ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿ.ವಿ ಕಾಲೇಜುಗಳ ನಿರ್ವಹಣಾ ವ್ಯವಸ್ಥೆ ದೋಷ: ಅಂಕಪಟ್ಟಿಗಾಗಿ ವಿದ್ಯಾರ್ಥಿಗಳ ಪರದಾಟ

ಏಕೀಕೃತ ವಿಶ್ವವಿದ್ಯಾಲಯ ಕಾಲೇಜುಗಳ ನಿರ್ವಹಣಾ ವ್ಯವಸ್ಥೆಯಿಂದ ಅವಕಾಶ ವಂಚನೆ
Published : 14 ಸೆಪ್ಟೆಂಬರ್ 2024, 21:00 IST
Last Updated : 14 ಸೆಪ್ಟೆಂಬರ್ 2024, 21:00 IST
ಫಾಲೋ ಮಾಡಿ
Comments

ಬೆಳಗಾವಿ: ಏಕೀಕೃತ ವಿಶ್ವವಿದ್ಯಾಲಯ ಕಾಲೇಜುಗಳ ನಿರ್ವಹಣಾ ವ್ಯವಸ್ಥೆ (ಯುಯುಸಿಎಂಎಸ್‌) ದೋಷಗಳಿಂದ ರಾಜ್ಯದ ಹಲವಾರು ಪದವೀಧರರು ಅಂಕ‍ಪಟ್ಟಿಗೆ ಪರದಾಡುವಂತಾಗಿದೆ.

ವರ್ಷದ ಹಿಂದೆ ಪದವಿ ಶಿಕ್ಷಣ ಮುಗಿಸಿದ್ದರೂ ಇನ್ನೂ ಅಂಕಪಟ್ಟಿ ಸಿಕ್ಕಿಲ್ಲ. ಇದು ಅವಕಾಶಗಳಿಂದ ವಂಚಿತರಾಗುವಂತೆ ಮಾಡಿದೆ.

ಬಿ.ಇಡಿ ಮತ್ತು ಸ್ನಾತಕೋತ್ತರ ಪದವೀಧರರ ಅಂಕಪಟ್ಟಿಗಳಲ್ಲಿ ಸಾಕಷ್ಟು ದೋಷಗಳು ಇವೆ. 1 ಮತ್ತು 2ನೇ ಸೆಮಿಸ್ಟರ್‌ನ ಅಂಕಪಟ್ಟಿಗಳಲ್ಲಿ ವಿದ್ಯಾರ್ಥಿಗಳ ಭಾವಚಿತ್ರ ಪ್ರಕಟಿಸಲಾಗಿದೆ. 3 ಮತ್ತು 4ನೇ ಸೆಮಿಸ್ಟರ್‌ ಅಂಕಪಟ್ಟಿಗಳಲ್ಲಿ ಭಾವಚಿತ್ರ ಪ್ರಕಟವಾಗಿಲ್ಲ. ಈ ಸಮಸ್ಯೆ ಎಲ್ಲರಿಗೂ ಆಗಿಲ್ಲ. ಎಲ್ಲಾ ವಿಶ್ವವಿದ್ಯಾಲಯಗಳ ಕೆಲವು ಕಾಲೇಜುಗಳಲ್ಲಿ ಕಂಡುಬಂದಿದೆ.

‘ಬೆಳಗಾವಿಯ ರಾಣಿ ಚನ್ನಮ್ಮ ವಿ.ವಿಯಿಂದ 2023ರ ಅಕ್ಟೋಬರ್‌ನಲ್ಲಿ ಬಿ.ಇಡಿ  ಶಿಕ್ಷಣ ಮುಗಿಸಿದ್ದೇನೆ. 3 ಮತ್ತು 4ನೇ ಸೆಮಿಸ್ಟರ್‌ನ ಅಂಕಪಟ್ಟಿಗಳಲ್ಲಿ ನನ್ನ ಚಿತ್ರ ಪ್ರಕಟವಾಗಿಲ್ಲ. ಇದಕ್ಕೆ ಯಾರು ಜವಾಬ್ದಾರಿ? ಪದವಿ ಮುಗಿಸಿ ವರ್ಷವಾದರೂ ಉದ್ಯೋಗಕ್ಕೆ ಅರ್ಜಿಹಾಕದ ಸ್ಥಿತಿ ಇದೆ. ಇದರಿಂದ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಅತಿಥಿ ಶಿಕ್ಷಕರ ನೇಮಕಾತಿಗೆ ಅರ್ಜಿಹಾಕಲಾಗಿಲ್ಲ’ ಎಂದು ವಿಜಯಪುರದ ಪ್ರಕಾಶ ತಿಳಿಸಿದರು.

‘ಎಷ್ಟು ಬಾರಿ ಕೇಳಿದರೂ ತಾಂತ್ರಿಕ ದೋಷ’ ಎಂಬ ಉತ್ತರ ಸಿಗುತ್ತಿದೆ. ಈ ದೋಷ ಸರಿಪಡಿಸಬೇಕಾದ ಯುಯುಸಿಎಂಎಸ್‌ ವ್ಯವಸ್ಥೆ ಸರಿಪಡಿಸಲು ಮೇಲೆ ಒತ್ತಡ ಹೇರುತ್ತಿಲ್ಲ’ ಎಂದು ಪ್ರಾಂಶುಪಾಲರೊಬ್ಬರು ದೂರಿದರು.

ಏನಿದು ವ್ಯವಸ್ಥೆ: ವಿಶ್ವವಿದ್ಯಾಲಯಗಳಿಗೆ ಏಕಗವಾಕ್ಷಿ ವ್ಯವಸ್ಥೆ ಜಾರಿ ಕ್ರಮವಾಗಿ ಸರ್ಕಾರ ಯುಯುಸಿಎಂಎಸ್‌ ವ್ಯವಸ್ಥೆ ಜಾರಿಗೊಳಿಸಿದೆ. ಈ ವ್ಯವಸ್ಥೆಯಡಿ ಇದೇ ಮೊದಲ ಬಾರಿಗೆ ಅಂಕಪಟ್ಟಿ ಸಿದ್ದವಾಗುತ್ತಿದೆ. ಈ ವರ್ಷ ಬಿ.ಇಡಿ, ಸ್ನಾತಕೋತ್ತರ ಪದವಿಗಳ ಅಂಕಪಟ್ಟಿ ಸಿದ್ಧಪಡಿಸುವ ಹೊಣೆ ನೀಡಲಾಗಿದೆ. ಮುಂದಿನ ವರ್ಷದಿಂದ ಎಲ್ಲ ಪದವಿಗಳೂ ಇದರ ವ್ಯಾಪ್ತಿಗೆ ಬರಲಿವೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಆರ್‌ಸಿಯು ಉಪ ಕುಲಸಚಿವೆ ಗೌರಮ್ಮ ಪಾಟೀಲ, ‘ಅಂಕ‍ಪಟ್ಟಿಯಲ್ಲಿ ಭಾವಚಿತ್ರ ಸಮಸ್ಯೆ, ಕಾಲಂ ದೋಷಗಳು ಇವೆ. ಸರಿಪಡಿಸಲು ಕೋರಿಕೆ ಸಲ್ಲಿಸಲಾಗುತ್ತಿದೆ. ಸರ್ವರ್‌ನಲ್ಲಿ ಡೇಟಾ ಅಪ್ಡೇಟ್‌ ಆಗುತ್ತಿಲ್ಲ ಎಂಬ ಉತ್ತರ  ಸಿಕ್ಕಿದೆ. ಅಂಥ ವಿದ್ಯಾರ್ಥಿಗಳ ಫಲಿತಾಂಶಗಳನ್ನು ಮತ್ತೊಮ್ಮೆ ಅಪ್ಲೋಡ್‌ ಮಾಡಲಾಗುತ್ತಿದೆ’ ಎಂದರು.

‘ಆರ್‌ಸಿಯು ವ್ಯಾಪ್ತಿಯಲ್ಲಿ 421 ಕಾಲೇಜುಗಳಿವೆ. ಈಗಾಗಲೇ 200ಕ್ಕೂ ಅಧಿಕ ಕಾಲೇಜುಗಳ ಅಂಕಪಟ್ಟಿಗಳನ್ನು ಡೌನ್‌ಲೋಡ್‌ ಮಾಡಲಾಗಿದೆ. ಹಲವು ಕಾಲೇಜುಗಳು ಹಳ್ಳಿಗಳಲ್ಲಿದ್ದು, ಅಲ್ಲಿ ಸಮಸ್ಯೆ ಆಗಿದೆ’ ಎಂದರು.

‘ಎಲ್ಲಾ ವಿ.ವಿಗಳ ಪ್ರತಿನಿಧಿಗಳ ತಂಡಗಳು ಯುಯುಸಿಎಂಎಸ್‌ ಜತೆ ಸಂಪರ್ಕದಲ್ಲಿದೆ. ವಾಟ್ಸ್‌ಆ್ಯಪ್‌ ಗ್ರೂಪ್‌ ರಚಿಸಲಾಗಿದೆ. ಅಲ್ಲಿ ಸಮಸ್ಯೆ, ಬೆಳವಣಿಗೆ ನೀಡುತ್ತಿದ್ದೇವೆ. ಆದಷ್ಟು ಶೀಘ್ರ ಸಮಸ್ಯೆ ಬಗೆಹರಿಸಲಾಗುವುದು’ ಎಂದು ಪ್ರತಿಕ್ರಿಯಿಸಿದರು. 

ಅಕ್ಟೋಬರ್‌ನಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಘಟಿಕೋತ್ಸವ ನಡೆಯಲಿದೆ. ಅಷ್ಟರಲ್ಲಿ ಎಲ್ಲರಿಗೂ ಕ್ರಮವಾದ ಅಂಕ‍ಪಟ್ಟಿ ನೀಡಲಾಗುವುದು.
–ಗೌರಮ್ಮ ಪಾಟೀಲ, ಉಪ ಕುಲಸಚಿವೆ, ಆರ್‌ಸಿಯು, ಬೆಳಗಾವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT