೆ. ಆಯಾ ಗ್ರಾಮಗಳ್ಲಿ ಟ್ಯಾಕ್ಟರ್, ಕ್ರೂಸರ್, ಜೆಸಿಬಿ, ಬುಲ್ಡೋಜರ್ ಹೊಂದಿರುವವರ ವಿವರ ಸಂಗ್ರಹಿಸಲಾಗಿದೆ. ನುರಿತ ಈಜುಗಾರರು, ಹಾವು ಹಿಡಿಯುವವರನ್ನು ಗೊತ್ತುಪಡಿಸಲಾಗಿದೆ ಎಂದು ತಾಲ್ಲೂಕು ಆಡಳಿತ ತಿಳಿಸಿದೆ.

20ಸಿಕೆಡಿ2 ಚಿಕ್ಕೋಡಿ ತಾಲ್ಲೂಕಿನ ವಡಗೋಲ ಬಳಿ ಒಣಗಿರುವ ಕಬ್ಬು ಬೆಳೆ.
20ಸಿಕೆಡಿ2 ಚಿಕ್ಕೋಡಿ ತಾಲ್ಲೂಕಿನ ವಡಗೋಲ ಬಳಿ ಒಣಗಿರುವ ಕಬ್ಬು ಬೆಳೆ.
ನೆರೆ– ಬರ ಪರಿಸ್ಥಿತಿ ಎದುರಿಸಲು ತಾಲ್ಲೂಕು ಆಡಳಿ ಸಿದ್ದತೆ ಮಾಡಿದೆ. ಜನ ಜಾನುವಾರು ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಹಾನಿಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ‌.ಚಿದಂಬರ ಕುಲಕರ್ಣಿ ತಹಶೀಲ್ದಾರ್‌ ಚಿಕ್ಕೋಡಿ
ಚಿದಂಬರ ಕುಲಕರ್ಣಿ ತಹಶೀಲ್ದಾರ್‌ ಚಿಕ್ಕೋಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT