ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿಢೀರ್‌ ಬದಲಾವಣೆ; ರಮೇಶಗೆ ಮತ್ತೆ ಒಲಿದ ಜಿಲ್ಲಾ ಉಸ್ತುವಾರಿ ಹೊಣೆ

Last Updated 2 ಜೂನ್ 2020, 13:34 IST
ಅಕ್ಷರ ಗಾತ್ರ

ಬೆಳಗಾವಿ: ದಿಢೀರ್‌ ಆಗಿ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ರಮೇಶ ಜಾರಕಿಹೊಳಿ ಮತ್ತೆ ನೇಮಕವಾಗಿದ್ದಾರೆ. ರಾಜ್ಯಸಭಾ ಟಿಕೆಟ್‌ಗಾಗಿ ಜಿಲ್ಲೆಯವರಾದ ಪ್ರಭಾಕರ ಕೋರೆ ಹಾಗೂ ರಮೇಶ ಕತ್ತಿ ಅವರ ನಡುವೆ ತೀವ್ರ ಪೈಪೋಟಿ ನಡೆದಿರುವ ಈ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್‌ ಶೆಟ್ಟರ್‌ ಅವರನ್ನು ಬದಲಾಯಿಸಿ, ರಮೇಶ ಅವರಿಗೆ ನೀಡಿರುವುದು ಚರ್ಚೆಗೆ ಗ್ರಾಸ ಒದಗಿಸಿದೆ.

ಕಳೆದ ವರ್ಷ ರಮೇಶ ಜಾರಕಿಹೊಳಿ ಅವರು ಜೆಡಿಎಸ್‌–ಕಾಂಗ್ರೆಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಕೆಡವಿ, ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕಳೆದ ಡಿಸೆಂಬರ್‌ನಲ್ಲಿ ನಡೆದ ಗೋಕಾಕ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಶಾಸಕರಾಗಿ ಆಯ್ಕೆಯಾಗಿದ್ದ ಅವರಿಗೆ ಸುಮಾರು 6 ತಿಂಗಳ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ದೊರೆತಿದೆ.

ಶಾಸಕರಾಗಿ ಆಯ್ಕೆಯಾದ ನಂತರ ಎರಡು ತಿಂಗಳ ಬಳಿಕ ಸಚಿವ ಸಂಪುಟ ವಿಸ್ತರಣೆಯಲ್ಲಿ ರಮೇಶ ಅವರಿಗೆ ಜಲಸಂಪನ್ಮೂಲ ಸಚಿವ ಸ್ಥಾನ ನೀಡಲಾಗಿತ್ತು. ಇವರ ಜೊತೆ, ಲಕ್ಷ್ಮಣ ಸವದಿ, ಶಶಿಕಲಾ ಜೊಲ್ಲೆ, ಶ್ರೀಮಂತ ಪಾಟೀಲ ಅವರೂ ಸಚಿವರಾಗಿದ್ದರು. ಜಿಲ್ಲೆಯ ನಾಲ್ಕು ಜನ ಸಚಿವರಾಗಿದ್ದರೂ ಯಾರೊಬ್ಬರಿಗೂ ಉಸ್ತುವಾರಿ ಸ್ಥಾನವನ್ನು ನೀಡಿರಲಿಲ್ಲ. ಪಕ್ಕದ ಧಾರವಾಡ ಜಿಲ್ಲೆಯ ಜಗದೀಶ್‌ ಶೆಟ್ಟರ್‌ ಅವರಿಗೆ ಹೆಚ್ಚುವರಿಯಾಗಿ ಬೆಳಗಾವಿಯ ಉಸ್ತುವಾರಿಯನ್ನು ನೀಡಲಾಗಿತ್ತು. ಆಗ ನೀಡದ ಸ್ಥಾನವನ್ನು ಈಗ ದಿಢೀರನೇ ಏಕೆ ನೀಡಿದರು ಎನ್ನುವ ಕುತೂಹಲ ಕೆರಳಿಸಿದೆ.

ಮೂರನೇ ಬಾರಿ ಉಸ್ತುವಾರಿ

ರಮೇಶ ಜಾರಕಿಹೊಳಿ ಅವರು ಸತತ 6 ಸಲ ಶಾಸಕರಾಗಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದಲ್ಲಿ ಹಾಗೂ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌– ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದಲ್ಲಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಮೂರನೇ ಬಾರಿಗೆ ಜವಾಬ್ದಾರಿಯನ್ನು ಹೊತ್ತಿದ್ದಾರೆ.

ರಾಜ್ಯಸಭಾ ಚುನಾವಣೆ ನಂಟು?

ಸದ್ಯದಲ್ಲಿಯೇ ನಡೆಯಲಿರುವ ರಾಜ್ಯಸಭಾ ಚುನಾವಣೆಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿ ರಮೇಶ ಅವರನ್ನು ನೇಮಿಸುವುದಕ್ಕೂ ನಂಟಿದೆ ಎಂದು ಹೇಳಲಾಗುತ್ತಿದೆ. ಹಾಲಿ ಸದಸ್ಯ ಪ್ರಭಾಕರ ಕೋರೆ ಅವರು ಮತ್ತೊಂದು ಅವಧಿಗೆ ಸದಸ್ಯರಾಗಲು ಬಯಸಿದ್ದಾರೆ. ಮತ್ತೊಂದೆಡೆ, ಶಾಸಕ ಉಮೇಶ ಕತ್ತಿ ಅವರ ಸಹೋದರ ರಮೇಶ ಕತ್ತಿ ಅವರು ಕೂಡ ರಾಜ್ಯಸಭಾ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ರಮೇಶ ಜಾರಕಿಹೊಳಿ ಅವರು ಕತ್ತಿ ಪರವಾಗಿ ತೀವ್ರ ಒತ್ತಡ ಹೇರುತ್ತಿದ್ದು, ಅವರನ್ನು ಸಮಾಧಾನ ಪಡಿಸಲು ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ನೀಡಲಾಗಿದೆ. ಈ ಮೂಲಕ ಪಕ್ಷ ಆಯ್ಕೆ ಮಾಡುವ ಅಭ್ಯರ್ಥಿ ಪರವಾಗಿ ಇರುವಂತೆ ಮಾಡುವ ತಂತ್ರ ಇದರ ಹಿಂದೆ ಇದೆ ಎನ್ನಲಾಗಿದೆ.

ಶೆಟ್ಟರ್‌ ವಿರುದ್ಧ ಅಸಮಾಧಾನ

ಕಳೆದ ವರ್ಷ ಸಂಭವಿಸಿದ್ದ ಪ್ರವಾಹ ಹಾಗೂ ಇತ್ತೀಚಿನ ಕೊರೊನಾ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಜಗದೀಶ್‌ ಶೆಟ್ಟರ್‌ ಕೆಲಸ ತೃಪ್ತಿ ತಂದಿಲ್ಲ. ಧಾರವಾಡ ಜಿಲ್ಲೆಯ ಜೊತೆ ಬೆಳಗಾವಿ ಜಿಲ್ಲೆಯ ಉಸ್ತುವಾರಿಯೂ ಅವರಿಗೆ ಹೊರೆಯಾಗಿದೆ. ಇದನ್ನು ತಪ್ಪಿಸಬೇಕು ಹಾಗೂ ಸ್ಥಳೀಯ ನಾಯಕರಿಗೆ ಈ ಜವಾಬ್ದಾರಿ ನೀಡಬೇಕು ಎಂದು ಸ್ಥಳೀಯ ಮುಖಂಡರು ಹಲವು ಬಾರಿ ಪಕ್ಷದ ಮುಖಂಡರಿಗೆ ಮನವಿ ಮಾಡಿಕೊಂಡಿದ್ದರು. ಬಹುಶಃ ಅವರ ಮನವಿಯೂ ಬದಲಾವಣೆಗೆ ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT