ಚನ್ನಮ್ಮನ ಕಿತ್ತೂರು: ತಾಲ್ಲೂಕಿನ ಎಂ.ಕೆ. ಹುಬ್ಬಳ್ಳಿಯ ಮಲಪ್ರಭಾ ಸಹಕಾರ ಸಕ್ಕರೆ ಕಾರ್ಖಾನೆಯಲ್ಲಿ (ರಾಣಿ ಶುಗರ್) ನಡೆದಿದೆ ಎನ್ನಲಾದ ಕೋಟ್ಯಂತರ ರೂಪಾಯಿಗಳ ಅವ್ಯವಹಾರ ಖಂಡಿಸಿ ಸೆ.20ರ ಬೆಳಿಗ್ಗೆ 10 ಗಂಟೆಯಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಮಾಡುವುದಾಗಿ ರೈತ ಸಂಘಟನೆಗಳ ಒಕ್ಕೂಟದ ಮುಖಂಡರು ಘೋಷಿಸಿದ್ದಾರೆ.
ಡೊಂಬರಕೊಪ್ಪ ಪ್ರವಾಸಿ ಮಂದಿರದಲ್ಲಿ ಗುರುವಾರ ರೈತ ಮುಖಂಡರ ಸಭೆಯಲ್ಲಿ ಒಕ್ಕೂಟದ ಅಧ್ಯಕ್ಷ ಬೀರಪ್ಪ ದೇಶನೂರ, ಮುಖಂಡರಾದ ಬಸನಗೌಡ ಪಾಟೀಲ, ಬಸವರಾಜ ಮೊಕಾಶಿ ಮಾತನಾಡಿ, ‘ಕಳೆದ ಹಂಗಾಮಿನಲ್ಲಿ ಸಕ್ಕರೆ ಇಳುವರಿಯನ್ನು ಕಡಿಮೆ ತೋರಿಸಿ ರೈತರಿಗೆ ಸೇರಬೇಕಾದ ದುಡ್ಡು ಲೂಟಿ ಮಾಡಿದ್ದಾರೆ’ ಎಂದು ಆರೋಪಿಸಿದರು.
‘ಈ ಭಾಗದ ರೈತರ ಅಭಿವೃದ್ಧಿಗೆ ಕಾರಣವಾಗಿರುವ ಸಹಕಾರ ರಂಗದ ಕಾರ್ಖಾನೆಯನ್ನು ಲೂಟಿಕೋರರ ಕೈಯಿಂದ ತಪ್ಪಿಸಬೇಕಿದೆ. ಇಲ್ಲಿ ನಡೆದ ಅವ್ಯವಹಾರದ ಬಗ್ಗೆ ಎಲ್ಲರಿಗೂ ಮನವಿ ಪತ್ರ ಕೊಟ್ಟು ತನಿಖೆಗೆ ಆಗ್ರಹಿಸಲಾಗಿದೆ. ಉನ್ನತ ಮಟ್ಟದ ತನಿಖೆ ನಡೆಸುವವರೆಗೆ ಧರಣಿ ಹಿಂದಕ್ಕೆ ತೆಗೆದುಕೊಳ್ಳುವುದಿಲ್ಲ’ ಎಂದು ಪ್ರಕಟಿಸಿದರು.
ಮುಖಂಡರಾದ ರುದ್ರಪ್ಪ ಕೊಡ್ಲಿ, ಶಿವಾನಂದ ಜ್ಯೋತಿ, ಈರಣ್ಣ ಅಂಗಡಿ, ಅಶೋಕ ಕಲಾಲ, ಮಲ್ಲಪ್ಪ ಭಂಗಿ, ಸಯ್ಯದ ಪಿರಜಾದೆ, ಸುರೇಶ ಕರವಿನಕೊಪ್ಪ, ಆದಂ ಹೊಂಗಲ ಇದ್ದರು.