ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಇಲ್ಲಗಳಿಂದ ಸೊರಗಿ ಹೋದ ಜಿಲ್ಲೆಯ ಕ್ರೀಡಾ ಕ್ಷೇತ್ರ

ಇರುವ ಸೌಲಭ್ಯಗಳು ಲೆಕ್ಕಕ್ಕುಂಟು ಆಟಕ್ಕಿಲ್ಲ ಎನ್ನುವಂತಿವೆ
Last Updated 28 ಆಗಸ್ಟ್ 2021, 19:30 IST
ಅಕ್ಷರ ಗಾತ್ರ

ಬೆಳಗಾವಿ: ಸರ್ಕಾರಿ ಜಿಲ್ಲಾ ಕೀಡಾಂಗಣವಿಲ್ಲ. ಪ್ರತಿಭೆಗಳಿದ್ದರೂ ಸೌಲಭ್ಯಗಳಿಲ್ಲ. ಕ್ರೀಡಾ ಶಾಲೆ ಇದ್ದರೂ ಕಾಯಂ ಕೋಚ್‌ಗಳಿಲ್ಲ. ಹುದ್ದೆಗಳನ್ನು ಭರ್ತಿ ಮಾಡಲು ಕಾಳಜಿ ವಹಿಸಿಲ್ಲ. ಕ್ರೀಡಾಪಟುಗಳಿಗೆ ಸೂಕ್ತ ಪ್ರೋತ್ಸಾಹವಿಲ್ಲ.

– ಹೀಗೆ ಹಲವು ಇಲ್ಲಗಳ ಕೊರತೆಯಿಂದಾಗಿ ಜಿಲ್ಲೆಯಲ್ಲಿನ ಕ್ರೀಡಾ ಕ್ಷೇತ್ರವು ಸೊರಗುತ್ತಿದೆ.

ಇಲ್ಲಿನ ನೆಹರೂ ನಗರದಲ್ಲಿ ಜಿಲ್ಲಾ ಕ್ರೀಡಾಂಗಣವಿದೆ. ಆದರೆ, ಆ ಜಾಗ ಸರ್ಕಾರದ್ದಲ್ಲ! ಕೆಎಲ್‌ಇ ಸಂಸ್ಥೆಯ ಜಾಗವನ್ನು ಲೀಸ್‌ಗೆ ಪಡೆದು ಅಭಿವೃದ್ಧಿಪಡಿಸಲಾಗಿದೆ. ಅಲ್ಲಿ ಸಿಂಥೆಟಿಕ್ ಟ್ರ್ಯಾಕ್ ಇದೆ. ಕ್ರೀಡಾಕೂಟಗಳೊಂದಿಗೆ ರಾಜಕೀಯ ಮೊದಲಾದ ಸಮಾವೇಶಗಳಿಗೂ ಅದು ಆಗಾಗ ವೇದಿಕೆ ಆಗುತ್ತಿದೆ! ಲೀಸ್ ಅವಧಿಯು 2026ಕ್ಕೆ ಮುಗಿಯಲಿದ್ದು, ನಂತರ ಖಾಲಿ ಮಾಡಬೇಕಾದೀತು. ಆದರೂ ಸ್ವಂತ ಕ್ರೀಡಾಂಗಣ ನಿರ್ಮಾಣಕ್ಕೆ ಸರ್ಕಾರ ಕ್ರಮ ಕೈಗೊಂಡಿಲ್ಲ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳ ಭರವಸೆಗಳು ಕೇವಲ ಹೇಳಿಕೆಯಾಗಿಯೇ ಉಳಿದಿವೆ.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಸರ್ಕಾರಿ ಕ್ರೀಡಾ ಶಾಲೆ ಹಾಗೂ ವಸತಿನಿಲಯ ಇದೆ. ಇಲ್ಲಿ ವಿವಿಧ ಕ್ರೀಡೆಯ ತರಬೇತಿ ಪಡೆಯುತ್ತಿರುವ 150 ಕ್ರೀಡಾಪಟುಗಳಿದ್ದಾರೆ. ಆದರೆ, ಅವರನ್ನು ಸಜ್ಜುಗೊಳಿಸಲು ಕಾಯಂ ಕೋಚ್‌ಗಳಿಲ್ಲ. ಇರುವ 12 ಮಂದಿಯೂ ಕಾಯಂ ಕೋಚ್‌ಗಳಲ್ಲ. ಇತ್ತೀಚೆಗೆ ಬಾಲಕಿಯರ ವಸತಿನಿಲಯವನ್ನೂ ಆರಂಭಿಸಲಾಗಿದೆ. ಅದರ ಉದ್ಘಾಟನೆಗೆ ಕಾಲ ಕೂಡಿ ಬಂದಿಲ್ಲ.

ಅಭಿವೃದ್ಧಿ ಕುಂಠಿತ:ಪ್ರತಿಭೆಗಳಿದ್ದರೂ ಸಮರ್ಪಕ ಹಾಗೂ ಗುಣಮಟ್ಟದ ತರಬೇತಿಯ ಕೊರತೆಯಿಂದ ಕ್ರೀಡಾಪಟುಗಳು ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತಿಲ್ಲದ ಸ್ಥಿತಿ ಜಿಲ್ಲೆಯಲ್ಲಿದೆ. ಇಲಾಖೆಯ ಚಟುವಟಿಕೆಗಳನ್ನು ಮುನ್ನಡೆಸಲು ಸಾರಥಿಯ ಹುದ್ದೆಯೇ ಖಾಲಿ ಇದೆ. 2018ರಿಂದ ಪ್ರಭಾರ ಕೊಡಲಾಗಿದೆ. ಆ ಅಧಿಕಾರಿ ತನ್ನ ಇಲಾಖೆಯ ಕೆಲಸಗಳೊಂದಿಗೆ ಹೆಚ್ಚುವರಿಯಾಗಿ ಕ್ರೀಡಾ ಇಲಾಖೆಯನ್ನೂ ನೋಡಿಕೊಳ್ಳುವುದು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಅಭಿವೃದ್ಧಿ ಕಾರ್ಯಗಳು ಕುಂಟುತ್ತಿವೆ.

ಕಣಬರ್ಗಿ ರಸ್ತೆಯಲ್ಲಿ ಕೆಎಸ್‌ಸಿಎ ಮೈದಾನಕ್ಕೆ ಹೊನಲು ಬೆಳಕಿನ ವ್ಯವಸ್ಥೆ ಮಾಡಿಕೊಡಬೇಕು ಮತ್ತು ಅಲ್ಲಿ ಅಂತರರಾಷ್ಟ್ರೀಯ ಪಂದ್ಯಗಳು ನಡೆಯುವಂತೆ ನೋಡಿಕೊಳ್ಳಬೇಕು ಎಂಬ ಬೇಡಿಕೆ ಇದೆ. ಉಳಿದ ಮೈದಾನಗಳು, ಅಂಕಣಗಳು ಖಾಸಗಿಯವು. ಈ ಭಾಗದಲ್ಲಿ ಕುಸ್ತಿ ಜನಪ್ರಿಯ. ಆದರೆ, ಈ ಗ್ರಾಮೀಣ ಕ್ರೀಡೆ ಉಳಿಸಿಕೊಳ್ಳಲು ಯೋಜನೆಗಳಿಲ್ಲ. ಸುಸಜ್ಜಿತ ಅಖಾಡಗಳು ತಲೆ ಎತ್ತಿಲ್ಲ. ಗರಡಿ ಮನೆಗಳು ಕೂಡ ಪುನಶ್ಚೇತನಕ್ಕೆ ಕಾಯುತ್ತಿವೆ.

ನಗರದಲ್ಲಿರುವ ಕ್ರೀಡಾ ಶಾಲೆಯಲ್ಲಿ ಕುಸ್ತಿ, ಜುಡೋ ತರಬೇತಿಗೆ ಕ್ರೀಡಾಂಗಣವಿದೆ. ಅಲ್ಲಿ ಕುಸ್ತಿ ಅಭ್ಯಾಸ ಮಾಡುವ ಹೊರಗಿನವರಿಗೆ ಸಂಜೆ ವೇಳೆ ಸಮಯ ನಿಗದಿಪಡಿಸಲಾಗಿದೆ. ಉಳಿದಂತೆ, ಬ್ಯಾಡ್ಮಿಂಟನ್, ಶಟಲ್‌ ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್ ಮೊದಲಾದವುಗಳ ಅಭ್ಯಾಸಕ್ಕೆ ಒಳಾಂಗಣ ಕ್ರೀಡಾಂಗಣವಿಲ್ಲ. ಫುಟ್‌ಬಾಲ್‌ ಆಡುವವರಿದ್ದಾರೆ; ಆದರೆ, ಸೂಕ್ತ ಮೈದಾನವಿಲ್ಲ.

ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲೂ ಕ್ರೀಡಾಂಗಣಗಳಿಲ್ಲ. ಇರುವಲ್ಲಿ ಸೌಲಭ್ಯಗಳಿಲ್ಲದೆ ಅವು ‘ಲೆಕ್ಕಕ್ಕುಂಟು ಆಟಕ್ಕಿಲ್ಲ’ ಎನ್ನುವಂತಾಗಿವೆ. ಕೋವಿಡ್ ಪರಿಸ್ಥಿತಿಯು ಕ್ರೀಡಾಕೂಟಗಳ ಆಯೋಜನೆ, ಅಭ್ಯಾಸಕ್ಕೆ ತೊಡಕಾಗಿ ಪರಿಣಮಿಸಿದೆ.

ನಿರ್ವಹಣೆಯೇ ಇಲ್ಲ!
ನಗರಪಾಲಿಕೆಯಿಂದ ಹನುಮಾನ್‌ನಗರದಲ್ಲಿ ವಿವಿಧ ಕ್ರೀಡಾ ಮೈದಾನಗಳನ್ನು ನಿರ್ಮಿಸಲಾಗಿದೆ. ಆದರೆ, ಅಲ್ಲಿ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ. ಮೈದಾನಗಳಲ್ಲಿ ಗಿಡ–ಗಂಟಿಗಳು ಬೆಳೆದು ನಿಂತಿವೆ. ಬಾಕ್ಸೈಟ್‌ ರಸ್ತೆಯಲ್ಲಿ ಹನುಮಾನ್‌ ನಗರದಲ್ಲಿ ಅಭಿವೃದ್ಧಿಪಡಿಸಿರುವ ಉದ್ಯಾನದಲ್ಲಿ ಈಜುಕೊಳ ನಿರ್ಮಿಸಲಾಗಿದೆ. ಆದರೆ, ಅದು ನೀರನ್ನೇ ಕಂಡಿಲ್ಲ.

ಕಾಲೇಜು ರಸ್ತೆಯಲ್ಲಿರುವ ಸರ್ದಾರ್‌ ಶಾಲೆಯ ಮೈದಾನವನ್ನು ಈಚೆಗೆ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಕ್ರಿಕೆಟ್‌ ಮೈದಾನವಾಗಿ ಅಭಿವೃದ್ಧಿಪಡಿಸಲಾಗಿದೆ. ಫ್ಲಡ್‌ಲೈಟ್ ವ್ಯವಸ್ಥೆ ಮಾಡಲಾಗಿದೆ. ಆದರೆ, ಒಂದು ಬದಿಯಲ್ಲಿ ತ್ಯಾಜ್ಯವನ್ನು ತಂದು ಹಾಕುತ್ತಿರುವುದನ್ನು ತಡೆಯುವುದಕ್ಕೆ ವ್ಯವಸ್ಥೆಯೇ ಇಲ್ಲದಂತಾಗಿದೆ. ಮಳೆ ನೀರು ಸರಾಗವಾಗಿ ಹರಿಯುವುದಕ್ಕೆ ವ್ಯವಸ್ಥೆ ಮಾಡಿಲ್ಲ. ಜೋರು ಮಳೆಯಾದಾಗ ಈ ಆವರಣ ಕೆರೆಯಂತಾಗುತ್ತದೆ. ಆಗಾಗ ವಾಹನಗಳ ನಿಲುಗಡೆ ತಾಣವನ್ನಾಗಿಯೂ ಮಾಡಿಕೊಳ್ಳಲಾಗುತ್ತಿದೆ.

ಮಹಾನಗರ ಪಾಲಿಕೆಯಿಂದ ಆಶೋಕನಗರ ಜೋಡಿರಸ್ತೆ ಬದಿಯಲ್ಲಿ ನಿರ್ಮಿಸಿರುವ ಶಿವಾಜಿನಗರ, ಅಶೋಕ ನಗರ, ವೀರಭದದ್ರ ನಗರ, ರಾಮನಗರ, ಶಿಬಬಸವನಗರ ಹಾಗೂ ಶ್ರೀನಗರ ಭಾಗದವರಿಗೆ ಅನುಕೂಲ ಆಗಲೆಂದು ಕ್ರೀಡಾ ಸಂಕೀರ್ಣ ನಿರ್ಮಿಸಲಾಗಿತ್ತು. ಫಿರೋಜ್‌ ಸೇಠ್ ಶಾಸಕರಾಗಿದ್ದಾಗ ಯೋಜನೆಗೆ ಚಾಲನೆ ನೀಡಲಾಗಿತ್ತು. ಜಿಮ್‌, ಈಜುಕೊಳ, ಬ್ಯಾಡ್ಮಿಂಟನ್‌ ಅಂಕಣ ಮಾಡಲಾಗಿದೆ. ಆದರೆ, 2019ರ ಜುಲೈನಲ್ಲಿ ಉದ್ಘಾಟನೆ ಆಗಿದ್ದರೂ ಬಳಕೆಗೆ ಬಾರದಂತಾಗಿದೆ. ಉಪಕರಣಗಳು ಹಾಳಾಗುತ್ತಿವೆ. ಕೋವಿಡ್ ಕಾರಣದಿಂದಲೂ ಮೈದಾನಗಳು ಬಳಕೆಗೆ ಬಾರದಂತಾಗಿವೆ.

***

ಯೋಜನೆ ರೂಪಿಸಲಾಗಿದೆ
ಬೆಳಗಾವಿ ತಾಲ್ಲೂಕಿನ ಯಳ್ಳೂರು ವ್ಯಾಪ್ತಿಯಲ್ಲಿರುವ 40 ಎಕರೆ ಸರ್ಕಾರಿ ಜಾಗದಲ್ಲಿ, ಮಹಾರಾಷ್ಟ್ರದ ಪುಣೆಯ ಬಾಲೆವಾಡಿ ಮಾದರಿಯಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಒಳಾಂಗಣ ಕ್ರೀಡಾಂಗಣ ನಿರ್ಮಿಸಲು ಯೋಜನೆ ರೂ‍ಪಿಸಲಾಗಿದೆ.
–ಅಭಯ ಪಾಟೀಲ, ಶಾಸಕ, ದಕ್ಷಿಣ ಮತ ಕ್ಷೇತ್ರ

***

ಖಾಸಗಿಯಾಗಿ ಅಭ್ಯಾಸ
ನಾವು ಅಭ್ಯಾಸ ಮಾಡುವುದಕ್ಕೆ ಸರ್ಕಾರಿ ಒಳಾಂಗಣ ಕ್ರೀಡಾಂಗಣವಿಲ್ಲ. ಖಾಸಗಿಯಾಗಿ ಕಲಿತು ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದೇನೆ.
–ಎ.ಪವಾರ, ಟೇಬಲ್ ಟೆನ್ನಿಸ್ ಆಟಗಾರ್ತಿ

***

ಪ್ರೋತ್ಸಾಹ ದೊರೆಯುತ್ತಿಲ್ಲ
ನೆರೆಯ ಮಹಾರಾಷ್ಟ್ರಕ್ಕೆ ಹೋಲಿಸಿದರೆ ಕುಸ್ತಿಗೆ ಸರಿಯಾಗಿ ಪ್ರೋತ್ಸಾಹ ದೊರೆಯುತ್ತಿಲ್ಲ. ಸಮರ್ಪಕವಾದ ಅಖಾಡ, ಗರಡಿ ಮನೆಗಳಿಲ್ಲ. ಇಲ್ಲಿ ವ್ಯವಸ್ಥೆ ಇಲ್ಲದಿದ್ದಕ್ಕೆ ಸಾಂಗ್ಲಿಯಲ್ಲಿ ತಾಲೀಮು ಮಾಡಿ, ಹಲವು ಸ್ಪರ್ಧೆಗಳಲ್ಲಿ ಪಾಲ್ಗೊಂಡು ಬಹುಮಾನ ಗಳಿಸಿದ್ದೇನೆ.
–ಅಡಿವೆಪ್ಪ ಕರಮಳನ್ನವರ, ಪೈಲ್ವಾನ್‌, ಇಟಗಿ, ಖಾನಾಪುರ ತಾಲ್ಲೂಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT