‘ನಮ್ಮ ನಡೆ ಮಕ್ಕಳ ಮನೆ ಕಡೆ’ ಅಭಿಯಾನ

ಮೂಡಲಗಿ (ಬೆಳಗಾವಿ ಜಿಲ್ಲೆ): ಮೂಡಲಗಿ ಶೈಕ್ಷಣಿಕ ವಲಯದ ವ್ಯಾಪ್ತಿಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು, ಪರೀಕ್ಷೆ ಮತ್ತು ಕೋವಿಡ್ ಕುರಿತ ಭಯ ಹೋಗಲಾಡಿಸಲಲು ‘ನಮ್ಮ ನಡೆ ಮಕ್ಕಳ ಮನೆಯ ಕಡೆ’ ಅಭಿಯಾನ ಪ್ರಾರಂಭಿಸಲಾಗಿದೆ.
ಬಿಇಒ ಅಜಿತ್ ಮನ್ನಿಕೇರಿ ನೇತೃತ್ವದಲ್ಲಿ ಕಾರ್ಯಕ್ರಮ ಆರಂಭವಾಗಿದೆ.
ಪಟ್ಟಣದ ಹತ್ತಾರು ವಿದ್ಯಾರ್ಥಿಗಳ ಮನೆಗಳಿಗೆ ಬಿಇಒ ಭೇಟಿ ನೀಡಿ ಅಭಿಯಾನಕ್ಕೆ ಚಾಲನೆ ನೀಡಿದರು. ಅವರಿಗೆ ದೈಹಿಕ ಶಿಕ್ಷಣ ಅಧಿಕಾರಿ ಎ.ಎ. ಜುನೇದಿ ಪಟೇಲ್, ತಾಲ್ಲೂಕು ನೋಡಲ್ ಅಧಿಕಾರಿ ಟಿ. ಕರಿಬಸವರಾಜು, ಸಹಾಯಕ ಸತೀಶ ಬಿ.ಎಸ್, ಸಿ.ಆರ್.ಪಿ. ಎಸ್.ವೈ. ದ್ಯಾಗಾನಟ್ಟಿ, ಕೆ.ಎಲ್ ಮೀಶಿ, ಎಸ್.ಬಿ. ನ್ಯಾಮಗೌಡರ, ಎಂ.ಎಂ. ದಬಾಡಿ, ಕೆ.ಎಸ್ ಹೊಸಟ್ಟಿ, ಸುಭಾಸ ಕುರಣಿ, ಎಸ್.ಎಂ. ಶೆಟ್ಟರ ಸಾಥ್ ನೀಡಿದರು.
‘ಲಾಕ್‌ಡೌನ್‌ನಿಂದಾಗಿ ಭೌತಿಕ ತರಗತಿಗಳು ನಡೆಯದೆ ಮಕ್ಕಳಿಗೆ ಪಠ್ಯದ ವಿಷಯಗಳು ಸರಿಯಾಗಿ ಅರ್ಥವಾಗಿಲ್ಲದಿರುವ ಸಾಧ್ಯತೆ ಇದೆ. ಇದನ್ನು ನೀಗಿಸಲು ಮತ್ತು ಕೋವಿಡ್ ಭಯ ಹೋಗಲಾಡಿಸಲು ಹಾಗೂ ಪಾಲಕರ ಆತಂಕವನ್ನು ದೂರ ಮಾಡುವ ಸಲುವಾಗಿ ಶಿಕ್ಷಕರನ್ನೇ ಮನೆ–ಮನೆಗೆ ಭೇಟಿ ಕಾರ್ಯಕ್ರಮಕ್ಕೆ ನಿಯೋಜಿಸಲಾಗಿದೆ’ ಎನ್ನುತ್ತಾರೆ ಬಿಇಒ.
‘ವಿದ್ಯಾರ್ಥಿಗಳಲ್ಲಿ ಪರೀಕ್ಷೆಗೆ ಸಂಬಂಧಿಸಿದ ಗೊಂದಲಗಳಿದ್ದಲ್ಲಿ ನಿವಾರಿಸಲಾಗುವುದು. ಸಿದ್ಧತೆ ಮಾಡಿಕೊಳ್ಳುವ ವಿಧಾನ ತಿಳಿಸಿಕೊಡಲಾಗುವುದು. ಎರಡು ದಿನ ನಡೆಯುವ ಪರೀಕ್ಷೆಯ ವಿಷಯಗಳ ವಿವರ, ಒಎಂಆರ್ ಶೀಟ್, ಪ್ರಶ್ನೆಪತ್ರಿಕೆ ಮಾದರಿ ಮೊದಲಾದ ವಿಷಯಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು. ಅವರಲ್ಲಿ ಚೈತನ್ಯ ತುಂಬಲಾಗುವುದು. ಗೈರು ಹಾಜರಾಗಬಹುದಾದ ವಿದ್ಯಾರ್ಥಿಗಳ ಮನೆಗಳ ಭೇಟಿಗೆ ಆದ್ಯತೆ ಕೊಡಲಾಗುತ್ತಿದೆ’ ಎಂದು ತಿಳಿಸಿದರು.
ಶಾಲೆ, ಕ್ಲಸ್ಟರ್ ಮತ್ತು ತಾಲ್ಲೂಕು ಹಂತದಲ್ಲಿ ‘ನೇರ ಫೋನ್ ಇನ್ ಕಾರ್ಯಕ್ರಮ’ ನಡೆಸಿ ಜಾಗೃತಿ ಮೂಡಿಸಲಾಗಿದೆ. ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಪಠ್ಯಕ್ಕೆ ಸಂಬಂಧಿಸಿದ ಆಡಿಯೊ–ವಿಡಿಯೊಗಳನ್ನು ಕಳುಹಿಸಲಾಗಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ವಿದ್ಯಾರ್ಥಿಗಳು ಸಜ್ಜಾಗಿದ್ದಾರೆ’ ಎಂದು ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ ಅರಿಹಂತ ಬಿರಾದಾರ ಪಾಟೀಲ ತಿಳಿಸಿದರು.
‘ಪರೀಕ್ಷೆ ಬಗ್ಗೆ ಮಗಳಿಗೆ ಭಯ ಇತ್ತು. ಬಿಇಒ ಅವರು ಮನೆಗೆ ಬಂದಿದ್ದರಿಂದ ಪರೀಕ್ಷೆ ಬರೆಯಲು ಅವಳಿಗೆ ಚೈತನ್ಯ ಬಂದಿದೆ’ ಎಂದು ವಿದ್ಯಾರ್ಥಿನಿ ವಾಣಿಶ್ರೀಯ ತಂದೆ ಮಲ್ಲಪ್ಪ ಢವಳೇಶ್ವರ ಪ್ರತಿಕ್ರಿಯಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.