ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೌಕರಿ ಬಿಟ್ಟು ಕೃಷಿಗಿಳಿದ ದಂಪತಿ

ಬಹು ಬೇಸಾಯ ಪದ್ಧತಿ, ಸಾವಯವ ಕೃಷಿಯಿಂದ ಉತ್ತಮ ಇಳುವರಿ
Last Updated 18 ಆಗಸ್ಟ್ 2022, 16:01 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳುವುದು ಒಂದು ಸವಾಲು, ಸಾವಯವ ಉತ್ಪನ್ನಕ್ಕೆ ಮಾರುಕಟ್ಟೆ ‍‍ಪಡೆಯುವುದು ಇನ್ನೂ ದೊಡ್ಡ ಸವಾಲು. ಈ ಎರಡನ್ನೂ ಸುಲಭವಾಗಿ ಮಾಡಿಕೊಂಡು ಲಾಭದಾಯಕ ಕೃಷಿ ಮುಂದುವರಿಸಿದ್ದಾರೆ. ಮಾಳವಿಕಾ ಆನಂದ ಕಡಕೋಳ ದಂಪತಿ.

ತಾಲ್ಲೂಕಿನ ಕುಲವಳ್ಳಿ ಗ್ರಾಮದಲ್ಲಿ ತಮ್ಮ 15 ಎಕರೆ ಜಮೀನಿನಲ್ಲಿ ಬಹು ಬೇಸಾಯ ಪದ್ಧತಿ ಮತ್ತು ಸಾವಯವ ಪದ್ಧತಿಯ ವ್ಯವಸಾಯ ಮಾಡುತ್ತಿರುವ ಅವರು ಕೈತುಂಬಾ ಆದಾಯ ಪಡೆಯುತ್ತಿದ್ದಾರೆ. ವಿದೇಶಗಳಲ್ಲಿ ತಮಗೆ ಇದ್ದ ದೊಡ್ಡ ಮೊತ್ತದ ಸಂಬಳದ ಕೆಲಸವನ್ನೂ ತೊರೆದು ದೇಸಿ ಕೃಷಿಗೆ ಮಾರುಹೋದ ಅವರ ನಡೆ ಇತರ ರೈತರಿಗೂ ಮಾದರಿಯಾಗಿದೆ.

ಮಾಳವಿಕಾ ಮತ್ತು ಆನಂದ ಇಬ್ಬರೂ ಎಂಬಿಎ ಪದವೀಧರರು. ದುಬೈ, ಮಲೇಷಿಯಾ ದೇಶದಲ್ಲಿ ಉದ್ಯೋಗ ಮಾಡಿ ಬಂದ ಅನುಭವವಿದೆ. ಸ್ವದೇಶಕ್ಕೆ ಬರುವ ಪೂರ್ವದಲ್ಲಿಯೇ ಕೃಷಿಯನ್ನೇ ಮಾಡಬೇಕು ಎಂದು ದೀಕ್ಷೆ ತೊಟ್ಟು ತವರು ನೆಲಕ್ಕೆ ಬಂದವರು. ಕೃಷಿ ಅವರಿಗೊಂದು ‘ಫ್ಯಾಷನ್‌’ ಆಗಿದೆ.

‘ಹಿಡಿ ರಾಸಾಯನಿಕ ಗೊಬ್ಬರ ಬಳಸು
ವುದಿಲ್ಲ. ಸಾವಯವ ಕೃಷಿ ಪದ್ಧತಿಯನ್ನೇ ಅವಲಂಬಿಸಲಾಗಿದೆ. ಅದರಲ್ಲಿ ಯಶಸ್ಸೂ ಕಂಡಿದ್ದೇವೆ. ಸಾವಯವ ಬೆಳೆ ಪದ್ಧತಿಯಿಂದ ಬೆಳೆದ ಆಹಾರವು ಜನರ ಆರೋಗ್ಯ ವೃದ್ಧಿಗೂ ಕಾರಣವಾಗುತ್ತದೆ. ರಾಸಾಯನಿಕ ಮುಕ್ತ ಬೆಳೆ ಉತ್ಪಾದನೆ ನಮ್ಮ ಗುರಿ’ ಎನ್ನುತ್ತಾರೆ ಆನಂದ.

ಬಹುಬೇಸಾಯ ಪದ್ಧತಿ: ಕಿತ್ತೂರು ತಾಲ್ಲೂಕಿನ ಕುಲವಳ್ಳಿ ಬಳಿ ಸ್ವಯಾರ್ಜಿತ 15 ಎಕರೆ ಭೂಮಿಯಲ್ಲಿ ತರಹೇವಾರಿ ತೋಟಗಾರಿಕೆ ಬೆಳೆ ಕೃಷಿ ಕೈಗೊಳ್ಳಲಾಗಿದೆ. 560 ಮಾವು, ಪೇರಲ, ಕೆಂಪು ಪೇರಲ, ಚಿಕ್ಕು, ಹಲಸು, ರಾಮಫಲ, ಸೀತಾಫಲ, ಗುಡ್ಡದ ನೆಲ್ಲಿ, ತೇಗು ಗಿಡಗಳನ್ನು ಬೆಳೆಸಿದ್ದಾರೆ. ಮಾವಿನಲ್ಲೂ ತರಹೇವಾರಿ ತಳಿಗಳು ಇಲ್ಲಿವೆ. ಆಪೂಸು, ಮಲ್ಲಿಕಾ, ರಸಪೂರಿ, ಕಲ್ಮಿ, ನೀಲಂ, ಆಂಧ್ರದ ಚಿನ್ನರಸಂ ಸೇರಿ ವಿವಿಧ ಮಾವಿನ ತಳಿಗಳ 560 ಗಿಡಗಳಿವೆ. ಎಲ್ಲ ಗಿಡಗಳಿಗೂ ಸಾವಯವ ಗೊಬ್ಬರ, ಜೀವಾಮೃತ ಬಳಸುತ್ತಾರೆ. ಇದರ ಜತೆಗೆ ಪಂಚಗವ್ಯ, ಬ್ರಹ್ಮಾಸ್ತ್ರ, ಘನಜೀವಾಮೃತ, ಅಗ್ನಿಅಸ್ತ್ರ, ಹುಳಿ ಮಜ್ಜಿಗೆ, ನೀಮ್ ಪೇಸ್ಟ್ ಮತ್ತು ಶುಂಠಿ ಅಸ್ತ್ರ ಮನೆಯಲ್ಲೇ ತಯಾರಿಸಿ ಗಿಡಗಳಿಗೆ ನೀಡುತ್ತಾರೆ. ರಾಸಾಯನಿಕ ಗೊಬ್ಬರ ಬಳಕೆ ಇಲ್ಲಿ ನಿಷಿದ್ಧ.

ಗ್ರಾಹಕರಿಂದ ಬೇಡಿಕೆ: ಮಾವಿನ ಹಣ್ಣು ಮತ್ತು ಇತರ ಬೆಳೆಗಳಿಗೆ ಮಾರುಕಟ್ಟೆ
ಯನ್ನು ಸ್ವತಃ ಕಂಡುಕೊಳ್ಳಲಾಗಿದೆ. ಗ್ರಾಹಕರ ಸೃಷ್ಟಿಸಿಕೊಂಡಿದ್ದಾರೆ. ‘ಬೆಂಗಳೂರು, ಚೆನೈ, ಹೈದರಾಬಾದ್ ನಗರಗಳ ಗ್ರಾಹಕರಿಂದ ನಮ್ಮಲ್ಲಿ ಬೆಳೆದ
ಮಾವಿನ ಹಣ್ಣುಗಳಿಗೆ ಹೆಚ್ಚು ಬೇಡಿ
ಕೆಯಿದೆ’ ಎಂದು ತಿಳಿಸುತ್ತಾರೆ ಆನಂದ.

‘ರಾಸಾಯನಿಕ ಗೊಬ್ಬರ ಹಾಕಿ ಹಣ್ಣುಗಳನ್ನು ಬೆಳೆಸುವ ಪದ್ಧತಿ ಈಗ ಹೆಚ್ಚಾಗಿದೆ. ಹೀಗೆ ಮಾಡುವುದರಿಂದ ರುಚಿ ಬದಲಾಗುತ್ತದೆ. ಹೆಚ್ಚು ದಿನವಿಟ್ಟರೆ ಹಣ್ಣುಗಳು ಕೊಳೆಯುತ್ತವೆ. ಸಾವಯವ, ಪಂಚಗವ್ಯದಿಂದ ಬೆಳೆದ ಹಣ್ಣುಗಳು ರುಚಿ ಹೆಚ್ಚು, ಅವು ಕೊಳೆಯುವುದಿಲ್ಲ. ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ’ ಎಂದರು.

ಸೋಲಾರ್ ಅಳವಡಿಕೆ: ‘ಜಮೀನಿನಲ್ಲಿಯೇ ಒಂದು ಕಡೆಗೆ ಚಿಕ್ಕ ಕೆರೆ ನಿರ್ಮಾಣ ಮಾಡಿಕೊಳ್ಳಲಾಗಿದೆ. ಸೋಲಾರ್ ವಿದ್ಯುತ್ ಶಕ್ತಿಯಿಂದ ಬೆಳೆಗಳಿಗೆ ನೀರುಣ್ಣಿಸಲಾಗುತ್ತಿದೆ. ಸಾವಯವ ಕೃಷಿಯಿಂದಾಗಿ ಮಣ್ಣಿಗೆ ಜೀವಕಳೆ ಬಂದಿದೆ. ಎರೆಹುಳು ಸಂತತಿ ಹೆಚ್ಚಾಗಿದೆ’ ಎಂದು ಹೇಳಿದರು.

(ಮಾಹಿತಿಗೆ: 9620367124)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT