ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಾಮ ಸೇನೆ ಮುಖಂಡನ ಮೇಲೆ ಗುಂಡು: ತನಿಖೆ ಸಿಐಡಿಗೆ ಒಪ್ಪಿಸಿ ಎಂದ ಮುತಾಲಿಕ

Last Updated 19 ಜನವರಿ 2023, 12:36 IST
ಅಕ್ಷರ ಗಾತ್ರ

ಬೆಳಗಾವಿ: ‘ಜಿಲ್ಲೆಯಲ್ಲಿ ಹಿಂದೂ ಸಂಘಟನೆ ಮುರಿಯಬೇಕು ಎಂಬ ಉದ್ದೇಶದಿಂದಲೇ ಶ್ರೀರಾಮ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ರವಿ ಕೋಕಿತಕರ ಮೇಲೆ ಗುಂಡಿನ ದಾಳಿ ನಡೆದಿದೆ. ಈ ಬಗ್ಗೆ ವಿಶೇಷ ತಂಡ ರಚಿಸಿ ತನಿಖೆ ನಡೆಸಬೇಕು ಅಥವಾ ಸಿಐಡಿಗೆ ಒಪ್ಪಿಸಬೇಕು’ ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ ಮುತಾಲಿಕ ಆಗ್ರಹಿಸಿದರು.

‘ಈ ಗುಂಡಿನ ದಾಳಿ ವೈಯಕ್ತಿಕ ದ್ವೇಷದಿಂದ ನಡೆದಿದೆ ಎಂದು ಹೇಳುವ ಮೂಲಕ ಪೊಲೀಸರು ದಾರಿ ತಪ್ಪಿಸುತ್ತಿದ್ದಾರೆ. ಇದರಲ್ಲಿ ರಾಜಕೀಯ ಷಡ್ಯಂತ್ರ ಇರುವುದು ಎದ್ದುಕಾಣುತ್ತಿದೆ. ರಾಜಕಾರಣಿಯ ಒತ್ತಡಕ್ಕೆ ಮಣಿದು ಪೊಲೀಸರು ತನಿಖೆ ಕೂಡ ನಡೆಸುತ್ತಿಲ್ಲ. ಎರಡು ಕೊಲೆಗಳಿಗೆ ಯತ್ನ ನಡೆಸಿದ ಪ್ರಕರಣವನ್ನೇ ಹಗುರವಾಗಿ ತೆಗೆದುಕೊಂಡಿದ್ದಾರೆ’ ಎಂದು ಅವರು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ಜನವರಿ 7ರಂದು ಗುಂಡಿನ ದಾಳಿ ನಡೆದಿದೆ. ರವಿ ಕೋಕಿತಕರ ಅವರ ಕಾರು ಈಗಲೂ ಪೊಲೀಸ್‌ ಠಾಣೆ ಆವರಣದಲ್ಲಿದೆ. ತಮಗೆ ತಾಗಿ ಕಾರಿನೊಳಗೆ ಬಿದ್ದಿದ್ದ ಗುಂಡನ್ನು ಸ್ವತಃ ರವಿ ಅವರೇ ಹುಡುಕಿಕೊಟ್ಟಿದ್ದಾರೆ. ಪೊಲೀಸರು ಕನಿಷ್ಠ ತಪಾಸಣೆ ಕೂಡ ಮಾಡಿಲ್ಲ, ಕಾರಿನೊಳಗೆ ಇಣುಕಿ ಕೂಡ ನೋಡಲ್ಲ. ಕಾರಿನಲ್ಲಿದ್ದ ಮೂವರು ಸೇರಿದಂತೆ ಅಕ್ಕಪಕ್ಕದವರ ಹೇಳಿಕೆ ಕೂಡ ಪಡೆದಿಲ್ಲ’ ಎಂದರು.

‘ದಾಳಿಕೋರರು ಒಂದು ಸ್ಕೂಟರ್‌, ಒಂದು ಬೈಕ್‌ ಮೇಲೆ ಬಂದಿದ್ದು ಸಿಸಿಟಿವಿ ಕ್ಯಾಮೆರಾದಲ್ಲಿ ಪತ್ತೆಯಾಗಿದೆ. ಸ್ಕೂಟರ್‌ ಮೇಲೆ ಬಂದ ಮೂವರು ತಾವಾಗೇ ಶರಣಾಗಿದ್ದಾರೆ. ಆದರೆ, ಬೈಕಿನಲ್ಲಿದ್ದವರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿಲ್ಲ. ಕ್ಯಾಂಪ್‌ ಠಾಣೆಗೆ ಹಾಜರಾಗಬೇಕಾದ ಆರೋಪಿಗಳನ್ನು ಕೆಲವರು ಅಧಿಕಾರಿಗಳ ಮುಂದೆ ಹಾಜರುಪಡಿಸಿದ್ದಾರೆ. ಇಂಥ ನಟೋರಿಯಸ್‌ ಕೈದಿಗಳನ್ನು ಕೇಂದ್ರ ಕಾರಾಗೃಹದಲ್ಲಿ ಇಡುವ ಬದಲು, ಬೈಲಹೊಂಗಲ ಉಪಕಾರಾಗೃಹಕ್ಕೆ ಕಳುಹಿಸಿದ್ದಾರೆ. ಇದೆಲ್ಲದರ ಹಿಂದೆ ರಾಜಕೀಯ ಕೈವಾಡವಿದೆ’ ಎಂದೂ ಆರೋಪಿಸಿದರು.

‘ಶಿಕ್ಷೆ ಪ್ರಮಾಣ ಕಡಿಮೆ ಆಗುವಂತೆ ಮಾಡುವ ಉದ್ದೇಶದಿಂದ ಪೊಲೀಸರು ಸೂಕ್ತ ಕಲಂಗಳನ್ನು ಹಾಕಿಲ್ಲ. ಇದೆಲ್ಲವನ್ನೂ ಗೃಹಸಚಿವ ಹಾಗೂ ರಾಜ್ಯಪಾಲರಿಗೆ ಮನವರಿಕೆ ಮಾಡುತ್ತೇವೆ. ಒಂದು ತಿಂಗಳಲ್ಲಿ ಕ್ರಮ ಜರುಗಿಸದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ’ ಎಂದೂ ಅವರು ಹೇಳಿದರು.

ದಾಳಿಗೆ ಒಳಗಾದ ರವಿ ಕೋಕಿತಕರ ಹಾಗೂ ಅವರ ವಕೀಲರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT