ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯದಲ್ಲಿ ಆರೋಗ್ಯ ವ್ಯವಸ್ಥೆ ಬಲವರ್ಧನೆಗೆ ಕ್ರಮ: ದಿನೇಶ ಗುಂಡೂರಾವ್‌

Published : 11 ಸೆಪ್ಟೆಂಬರ್ 2024, 14:01 IST
Last Updated : 11 ಸೆಪ್ಟೆಂಬರ್ 2024, 14:01 IST
ಫಾಲೋ ಮಾಡಿ
Comments

ಖಾನಾಪುರ(ಬೆಳಗಾವಿ ಜಿಲ್ಲೆ): ‘ಒಂದು ಮಗು ಸಾಧನೆಯತ್ತ ಹೆಜ್ಜೆಹಾಕಲು ಉತ್ತಮ ಆರೋಗ್ಯ ಹಾಗೂ ಶಿಕ್ಷಣ ಅಗತ್ಯ. ರಾಜ್ಯದಲ್ಲಿ ಆದ್ಯತೆ ಮೇರೆಗೆ ಆರೋಗ್ಯ ವ್ಯವಸ್ಥೆ ಬಲವರ್ಧನೆಗೆ ಕ್ರಮ ವಹಿಸುತ್ತಿದ್ದೇವೆ’ ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್‌ ಹೇಳಿದರು.

ಇಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ನಿರ್ಮಿಸಿದ 60 ಹಾಸಿಗೆಗಳ ಸಾಮರ್ಥ್ಯದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಬುಧವಾರ ಉದ್ಘಾಟಿಸಿ ಹಾಗೂ ನಬಾರ್ಡ್ ಯೋಜನೆಯಡಿ 100 ಹಾಸಿಗೆಗಳ ಸಾಮರ್ಥ್ಯದ ತಾಲ್ಲೂಕು ಆಸ್ಪತ್ರೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಸಮಾಜದ ಆರೋಗ್ಯ ಉತ್ತಮವಾಗಿ ಇರಬೇಕಾದರೆ, ತಾಯಿ ಮತ್ತು ಮಗುವಿನ ಆರೋಗ್ಯ ಮೊದಲು ಉತ್ತಮವಾಗಿರಬೇಕು. ಗರ್ಭದಲ್ಲಿನ ಭ್ರೂಣ ಮತ್ತು ತಾಯಿ ಆರೋಗ್ಯ ಪರಸ್ಪರ ಅವಲಂಬಿಸಿವೆ. ಹಾಗಾಗಿ ಗರ್ಭಿಣಿಯರು ಆರೋಗ್ಯದ ಕುರಿತು ವಿಶೇಷ ಕಾಳಜಿ ವಹಿಸಬೇಕು. ‍ಪೌಷ್ಟಿಕ ಆಹಾರ ಸೇವಿಸಬೇಕು. ಭ್ರೂಣಾವಸ್ಥೆಯಲ್ಲೇ ಮಗುವಿನ ಆರೋಗ್ಯಕ್ಕೆ ಒತ್ತು ಕೊಡಬೇಕು’ ಎಂದರು.

‘₹15 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಈಗ ಉದ್ಘಾಟನೆಯಾಗಿದೆ. ಇದಕ್ಕೆ ಅಗತ್ಯವಿರುವ ವೈದ್ಯಕೀಯ ಉಪಕರಣ, ಮೂಲಸೌಕರ್ಯ ಒದಗಿಸಲಾಗುವುದು. ಜತೆಗೆ, ಜನರಿಗೆ ಉತ್ತಮ ಸೇವೆ ಕಲ್ಪಿಸಲು ವೈದ್ಯರು ಹಾಗೂ ಸಿಬ್ಬಂದಿ ನೇಮಿಸಲಾಗುವುದು’ ಎಂದು ಭರವಸೆ ನೀಡಿದರು.

‘ಖಾನಾಪುರ, ಶಿರಹಟ್ಟಿ, ಯಳಂದೂರ, ಶೃಂಗೇರಿ ಸೇರಿದಂತೆ ರಾಜ್ಯದಲ್ಲಿ ಏಳು ಕಡೆ ಈ ಬಾರಿ ತಾಲ್ಲೂಕು ಆಸ್ಪತ್ರೆ ನಿರ್ಮಿಸುವುದಾಗಿ ಬಜೆಟ್‌ನಲ್ಲಿ ಘೋಷಿಸಿದ್ದೆವು. ಈಗ ಪ್ರಥಮ ಹಂತವಾಗಿ ಖಾನಾಪುರದಲ್ಲಿ ₹35 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಸೌಕರ್ಯ ಒಳಗೊಂಡ ತಾಲ್ಲೂಕು ಅಸ್ಪತ್ರೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದೇವೆ’ ಎಂದರು.

‘ಆರೋಗ್ಯ ವ್ಯವಸ್ಥೆ ಬಲಪಡಿಸುವಲ್ಲಿ ನಾವು ರಾಜಕಾರಣ ಮಾಡುತ್ತಿಲ್ಲ. ಪಕ್ಷಾತೀತವಾಗಿ ಎಲ್ಲ ಕ್ಷೇತ್ರಗಳಲ್ಲೂ ಆರೋಗ್ಯ ವ್ಯವಸ್ಥೆ ಸುಧಾರಣೆಗೆ ಪೂರಕವಾದ ಕಾಮಗಾರಿ ಕೈಗೊಳ್ಳುತ್ತಿದ್ದೇವೆ’ ಎಂದು ತಿಳಿಸಿದರು.

‘ಖಾನಾಪುರ ಆಸ್ಪತ್ರೆಯಲ್ಲಿ ₹1.30 ಕೋಟಿ ವೆಚ್ಚದಲ್ಲಿ ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪನೆಗೆ ಮಂಜೂರಾತಿ ಕೊಟ್ಟಿದ್ದೇವೆ. ಕಾಪೋಲಿ, ಇಟಗಿ, ನಂದಗಡ, ಪಾರಿಶ್ವಾಡ, ಬೀಡಿ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ₹3.50 ಕೋಟಿ ವೆಚ್ಚದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳ ಸುಧಾರಣೆಗೆ ಕ್ರಮ ವಹಿಸಲಾಗುವುದು. ಖಾನಾಪುರದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

‘ಶಾಲಾ ಮಕ್ಕಳಿಗೆ ಈಗ ವಾರದಲ್ಲಿ ಮೂರು ದಿನ ಮೊಟ್ಟೆ ವಿತರಿಸುತ್ತಿದ್ದೇವೆ. ಇನ್ಮುಂದೆ ವಾರದಲ್ಲಿ ಆರು ದಿನ ವಿತರಿಸಲಾಗುವುದು. ಇದಕ್ಕೆ ಅಜೀಮ್‌ ಪ್ರೇಮ್‌ಜಿ ಫೌಂಡೇಷನ್‌ ₹1,500 ಕೋಟಿ ನಿಧಿ ಕೊಟ್ಟಿದೆ’ ಎಂದು ಶ್ಲಾಘಿಸಿದರು.

ಶಾಸಕ ವಿಠ್ಠಲ ಹಲಗೇಕರ, ‘ಖಾನಾಪುರ ತಾಲ್ಲೂಕಿನಲ್ಲಿ ಇರುವಷ್ಟು ಸಮಸ್ಯೆ ರಾಜ್ಯದ ಯಾವ ಭಾಗದಲ್ಲೂ ಇಲ್ಲ. ಆರೋಗ್ಯ ಮಾತ್ರವಲ್ಲ; ಎಲ್ಲ ರಂಗಗಳಲ್ಲೂ ಇದು ಹಿಂದುಳಿದಿದೆ. ರಸ್ತೆಗಳು ಹದಗೆಟ್ಟಿವೆ. ತಾಲ್ಲೂಕಿನ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಹೆಚ್ಚಿನ ಅನುದಾನ ನೀಡಬೇಕು. ಚಾಪಗಾವಿ, ಕಕ್ಕೇರಿ, ಜಾಂಬೋಟಿ ಸೇರಿದಂತೆ ತಾಲ್ಲೂಕಿನಲ್ಲಿ ಅಗತ್ಯವಿರುವ ಕಡೆ ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯಲು ಕ್ರಮ ವಹಿಸಬೇಕು’ ಎಂದು ಮನವಿ ಮಾಡಿದರು‌.

ಮಾಜಿ ಶಾಸಕಿ ಅಂಜಲಿ ನಿಂಬಾಳಕರ, ‘ಈ ಹಿಂದೆ ಖಾನಾಪುರ ತಾಲ್ಲೂಕಿನ ಗರ್ಭಿಣಿಯರು ಹೆರಿಗೆಗಾಗಿ ಬೆಳಗಾವಿಗೆ ಹೋಗಬೇಕಿತ್ತು. ಈ ಸಮಸ್ಯೆಗೆ ಪರಿಹಾರ ಒದಗಿಸಲು ಇಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣ ಕಾಮಗಾರಿಯನ್ನು ನಾನು ಶಾಸಕಿ ಇದ್ದಾಗ ಆರಂಭಿಸಿದ್ದೆವು. ಈಗ ಆಸ್ಪತ್ರೆ ಉದ್ಘಾಟನೆಯಾಗಿರುವುದು ಖುಷಿ ತಂದಿದೆ. ಇನ್ಮುಂದೆ ಖಾನಾಪುರದಿಂದ ಯಾವ ಗರ್ಭಿಣಿಯೂ ಹೆರಿಗೆಗಾಗಿ ಬೆಳಗಾವಿಗೆ ಹೋಗದಂತೆ‌ ನೋಡಿಕೊಳ್ಳುವ ಜವಾಬ್ದಾರಿ ವೈದ್ಯರ ಮೇಲಿದೆ’ ಎಂದರು.

ಖಾನಾಪುರ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಹೇಶ ಕಿವುಡಸಣ್ಣವರ, ‘ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣದಿಂದ ಶಿಶು ಮತ್ತು ತಾಯಂದಿರ ಮರಣ ಪ್ರಮಾಣ ತಗ್ಗಲಿದೆ. ಹೆರಿಗೆಗಾಗಿ ಗರ್ಭಿಣಿಯರು ಅಲೆದಾಡುವುದು ತಪ್ಪಲಿದೆ’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿನಯ ನಾವಲಗಟ್ಟಿ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಖಾನಾಪುರ ತಹಶೀಲ್ದಾರ್ ಪ್ರಕಾಶ ಗಾಯಕವಾಡ, ಇತರರಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT