ಬುಧವಾರ, 6 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Asian Games | ಚೆಸ್‌ ವೈಯಕ್ತಿಕ ವಿಭಾಗ: ಭಾರತಕ್ಕೆ ಬರಿಗೈ

ನಾಲ್ಕನೇ ಸ್ಥಾನ ಪಡೆದ ಹಾರಿಕಾ
Published 27 ಸೆಪ್ಟೆಂಬರ್ 2023, 14:00 IST
Last Updated 27 ಸೆಪ್ಟೆಂಬರ್ 2023, 14:00 IST
ಅಕ್ಷರ ಗಾತ್ರ

ಹಾಂಗ್‌ಝೌ: ಪದಕದ ಭರವಸೆಯಾಗಿದ್ದ ಗ್ರ್ಯಾಂಡ್‌ಮಾಸ್ಟರ್‌ ವಿದಿತ್ ಗುಜರಾತಿ ಅಂತಿಮ ಸುತ್ತಿನಲ್ಲಿ ಉಜ್ಬೇಕಿಸ್ತಾನದ ಜಾವೊಕಿರ್‌ ಸಿಂದರೋವ್ ಜಾವೊಕಿರ್ ಅವರಿಗೆ ಸೋತರು. ಆ ಮೂಲಕ ಬುಧವಾರ ಮುಕ್ತಾಯಗೊಂಡ ಏಷ್ಯನ್ ಗೇಮ್ಸ್‌ ಪುರುಷರ ಮತ್ತು ಮಹಿಳೆಯರ ಚೆಸ್‌ ವೈಯಕ್ತಿಕ ವಿಭಾಗದಲ್ಲಿ ಭಾರತಕ್ಕೆ ಯಾವುದೇ ಪದಕ ಸಿಗಲಿಲ್ಲ.

ವಿದಿತ್‌ (2694) ಎಂಟನೇ ಸುತ್ತಿನಲ್ಲಿ ತಮಗಿಂತ ಕೆಳಕ್ರಮಾಂಕದ ಮಂಗೊಲಿಯಾ ಆಟಗಾರ ಬಿಲ್ಗುನ್ ಸುಮಿಯ (2460) ಜೊತೆ ಡ್ರಾ ಮಾಡಿಕೊಂಡಿದ್ದು ದುಬಾರಿಯಾಯಿತು. ಅಂತಿಮ ಸುತ್ತಿನಲ್ಲೂ ಸೋತಿದ್ದರಿಂದ ಪದಕದಾಸೆ ಭಗ್ನಗೊಂಡಿತು.

ಮೂರನೇ ಶ್ರೇಯಾಂಕದ ವಿದಿತ್‌ (5.5 ಅಂಕ) ಐದನೇ ಸ್ಥಾನ ಪಡೆದರೆ, ಕಣದಲ್ಲಿದ್ದ ಭಾರತದ ಮತ್ತೊಬ್ಬ ಆಟಗಾರ ಅರ್ಜುನ್ ಇರಿಗೇಶಿ (5.5) ಆರನೇ ಸ್ಥಾನ (ಟೈಬ್ರೇಕ್‌ ಆಧಾರದಲ್ಲಿ) ಪಡೆದರು. ವಿದಿತ್ ಏಳನೇ ಸುತ್ತಿನ ನಂತರ ಜಂಟಿ ಎರಡನೇ ಸ್ಥಾನದಲ್ಲಿದ್ದರು.

ಅಗ್ರ ಶ್ರೇಯಾಂಕದ ವೀ ಯಿ (ಚೀನಾ) ಅವರು 9 ಸುತ್ತುಗಳಲ್ಲಿ 7.5 ಅಂಕ ಸಂಗ್ರಹಿಸಿ ಚಿನ್ನದ ಪದಕ ಪಡೆದರು. ಎರಡನೇ ಶ್ರೇಯಾಂಕದ ನಾಡಿರ್ಬೆಕ್ ಅಬ್ದುಸತ್ತಾರೋವ್ (ಉಜ್ಬೇಕಿಸ್ತಾನ) ಏಳು ಅಂಕ ಪಡೆದು ಬೆಳ್ಳಿ ಮತ್ತು ಜಾವೊಕಿರ್ 6.5 ಅಂಕ ಸಂಗ್ರಹಿಸಿಅಬ್‌್‌್‌ ಕಂಚಿನ ಪದಕ ಪಡೆದರು.

20 ವರ್ಷದ ಅರ್ಜುನ್‌ ಎಂಟನೇ ಸುತ್ತಿನಲ್ಲಿ ಅಬ್ದುಸತ್ತಾರೊವ್ ಎದುರು ಸೋಲನುಭವಿಸಿದರು. ಅರ್ಜುನ್ ಅಂತಿಮ ಸುತ್ತಿನಲ್ಲಿ ಬಾಂಗ್ಲಾ ಆಟಗಾರ ಇನಾಮುಲ್ ಹುಸೇನ್ ಅವರನ್ನು ಸೋಲಿಸಿದರು.

ಮಹಿಳೆಯರ ವಿಭಾಗದಲ್ಲಿ ದ್ರೋಣವಲ್ಲಿ ಹಾರಿಕಾ (6 ಅಂಕ) ನಾಲ್ಕನೇ ಸ್ಥಾನ ಪಡೆದರೆ, 2006 ದೋಹಾ ಕ್ರೀಡೆಗಳಲ್ಲಿ ಚಿನ್ನ ಗೆದ್ದಿದ್ದ ಕೋನೇರು ಹಂಪಿ (5.5) ಇಲ್ಲಿ ಏಳನೇ ಸ್ಥಾನ ಪಡೆದರು. ಇವರಿಬ್ಬರು ಎಂಟನೇ ಸುತ್ತಿನಲ್ಲಿ ಪರಸ್ಪರ ಎದುರಾಳಿಗಳಾಗಿದ್ದು, ಈ ಪಂದ್ಯ ‘ಡ್ರಾ’ ಆಗಿತ್ತು.

ಹಾರಿಕಾಗೆ ಸೋತ ಜಿನೆರ್‌

ಅಂತಿಮವಾಗಿ ಚಿನ್ನ ಗೆದ್ದ ಚೀನಾದ ಜಿನೆರ್‌ ಝು (7 ಅಂಕ) ಅವರು ಅಂತಿಮ ಸುತ್ತಿನಲ್ಲಿ ಹಾರಿಕಾ ಎದುರು ಆಘಾತಕಾರಿ ಸೋಲು ಕಂಡರು. ಆದರೆ ಅದು ಭಾರತದ ಆಟಗಾರ್ತಿಗೆ ಪದಕ ಗೆಲ್ಲಲು ನೆರವಾಗಲಿಲ್ಲ.

ಹಾರಿಕಾ ಅಂತಿಮ ಸುತ್ತಿನಲ್ಲಿ ಜಿನೆರ್ ಝು (ಚೀನಾ) ಅವರಿಗೆ ಆಘಾತ ನೀಡಿದರೂ, ಅದು ಪದಕ ಗೆಲ್ಲಲು ನೆರವಾಗಲಿಲ್ಲ. ಹಂಪಿ ಅಂತಿಮ ಸುತ್ತಿನಲ್ಲಿ ಬಿಬಿಸಾರಾ ಅಸ್ಸೌಬಯೇವಾ (ಕಜನಕಸ್ತಾನ) ಎದುರು ‘ಡ್ರಾ’ ಮಾಡಿಕೊಳ್ಳಲಷ್ಟೇ ಶಕ್ತರಾದರು.

ಮೊದಲೆರಡು ಸುತ್ತಿನಲ್ಲಿ ಜಯಗಳಿಸಿ ಭರವಸೆ ಮೂಡಿಸಿದ್ದ ಭಾರತದ ಆಟಗಾರ್ತಿಯರು ನಂತರದ ಸುತ್ತುಗಳಲ್ಲಿ ಸ್ಥಿರ ಪ್ರದರ್ಶನ ನೀಡಲಿಲ್ಲ.

ಜಿನೆರ್‌ (7.5), ಉಜ್ಬೇಕಿಸ್ತಾನದ ಉಮಿದಾ ಒಮೊನೊವಾ (6.5), ಚೀನಾದ ಹೌ ಯಿಫಾನ್ (6.5) ಕ್ರಮವಾಗಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT