ಹಾಂಗ್ಝೌ: ಏಷ್ಯನ್ ಕ್ರೀಡಾಕೂಟದ ಅಥ್ಲೆಟಿಕ್ಸ್ನಲ್ಲಿ ಭಾರತದ ಪಾರಮ್ಯ ಮುಂದುವರಿದಿದ್ದು, ಪಾರುಲ್ ಚೌಧರಿ ಮತ್ತು ಅನ್ನುರಾಣಿ ಸಿಂಗ್ ಅವರು ಕ್ರಮವಾಗಿ ಮಹಿಳೆಯರ 5 ಸಾವಿರ ಮೀ. ಓಟ ಹಾಗೂ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಚಿನ್ನ ಗೆದ್ದುಕೊಂಡರು.
ಟ್ರ್ಯಾಕ್ ಮತ್ತು ಫೀಲ್ಡ್ನಲ್ಲಿ ಮಂಗಳವಾರ ಭಾರತದ ಅಥ್ಲೀಟ್ಗಳು ಆರು ಪದಕಗಳನ್ನು ಬಗಲಿಗೆ ಹಾಕಿಕೊಂಡರು. ಈ ಮೂಲಕ ಅಥ್ಲೆಟಿಕ್ಸ್ನಲ್ಲಿ ಒಟ್ಟು ಪದಕಗಳ ಸಂಖ್ಯೆಯನ್ನು 22ಕ್ಕೆ (4 ಚಿನ್ನ, 10 ಬೆಳ್ಳಿ ಮತ್ತು 8 ಕಂಚು) ಹೆಚ್ಚಿಸಿಕೊಂಡರು.
2018ರ ಕೂಟದ ಅಥ್ಲೆಟಿಕ್ಸ್ನಲ್ಲಿ ಜಯಿಸಿದ್ದ ಪದಕಗಳ ಸಂಖ್ಯೆಯನ್ನು (20) ಈ ಬಾರಿ ಮೀರಿನಿಲ್ಲಲು ಭಾರತಕ್ಕೆ ಸಾಧ್ಯವಾಗಿದೆ. 1951ರಲ್ಲಿ ನವದೆಹಲಿಯಲ್ಲಿ ನಡೆದಿದ್ದ ಚೊಚ್ಚಲ ಕೂಟದಲ್ಲಿ 34 ಪದಕಗಳನ್ನು ಜಯಿಸಿದ್ದು, ಟ್ರ್ಯಾಕ್ ಮತ್ತು ಫೀಲ್ಡ್ನಲ್ಲಿ ಭಾರತದ ಅತ್ಯುತ್ತಮ ಸಾಧನೆಯಾಗಿದೆ.
ಭಾರತದ ಅಥ್ಲೀಟ್ಗಳಲ್ಲಿ ಮಂಗಳವಾರ ಮಿಂಚಿನ ಸಂಚಲನ ಮೂಡಿಸಿದ್ದು ಪಾರುಲ್. ಏಷ್ಯನ್ ಗೇಮ್ಸ್ನಲ್ಲಿ ಮಹಿಳೆಯರ 5,000 ಮೀ. ಓಟದಲ್ಲಿ ಚಿನ್ನ ಗೆದ್ದ ಮೊದಲ ಅಥ್ಲೀಟ್ ಎಂಬ ಗೌರವ ಅವರಿಗೆ ಒಲಿಯಿತು.
ಕೊನೆಯ 40 ಮೀ. ಇದ್ದಾಗ ವೇಗ ಹೆಚ್ಚಿಸಿಕೊಂಡ ಪಾರುಲ್, ಜಪಾನ್ನ ರಿರಿಕಾ ಹಿರೊನಾಕ ಅವರನ್ನು ಹಿಂದಿಕ್ಕಿ 15 ನಿ. 14.75 ಸೆ.ಗಳಲ್ಲಿ ಮೊದಲಿಗರಾಗಿ ಗುರಿಮುಟ್ಟಿದರು. ರಿರಿಕಾ 15 ನಿ. 15.34 ಸೆ.ಗಳೊಂದಿಗೆ ಎರಡನೇ ಸ್ಥಾನ ಪಡೆದರು.
28 ವರ್ಷದ ಪಾರುಲ್ಗೆ ಈ ಕೂಟದಲ್ಲಿ ದೊರೆತ ಎರಡನೇ ಪದಕ ಇದು. ಸೋಮವಾರ ಅವರು 3000 ಮೀ. ಸ್ಟೀಪಲ್ಚೇಸ್ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದುಕೊಂಡಿದ್ದರು. ಕಂಚಿನ ಪದಕ ಕಜಕಸ್ತಾನದ ಕರೊಲಿನಾ ಚೆಪ್ಕೊಚ್ ಕಿಪ್ಕಿರುಯ್ (15 ನಿ. 23.12 ಸೆ.) ಅವರಿಗೆ ಒಲಿಯಿತು.
ಸುನಿತಾ ರಾಣಿ (ಬೆಳ್ಳಿ, 1998; ಕಂಚು, 2002), ಒಪಿ ಜೈಶಾ (ಕಂಚು, 2006), ಪ್ರೀಜಾ ಶ್ರೀಧರನ್ (ಬೆಳ್ಳಿ, 2010) ಮತ್ತು ಕವಿತಾ ರಾವತ್ (ಕಂಚು, 2010) ಅವರು ಏಷ್ಯನ್ ಗೇಮ್ಸ್ನಲ್ಲಿ ಮಹಿಳೆಯರ 5000 ಮೀ. ಓಟದಲ್ಲಿ ಈ ಹಿಂದೆ ಭಾರತಕ್ಕೆ ಪದಕ ಗೆದ್ದಿದ್ದರು.
ಅನ್ನುರಾಣಿ ಅವರು ಈ ಋತುವಿನ ಶ್ರೇಷ್ಠ ದೂರ ಎನಿಸಿರುವ 62.92 ಮೀ. ಸಾಧನೆಯೊಂದಿಗೆ ಚಿನ್ನಕ್ಕೆ ಮುತ್ತಿಟ್ಟರು. ತಮ್ಮ ನಾಲ್ಕನೇ ಪ್ರಯತ್ನದಲ್ಲಿ ಅವರು ಈ ದೂರ ಕಂಡುಕೊಂಡರು. ಜಾವೆಲಿನ್ ಥ್ರೋನಲ್ಲಿ ಮಹಿಳೆಯರ ವಿಭಾಗದಲ್ಲಿ ಭಾರತಕ್ಕೆ ಲಭಿಸಿದ ಮೊದಲ ಚಿನ್ನ ಇದು. 31 ವರ್ಷದ ಅನ್ನುರಾಣಿ 2014ರ ಕೂಟದಲ್ಲಿ ಕಂಚಿನ ಪದಕ ಜಯಿಸಿದ್ದರು.
ಮೇ ತಿಂಗಳಲ್ಲಿ ನಡೆದಿದ್ದ ಫೆಡರೇಷನ್ ಕಪ್ನಲ್ಲಿ 59.24 ಮೀ. ದೂರ ಎಸೆದದ್ದು, ಉತ್ತರ ಪ್ರದೇಶದ ಅನ್ನು ಅವರ ಈ ಋತುವಿನ ಅತ್ಯುತ್ತಮ ಸಾಧನೆ ಎನಿಸಿಕೊಂಡಿತ್ತು. ಕಳೆದ ಕೆಲ ತಿಂಗಳಲ್ಲಿ ಲಯ ಕಂಡುಕೊಳ್ಳುವಲ್ಲಿ ವಿಫಲವಾಗಿದ್ದ ಅವರು ಹಾಂಗ್ಝೌನಲ್ಲಿ ಉತ್ತಮ ಪ್ರದರ್ಶನ ನೀಡಲೇಬೇಕಾದ ಒತ್ತಡದಲ್ಲಿದ್ದರು. ಜಾವೆಲಿನ್ ಥ್ರೋ ರಾಷ್ಟ್ರೀಯ ದಾಖಲೆ (63.82 ಮೀ.) ಅವರ ಹೆಸರಿನಲ್ಲಿದೆ.
ವಿದ್ಯಾಗೆ ಕಂಚು: ಮಹಿಳೆಯರ 400 ಮೀ. ಹರ್ಡಲ್ಸ್ನಲ್ಲಿ ವಿದ್ಯಾ ರಾಮರಾಜ್ ಕಂಚು ಗೆದ್ದಕೊಂಡರು. ಅವರು 55.68 ಸೆ.ಗಳಲ್ಲಿ ಗುರಿ ತಲುಪಿದರು. ಬಹರೇನ್ನ ಮುಜಿದತ್ ಅಡೆಕೊಯಾ (54.45 ಸೆ.) ಮತ್ತು ಚೀನಾದ ಜೆದಿ ಮೊ ಅವರು ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಜಯಿಸಿದರು. ವಿದ್ಯಾ ಅವರು ಹೀಟ್ಸ್ನಲ್ಲಿ 55.42 ಸೆ.ಗಳೊಂದಿಗೆ ಗುರಿತಲುಪಿ ಪಿ.ಟಿ.ಉಷಾ ಅವರ ದಾಖಲೆ ಸರಿಗಟ್ಟಿದ್ದರು.
ಪುರುಷರ 800 ಮೀ. ಓಟದಲ್ಲಿ ಮೊಹಮ್ಮದ್ ಅಫ್ಸಲ್ ಅವರು 1 ನಿ. 48.43 ಸೆ.ಗಳೊಂದಿಗೆ ಬೆಳ್ಳಿ ತಮ್ಮದಾಗಿಸಿಕೊಂಡರೆ, ಪ್ರವೀಣ್ ಚಿತ್ರವೇಲ್ ಅವರು ಪುರುಷರು ಟ್ರಿಪಲ್ಜಂಪ್ನಲ್ಲಿ 16.68 ಮೀ. ಸಾಧನೆಯೊಂದಿಗೆ ಕಂಚು ಪಡೆದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.