ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಈಶಾನ್ಯ ರಾಜ್ಯದವರ ಒಲವು ಬಿಜೆಪಿಗಿರಲಿ’

ನಾರ್ಥ್‌–ಈಸ್ಟ್ ಸಮಾವೇಶದಲ್ಲಿ ಜನಪ್ರತಿನಿಧಿಗಳ ಮನವಿ
Last Updated 6 ಮೇ 2018, 19:37 IST
ಅಕ್ಷರ ಗಾತ್ರ

ಬೆಂಗಳೂರು: ‘ದೇಶದ ಈಶಾನ್ಯ ಭಾಗಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಒದ್ದೋಡಿಸಿದಂತೆಯೇ, ಇಲ್ಲೂ ‘ಕಾಂಗ್ರೆಸ್ ಮುಕ್ತ ಕರ್ನಾಟಕ’ ನಿರ್ಮಿಸಲು ನೀವೆಲ್ಲ ಸಹಕಾರ ನೀಡಬೇಕು’ ಎಂದು ಈಶಾನ್ಯ ರಾಜ್ಯಗಳ ಜನಪ್ರತಿನಿಧಿಗಳು ತಮ್ಮ ಜನರಿಗೆ ಮನವಿ ಮಾಡಿದರು.

ನಗರದ ಅರಮನೆ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಸಮಾವೇಶದಲ್ಲಿ ಅಸ್ಸಾಂ, ನಾಗಲ್ಯಾಂಡ್, ತ್ರಿಪುರ, ಮಣಿಪುರ, ಮೇಘಾಲಯ ಹಾಗೂ ಮಿಜೋರಾಂನ ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.

ತ್ರಿಪುರಾ ಉಪ ಮುಖ್ಯಮಂತ್ರಿ ಜಿಷ್ಣು ದೇವ್‌ ಬರ್ಮನ್‌, ‘ಶಿಕ್ಷಣ ಹಾಗೂ ಉದ್ಯೋಗ ಅರಸಿ ಸಾವಿರಾರು ಯುವಕ–ಯುವತಿಯರು ಬೆಂಗಳೂರಿಗೆ ಬಂದಿದ್ದಾರೆ. ಅವರಿಗೆ ರಕ್ಷಣೆ ಒದಗಿಸುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ನಮ್ಮವರ ಮೇಲೆ ನಿರಂತರ ಹಲ್ಲೆಗಳು ನಡೆಯುತ್ತಿವೆ. ಇಂಥ ಸೂಕ್ಷ್ಮ ವಿಚಾರಗಳು ಕೇಂದ್ರದ ಗಮನಕ್ಕೆ ಬಂದ ನಂತರವೇ ಗಂಭೀರ ಸ್ವರೂಪ ಪಡೆದುಕೊಳ್ಳುತ್ತವೆ. ನೀವೆಲ್ಲ ಇಲ್ಲಿ ಸುಖ–ಶಾಂತಿಯಿಂದ ಬದುಕಬೇಕೆಂದರೆ ಇಲ್ಲಿ ಬಿಜೆಪಿಯೇ ಅಧಿಕಾರದ ಚುಕ್ಕಾಣಿ ಹಿಡಿಯಬೇಕು’ ಎಂದು ಹೇಳಿದರು.

ಅಸ್ಸಾಂ ಶಿಕ್ಷಣ ಸಚಿವ ಸಿದ್ದಾರ್ಥ್ ಭಟ್ಟಚಾರ್ಯ, ‘2012–13ರಲ್ಲಿ ಬೆಂಗಳೂರಿನಲ್ಲಿ ಈಶಾನ್ಯ ರಾಜ್ಯದವರ ಮೇಲೆ ದಾಳಿಗಳು ನಡೆದಾಗ, ಎಬಿವಿಪಿ ಹಾಗೂ ಆರ್‌ಎಸ್‌ಎಸ್ ಕಾರ್ಯಕರ್ತರು ಸೋದರರಂತೆ ರಕ್ಷಣೆಗೆ ನಿಂತಿದ್ದರು. ಅದರ ಋಣಭಾರ ನಿಮ್ಮ ಮೇಲಿದೆ. ಹೀಗಾಗಿ, ಎಲ್ಲರೂ ಬಿಜೆಪಿಗೇ ಮತ ಚಲಾಯಿಸಿ. ಮತದಾನ ಹಕ್ಕು ಇಲ್ಲದಿರುವವರು, ತಮ್ಮ ಪರಿಚಿತರು ಕಮಲದ ಗುರುತಿಗೇ ಮತ ಹಾಕುವಂತೆ ಮಾಡುವ ಮೂಲಕ ನೈತಿಕ ಬೆಂಬಲ ಸೂಚಿಸಿ’ ಎಂದು ಮನವಿ ಮಾಡಿದರು.

‘ಈಶಾನ್ಯ ರಾಜ್ಯದವರೆಲ್ಲ ತಮ್ಮ ಕುಟುಂಬ ಸದಸ್ಯರಿದ್ದಂತೆ ಎಂದು ಕಾಂಗ್ರೆಸ್ ಸರ್ಕಾರ ಹೇಳುತ್ತಿದೆ. ಆದರೆ, ಈಶಾನ್ಯ ರಾಜ್ಯಗಳಲ್ಲೇ ಆ ಪಕ್ಷಕ್ಕೆ ಅಸ್ತಿತ್ವ ಇಲ್ಲದಂತಾಗಿದೆ’ ಎಂದು ತ್ರಿಪುರಾ ಉಪ ಮುಖ್ಯಮಂತ್ರಿ ಜಿಷ್ಣು ದೇವ್‌ ಬರ್ಮನ್‌ ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT