ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಟಿಪಿ ನಿರ್ಮಾಣ; ಚರ್ಚಿಸಲು ಸಮಿತಿ ರಚನೆಗೆ ತೀರ್ಮಾನ

ಜಮೀನು ಕಳೆದುಕೊಂಡರ ವಿರೋಧ
Last Updated 5 ಜನವರಿ 2019, 12:09 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿಗೆ ಸಮೀಪದ ಹಲಗಾ ಗ್ರಾಮದ ಬಳಿ ಒಳಚರಂಡಿ ನೀರಿನ ಶುದ್ಧೀಕರಣ ಘಟಕ (ಎಸ್‌ಟಿಪಿ) ನಿರ್ಮಿಸಲು ವಿರೋಧ ವ್ಯಕ್ತಪಡಿಸುತ್ತಿರುವ ರೈತರ ಮನವೊಲಿಸಲು ಶಾಸಕರು ಹಾಗೂ ಜಿಲ್ಲಾಧಿಕಾರಿಕಾರಿ ಒಳಗೊಂಡಂತೆ ಐದು ಜನ ರೈತರ ಸಮಿತಿ ರಚಿಸಲು ಸಚಿವ ಸತೀಶ ಜಾರಕಿಹೊಳಿ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಭೆ ತೀರ್ಮಾನಿಸಿತು.

ಇದಕ್ಕೂ ಮೊದಲು ನಡೆದ ಚರ್ಚೆಯಲ್ಲಿ ಎಸ್‌ಟಿಪಿ ಸ್ಥಾಪಿಸಲು ಜಮೀನು ಕಳೆದುಕೊಂಡ 21 ರೈತರು ತೀವ್ರ ವಿರೋಧ ವ್ಯಕ್ಪಪಡಿಸಿದ್ದರು. ‘10 ವರ್ಷಗಳ ಹಿಂದೆಯೇ ನಮ್ಮ 17 ಎಕರೆಯಷ್ಟು ಜಮೀನನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಪರಿಹಾರ ಧನ ಕೂಡ ಅತ್ಯಂತ ಕಡಿಮೆ ನೀಡಲಾಗಿದೆ. ನಮಗೆ ಹಣ ಬೇಡ, ನಮ್ಮ ಜಮೀನು ನಮಗೆ ವಾಪಸ್‌ ಬೇಕು’ ಎಂದು ಹಠ ಹಿಡಿದರು.

ರೈತರ ಬೆಂಬಲಕ್ಕೆ ನಿಂತ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳಕರ, ‘ ಈ ಹಿಂದೆ ಸುವರ್ಣ ವಿಧಾನಸೌಧ ನಿರ್ಮಿಸಲು ನಮ್ಮ ಕ್ಷೇತ್ರದ ಜಮೀನನ್ನೇ ವಶಪಡಿಸಿಕೊಳ್ಳಲಾಗಿತ್ತು. ಹೆದ್ದಾರಿ ವಿಸ್ತರಣೆ ಮಾಡಲು ಕೂಡ ಇದೇ ಜಮೀನು ಬೇಕು. ಈಗ ಶುದ್ಧೀಕರಣ ಘಟಕ ಸ್ಥಾಪಿಸಲು ಕೂಡ ಇಲ್ಲಿಯ ಜಮೀನೇ ಏಕೆ ಬೇಕು? ಪ್ರತಿ ಬಾರಿ ಗ್ರಾಮೀಣ ಕ್ಷೇತ್ರದ ಜಮೀನುಗಳನ್ನೇ ಏಕೆ ಪಡೆಯಲಾಗುತ್ತಿದೆ. ಕೆಲ ವರ್ಷಗಳ ಹಿಂದೆ ತ್ಯಾಜ್ಯ ಸುರಿಯಲಾಗುತ್ತಿದ್ದ ಬೆಳಗಾವಿ ದಕ್ಷಿಣ ಕ್ಷೇತ್ರ ವ್ಯಾಪ್ತಿಯ ಖಾಸಬಾಗದಲ್ಲಿ ಏಕೆ ಎಸ್‌ಟಿಪಿ ಸ್ಥಾಪಿಸಬಾರದು?’ ಎಂದು ಪ್ರಶ್ನಿಸಿದರು.

ಮಧ್ಯಪ್ರವೇಶಿಸಿದ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ, ‘ನಾನು ಅಭಿವೃದ್ಧಿ ವಿರೋಧಿ ಅಲ್ಲ. ಈ ಜಾಗವು ತ್ಯಾಜ್ಯ ಘಟಕ ನಿರ್ಮಿಸಲು ಯೋಗ್ಯವಲ್ಲ ಎಂದು ಸ್ಥಳ ಪರಿಶೀಲಿಸಿದ ಅಧಿಕಾರಿಗಳು ಹೇಳಿದ್ದಾರೆ. ಮತ್ತೇಕೆ ಈ ಜಾಗವನ್ನು ಪ್ರಸ್ತಾಪಿಸುತ್ತಿದ್ದೀರಿ?’ ಎಂದು ವಾಗ್ವಾದಕ್ಕೆ ಇಳಿದರು.

‘ಈ ಜಾಗ ಸೂಕ್ತವೆಂದು ಅಧಿಕಾರಿಗಳು ಹೇಳಲಿ. ಜನರನ್ನು ಮನವೊಲಿಸುವ ಕೆಲಸ ಮಾಡುತ್ತೇನೆ. ನಾನಿಲ್ಲ ರಾಜಕಾರಣ ಮಾಡಲು ಬಂದಿಲ್ಲ’ ಎಂದು ಚುಚ್ಚಿದರು.

ಲಕ್ಷ್ಮಿ ಮಾತನಾಡಿ, ‘ಇದು ರಾಜಕಾರಣ ಅಲ್ಲ, ರೈತರಿಗೆ ಅನ್ಯಾಯವಾಗುತ್ತಿದೆ ಎಂದಷ್ಟೇ ಹೇಳುತ್ತಿದ್ದೇನೆ. ಬರೀ ಹೆಸರು ಹೇಳಿದ್ದಕ್ಕೆ ರಾಜಕಾರಣ ಎಂದು ಹೇಳುತ್ತಿದ್ದೀರಲ್ಲ? ನಮ್ಮ ಕ್ಷೇತ್ರದ ರೈತರಿಗೆ ಅನ್ಯಾಯವಾಗಬಾರದು ಎನ್ನುವುದಷ್ಟೇ ನನ್ನ ಕಳಕಳಿ’ ಎಂದು ಮಾರುತ್ತರ ನೀಡಿದರು.

ಮಹಾನಗರ ಪಾಲಿಕೆ ಆಯುಕ್ತ ಶಶಿಧರ ಕುರೇರ ಮಾತನಾಡಿ, ‘ಘಟಕ ನಿರ್ಮಿಸಲು 2010ರಲ್ಲಿ ಸುಮಾರು 21 ರೈತರ 17 ಎಕರೆ ಜಾಗವನ್ನು ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು. ಕೆಲವರು ನ್ಯಾಯಾಲಯಕ್ಕೆ ಹೋದರು. ಹೀಗಾಗಿ ವಿಳಂಬವಾಯಿತು. ಕಳೆದ ವರ್ಷ ನ್ಯಾಯಾಲಯವು ರೈತರ ಅರ್ಜಿಯನ್ನು ವಜಾಗೊಳಿಸಿತು. ಕೆಲಸ ಆರಂಭಿಸಲು ಸ್ಥಳಕ್ಕೆ ತೆರಳಿದಾಗ, ಪುನಃ ಕೆಲವು ರೈತರು ವಿರೋಧ ವ್ಯಕ್ತಪಡಿಸಿದರು. ಹೀಗಾಗಿ, ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ’ ಎಂದು ವಿವರಿಸಿದರು.

‘ಸುವರ್ಣ ವಿಧಾನಸೌಧ ನಿರ್ಮಾಣಕ್ಕೆ ನೀಡಿದಷ್ಟು ಪರಿಹಾರ ನೀಡಬೇಕೆಂದು ಕೆಲವು ರೈತರು ಆಗ್ರಹಿಸಿದ್ದರು’ ಎಂದು ಶಶಿಧರ ಹೇಳಿದಾಗ, ರೈತರು ವಿರೋಧ ವ್ಯಕ್ತಪಡಿಸಿದರು.

‘ನಮ್ಮನ್ನು ಯಾರೂ ಕೇಳಿಲ್ಲ. ಹಾದಿ ಹಿಡಿದು ಹೋಗುವವರನ್ನು ಕೇಳಿರಬೇಕು. ನಮ್ಮ ಜಮೀನು ನೀಡಲು ನಾವು ಸಿದ್ಧರಿಲ್ಲ. ಜಮೀನು ವಾಪಸ್‌ ನೀಡಿ, ಇಲ್ಲದಿದ್ದರೆ ವಿಷ ಕುಡಿಯುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಸಂಸದ ಪ್ರಕಾಶ ಹುಕ್ಕೇರಿ ಮಾತನಾಡಿ, ‘ಯಾರು ವಿರೋಧ ಮಾಡುತ್ತಾರೆಯೋ ಅಂತಹವರ ಜಮೀನು ಬಿಟ್ಟುಬಿಡಿ. ಯಾರು ಇಷ್ಟಪಟ್ಟು ಮುಂದೆ ಬರುತ್ತಾರೆಯೋ ಅಂತಹವರ ಜಮೀನು ಪಡೆದುಕೊಂಡು, ಘಟಕ ಸ್ಥಾಪಿಸಿ. ಇದರ ಬಗ್ಗೆ ಚರ್ಚಿಸಲು ಶಾಸಕರು, ಜಿಲ್ಲಾಧಿಕಾರಿ ಹಾಗೂ 5 ಜನ ರೈತರನ್ನು ಒಳಗೊಂಡ ಸಮಿತಿಯನ್ನು ರಚಿಸಬೇಕು. ಸಮಿತಿಯ ತೀರ್ಮಾನದಂತೆ ಮುಂದಿನ ನಿರ್ಧಾರ ಕೈಗೊಳ್ಳಬೇಕು’ ಎಂದು ಸಲಹೆ ನೀಡಿದರು.

ಇದು ಎಲ್ಲರಿಗೂ ಒಪ್ಪಿಗೆಯಾಯಿತು. ತಕ್ಷಣ ಸಮಿತಿ ರಚಿಸಿ, ತೀರ್ಮಾನ ಕೈಗೊಳ್ಳುವಂತೆ ಸಚಿವ ಸತೀಶ ಜಾರಕಿಹೊಳಿ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT