ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಲೋಗಿ, ಹುಲ್ಲೂರಿನಲ್ಲಿ 84 ಮಿ.ಮೀ ಮಳೆ

ಜಿಲ್ಲೆಯ ವಿವಿಧೆಡೆ ಧಾರಾಕಾರ ಮಳೆ, ಬಿರುಗಾಳಿಗೆ ಮರ ಉರುಳಿ ಸಂಚಾರ ಬಂದ್‌
Last Updated 28 ಮೇ 2018, 7:08 IST
ಅಕ್ಷರ ಗಾತ್ರ

ಕಲಬುರ್ಗಿ: ಭಾನುವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡ 24 ತಾಸುಗಳಲ್ಲಿ ಜಿಲ್ಲೆಯ ಕೆಲವೆಡೆ ಧಾರಾಕಾರ ಮಳೆ ಸುರಿಯಿತು. ಬಿಸಿಲ ಬೇಗೆಯಿಂದ ಬಳಲಿದ ಜನರಿಗೆ ತಂಪಿನ ವಾತಾವರಣ ಹಿತವೆನಿಸಿತು. ಆದರೆ, ಗ್ರಾಮೀಣ ಪ್ರದೇಶದಲ್ಲಿ ಹಲವು ರೈತರಿಗೆ ಬೆಳೆಹಾನಿಯ ‘ಬಿಸಿ’ ತಟ್ಟಿತು.

ಕಲಬುರ್ಗಿ ತಾಲ್ಲೂಕಿನ ಹುಲ್ಲೂರು ಹಾಗೂ ಜೇವರ್ಗಿ ತಾಲ್ಲೂಕಿನ ನೆಲೋಗಿ ಗ್ರಾಮದಲ್ಲಿ ಅತಿ ಹೆಚ್ಚು ಅಂದರೆ ತಲಾ 84 ಮಿ.ಮೀ ಮಳೆ ಸುರಿದಿದೆ.

ನಗರದಲ್ಲಿ ಶನಿವಾರ ಸಂಜೆ 7ರ ಹೊತ್ತಿಗೆ ಏಕಾಏಕಿ ಬಿರುಗಾಳಿ ಆರಂಂಭವಾಯಿತು. ಇದರಿಂದ ನಗರ ಹಾಗೂ ಜಿಲ್ಲೆಯ ಹಲವೆಡೆ ಮರ, ವಿದ್ಯುತ್‌ ಕಂಬಗಳ ಉರುಳಿ ಆಸ್ತಿ–ಪಾಸ್ತಿ ಹಾನಿಯಾಗಿದೆ. ರಾತ್ರಿ 8 ಗಂಟೆಯ ನಂತರ ಧಾರಾಕಾರ ಮಳೆ ಹನಿಯಿತು.

ಮರ ಬಿದ್ದು ಸಂಚಾರ ಬಂದ್‌: ಇಲ್ಲಿನ ಸಿದ್ಧಾರ್ಥನಗರದ ಎಂಎಸ್‌ಜಿಎಂ ಕಾಲೊನಿಯಲ್ಲಿ ಹುಣಸೆ ಮರ ಬುಡಸಮೇತ ಉರುಳಿತು. ಮರ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದರಿಂದ ಭಾನುವಾರ ಸಂಜೆ 7ರವರೆಗೂ ಇಲ್ಲಿ ಸಂಚಾರ ಬಂದ್‌ ಆಗಿತ್ತು. ರಸ್ತೆಯ ಎಡಬದಿಯಲ್ಲಿದ್ದ ಮರವು ಬಲಬದಿಯಲ್ಲಿದ್ದ ಮನೆಯ ಮೇಲೆಯೇ ಬಿದ್ದಿದೆ. ಮನೆಯ ಗೋಡೆ ಬಿರುಕು ಬಿಟ್ಟಿದ್ದು, ಅದೃಷ್ಟವಶಾತ್‌ ಯಾರಿಗೂ ತೊಂದರೆಯಾಗಿಲ್ಲ.

ಇನ್ನೊಂದೆಡೆ, ಎಂಎಸ್‌ಕೆ ಮಿಲ್‌ ಆವರಣದಲ್ಲಿರುವ ಹುಸೇನ್‌ ಉದ್ಯಾನದಲ್ಲಿ ಬೃಹತ್‌ ಮರ ಅರ್ಧಕ್ಕೆ ತುಂಡಾಗಿದೆ. ಘಟನೆ ನಡೆದ ಸಂದರ್ಭ ಮಕ್ಕಳು ಅಲ್ಲಿಯೇ ಆಟವಾಡುತ್ತಿದ್ದರು. ಯಾರಿಗೂ ತೊಂದರೆಯಾಗಿಲ್ಲ. ಮರ ಬಿದ್ದ ರಭಸಕ್ಕೆ ಉದ್ಯಾನದ ಆವರಣಗೋಡೆ ಕುಸಿದಿದೆ.

ಸೇಡಂ ರಸ್ತೆಯ ಬಸವೇಶ್ವರ ಆಸ್ಪತ್ರೆ ಹತ್ತಿರ ದೊಡ್ಡ ಮರ ಬಿದ್ದು ಗೂಡ್ಸ್ ವಾಹನ ಜಖಂಗೊಂಡಿದೆ. ವಿದ್ಯಾನಗರ ಕಾಲೊನಿಯಲ್ಲಿ ವಿದ್ಯುತ್‌ ಕಂಬ ಅರ್ಧಕ್ಕೆ ತುಂಡಾಗಿದೆ. ಇದರಿಂದ ಈ ಭಾಗದ ಜನ ರಾತ್ರಿಯಿಡೀ ಕತ್ತಲಲ್ಲೇ ಕಳೆಯುವಂತಾಯಿತು.

ಸಿಡಿಲು ಬಡಿದು ಎತ್ತು ಸಾವು: ಅಫಜಲಪುರ ತಾಲ್ಲೂಕಿನ ಮಾದಾಬಾಳ ತಾಂಡಾದಲ್ಲಿ ನಾಥು ಶಂಕರ್‌ ರಾಠೋಡ ಎಂಬುವರಿಗೆ ಸೇರಿದ ಎತ್ತು ಸಿಡಿಲು ಬಡಿದು ಸಾವನ್ನಪ್ಪಿದೆ.

ಉಳಿದಂತೆ ಜಿಲ್ಲೆಯ ಪ್ರಮುಖ ಸ್ಥಳಗಳಾದ ತೆಲ್ಲೂರು– 44 ಮಿ.ಮೀ, ಘತ್ತರಗಾ– 60, ಐನಾಪುರ– 42 ಮುಂತಾದ ಗ್ರಾಮಗಳಲ್ಲಿಯೂ ಸರಾಸರಿ 40 ಮಿ.ಮೀ.ವರಗೂ ಮಳೆ ಸುರಿದಿದೆ.

ಚಿತ್ತಾಪುರ ವರದಿ: ತಾಲ್ಲೂಕಿನ ಹೆರೂರ್(ಕೆ) ವ್ಯಾಪ್ತಿಯಲ್ಲಿ ಭಾನುವಾರ ನಸುಕಿನಲ್ಲಿ ಉತ್ತಮ ಮಳೆಯಾಗಿದೆ. ಮರಗೋಳ, ದಂಡೋತಿ, ಇವಣಿ, ಭಾಗೋಡಿ, ಕದ್ದರಗಿ, ಮುತ್ತಗಾ, ಗುಂಡಗುರ್ತಿ, ಬೆಳಗುಂಪಾ, ಪೇಠಶಿರೂರ, ಮಲಕೂಡ, ತೊನಸನಳ್ಳಿ(ಟಿ) ಮುಂತಾದೆಡೆ ಮಳೆಯಾಗಿದೆ.

ಅಪಾರ ಬಾಳೆ ಬೆಳೆ ನಾಶ

ಕಮಲಾಪುರ: ಮಳೆ, ಬಿರುಗಾಳಿಗೆ ತಾಲ್ಲೂಕಿನ ರಾಜನಾಳ ಹಾಗೂ ಕಮಲಾಪುರ ಗ್ರಾಮದಲ್ಲಿ ಸಾವಿರಾರು ಬಾಳೆ ಗಿಡಗಳು ನೆಲಕ್ಕುರುಳಿದ್ದು, ರೈತರು ಅಪಾರ ಹಾನಿ ಅನುಭವಿಸುವಂತಾಗಿದೆ.

ರಾಜನಾಳ ಗ್ರಾಮದ ರಾಚಪ್ಪ ದಯಾನಂದ ಅವರಿಗೆ ಸೇರಿದ್ದ ಸುಮಾರು 500 ಬಾಳೆ ಗಿಡ, ನೀಲಕಂಠ ಸಿದ್ರಾಮಪ್ಪ ಅವರ 500, ಹುಚ್ಚಪ್ಪ ಸುಭಾಶ್ಚಂದ್ರ ಅವರ 200 ಹಾಗೂ ಚಂದ್ರಕಾಂತ ಬಾಬುರಾವ ದೋಶೆಟ್ಟಿ ಅವರ 250 ಬಾಳೆಗಿಡ ನೆಲಕ್ಕುರುಳಿವೆ. ಕಮಲಾಪುರದಲ್ಲಿ ಕೂಡ ಶ್ರೀಶೈಲ ದೋಶೆಟ್ಟಿ 400, ಬಸವರಾಜ ಸುಗೂರ ಅವರ 200 ಬಾಳೆಗಿಡ ಸಂಪೂರ್ಣ ನಾಶವಾಗಿವೆ.

ಈಗಾಗಲೇ ಗೊನೆ ಬಿಟ್ಟುದ್ದ ಬಾಳೆ ಫಲ ತುಂಬುವ ಹಂತದಲ್ಲಿತ್ತು. ಘಟನೆಯಿಂದ ಲಕ್ಷಾಂತರ ರೂಪಾಯಿ ಹಾನಿಯಾಗಿದೆ ಎಂದು ರೈತ ರಾಚಪ್ಪ ದಯಾನಂದ ಅಳಲು ತೋಡಿಕೊಂಡರು.

ಎಲ್ಲೆಂದರಲ್ಲಿ ವಿದ್ಯುತ್‌ ಕಂಬ ಉರುಳಿದ್ದರಿಂದ ಭಾನುವಾರ ಮಧ್ಯಾಹ್ನದವರೆಗೆ ಹಲವು ಗ್ರಾಮಗಳು ವಿದ್ಯುತ್‌ ವ್ಯತ್ಯಯ ಅನುಭವಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT