ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರಿಗೆ ಸಂಸ್ಥೆ ಮರು ನಾಮಕರಣ ಯಾವಾಗ?

ಕಿತ್ತೂರು ಕರ್ನಾಟಕ ಘೋಷಣೆಯಾಗಿ ಎಂಟು ತಿಂಗಳು, ಇನ್ನೂ ಸ್ಥಾಪನೆಯಾಗದ ನಿಗಮ
Last Updated 3 ಜುಲೈ 2022, 14:23 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ಮುಂಬೈ ಕರ್ನಾಟಕ ಭಾಗವನ್ನು ‘ಕಿತ್ತೂರು ಕರ್ನಾಟಕ’ ಎಂದು ಮರು ನಾಮಕರಣ ಮಾಡಿದಾಗ ಈ ಭಾಗದ ಜನರಲ್ಲಿ ಹರ್ಷ ಮೂಡಿತು. ಆದರೆ, ಸಾರಿಗೆ ಸಂಸ್ಥೆಯ ‘ವಾಯವ್ಯ ಕರ್ನಾಟಕ’ ಎಂಬ ಹೆಸರನ್ನು ಬದಲಾಯಿಸಿ ‘ಕಿತ್ತೂರು ಕರ್ನಾಟಕ ಸಾರಿಗೆ’ ಎಂದು ಪುನರ್ ನಾಮಕರಣ ಮಾಡಬೇಕು ಎಂಬ ಬೇಡಿಕೆ ಇನ್ನೂ ಈಡೇರಿಲ್ಲ.

ಈ ಹಿಂದೆ ಹೈದರಾಬಾದ್‌ ಕರ್ನಾಟಕ ಎಂದು ಕರೆಯುತ್ತಿದ್ದ ಭಾಗವನ್ನು ಬಿ.ಎಸ್‌. ಯಡಿಯೂರಪ್ಪ ಅವರು ಕಲ್ಯಾಣ ಕರ್ನಾಟಕ ಎಂದು ಬದಲಾಯಿಸಿದರು. ಅದರ ಬೆನ್ನಿಗೇ ಆ ಭಾಗದ ಸಾರಿಗೆ ಸಂಸ್ಥೆಗೂ ಕಲ್ಯಾಣ ಕರ್ನಾಟಕ ಸಾರಿಗೆ ಎಂದೇ ನಾಮಕರಣ ಮಾಡಲಾಯಿತು. ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯನ್ನೂ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಎಂದು ಬದಲಾಯಿಸಲಾಯಿತು. ಇದರಿಂದ ಆ ಭಾಗದ ಎಲ್ಲ ಸರ್ಕಾರಿ ಪ್ರಾತಿನಿಧಿಕ ಸಂಸ್ಥೆಗಳೂ ಕನ್ನಡಮಯವಾಗಿವೆ. ಆದರೆ, ಇಂಥ ಪ್ರಯತ್ನವನ್ನು ಕಿತ್ತೂರು ಭಾಗದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇನ್ನೂ ಮಾಡಿಲ್ಲ ಎನ್ನುವುದು ಜನರ ಬೇಸರ.

‘ಕಲ್ಯಾಣ ಕರ್ನಾಟಕ ಘೋಷಣೆ ಮಾಡಿದ ರೀತಿಯಲ್ಲಿಯೇ ಕಿತ್ತೂರು ಕರ್ನಾಟಕವನ್ನು ಪರಿಗಣಿಸಲಾಗುವುದು ಎಂದು ಮುಖ್ಯಮಂತ್ರಿ ಪ್ರಕಟಿಸಿ, ಎಂಟು ತಿಂಗಳು ಕಳೆದಿವೆ. ಆದರೂ ಈ ಭಾಗದ ನಾಮಫಲಕಗಳಲ್ಲಿ ಕಿತ್ತೂರು ಕರ್ನಾಟಕ ಎಂಬುದು ಇನ್ನೂ ಮೂಡಿಲ್ಲ’ ಎನ್ನುತ್ತಾರೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಸಂಘಟನೆ ಅಧ್ಯಕ್ಷ ಮಹಾಂತೇಶ ಕರಬಸನ್ನವರ.

‘ಇತ್ತೀಚೆಗೆ ನಡೆದ ವಾಯವ್ಯ ಶಿಕ್ಷಕ ಮತ್ತು ಪದವೀಧರ ಕ್ಷೇತ್ರಕ್ಕೂ ಕಿತ್ತೂರು ಕರ್ನಾಟಕ ಕ್ಷೇತ್ರ ಎಂದು ಬದಲಾವಣೆ ಮಾಡಲಿಲ್ಲ. ಮರು ನಾಮಕರಣ ಮಾಡಿದ್ದರೆ ಈ ಭಾಗಕ್ಕೊಂದು ಗೌರವ ಸಿಗುತ್ತಿತ್ತು. ಅವರಿಗೂ ಅಧಿಕೃತ ಕಿತ್ತೂರು ಕರ್ನಾಟಕದ ಪರಿಷತ್ ಸದಸ್ಯರು ಎಂಬ ಹೆಮ್ಮೆ ಇರುತ್ತಿತ್ತು’ ಎಂಬುದು ಅವರ ಅನಿಸಿಕೆ.

ಐತಿಹಾಸಿಕ ನಿರ್ಧಾರ: ನವೆಂಬರ್ ತಿಂಗಳ ಮೊದಲ ವಾರದಲ್ಲಿ ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ಬೆಳಗಾವಿ, ಉತ್ತರ ಕನ್ನಡ,‌ ವಿಜಯಪುರ, ಬಾಗಲಕೋಟೆ, ಗದಗ, ಹಾವೇರಿ ಹಾಗೂ ಧಾರವಾಡ ಜಿಲ್ಲೆಗಳು ಕಿತ್ತೂರು ಕರ್ನಾಟಕಕ್ಕೆ ಸೇರ್ಪಡೆ ಆಗುತ್ತವೆ ಎಂದು ಮುಖ್ಯಮಂತ್ರಿ ಪ್ರಕಟಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT