ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ಕಬ್ಬಿನ ಬಿಲ್: ₹ 2,185 ಕೋಟಿ ಬಾಕಿ!

ಪಾವತಿಗೆ ಕ್ರಮ: ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ವಿಶಾಲ್ ಭರವಸೆ
Last Updated 8 ಮೇ 2019, 13:48 IST
ಅಕ್ಷರ ಗಾತ್ರ

ಬೆಳಗಾವಿ: ‘ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಕಳೆದ ವರ್ಷದಲ್ಲಿ ಬಾಕಿ ಉಳಿಸಿಕೊಂಡಿರುವ ₹1,185 ಕೋಟಿ ಮತ್ತು 2017–18ನೇ ಸಾಲಿನ ₹ 1ಸಾವಿರ ಕೋಟಿ ಕಬ್ಬಿನ ಬಿಲ್ ಪಾವತಿಗೆ ಸಂಬಂಧಿಸಿದಂತೆ ಕೂಡಲೇ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ.ಆರ್. ವಿಶಾಲ್ ಭರವಸೆ ನೀಡಿದರು.

ಬುಧವಾರ ಇಲ್ಲಿ ನಡೆದ ಕಬ್ಬು ಬೆಳೆಗಾರರು ಮತ್ತು ರೈತ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಬಾಕಿ ಪಾವತಿಸುವಂತೆ ಕಾರ್ಖಾನೆಗಳಿಗೆ ಕಟ್ಟುನಿಟ್ಟಿನ ಸೂಚನೆ ಕೊಡಲಾಗುವುದು. ಆದಾಗ್ಯೂ ಪಾವತಿಸದಿದ್ದರೆ ನಿಯಮಾವಳಿ ಪ್ರಕಾರ ಕ್ರಮ ವಹಿಸಲಾಗುವುದು. ಕಬ್ಬು ಬೆಳೆಗಾರರ ಸಮಸ್ಯೆ ಕೇವಲ ಆರ್ಥಿಕ ಸಮಸ್ಯೆಯಲ್ಲ; ಇದು ಸಾಮಾಜಿಕ ಸಮಸ್ಯೆಯೂ ಆಗಿದೆ. ಹೀಗಾಗಿ, ಎಲ್ಲ ದೃಷ್ಟಿಕೋನದಿಂದಲೂ ಸಮಸ್ಯೆ ಬಗೆಹರಿಸುವ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

ಸಭೆಗೆ ಗೈರು ಹಾಜರಾದರೆ ಕ್ರಮ-ಎಚ್ಚರಿಕೆ:

‘ಬಾಕಿ ಪಾವತಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕರೆಯುವ ಸಭೆಗಳಿಗೆ ಸಕ್ಕರೆ ಕಾರ್ಖಾನೆಗಳ ವ್ಯವಸ್ಥಾಪಕ ನಿರ್ದೇಶಕರು ಹಾಜರಾಗದೇ ಪ್ರತಿನಿಧಿಯನ್ನು ಕಳುಹಿಸುತ್ತಾರೆ. ಇದರಿಂದ ಸಮಸ್ಯೆ ಬಗೆಹರಿಯುತ್ತಿಲ್ಲ’ ಎಂದು ರೈತ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ಮುಂದಿನ ಸಭೆಗೆ ಕಾರ್ಖಾನೆಗಳ ವ್ಯವಸ್ಥಾಪಕ ನಿರ್ದೇಶಕರೇ ಖುದ್ದಾಗಿ ಹಾಜರಾಗಬೇಕು. ಒಂದು ವೇಳೆ ಗೈರು ಹಾಜರಾದರೆ ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಮುಂಬರುವ ದಿನಗಳಲ್ಲಿ ತೂಕ ಮತ್ತು ಅಳತೆ ಪರಿಶೀಲಿಸಲು ಸಕ್ಕರೆ ಕಾರ್ಖಾನೆಗೆ ತೆರಳುವಾಗ ಕಡ್ಡಾಯವಾಗಿ ರೈತರು ಮತ್ತು ಅಧಿಕಾರಿಗಳನ್ನು ಒಳಗೊಂಡ ಸಮಿತಿಯ ಸದಸ್ಯರನ್ನು ಕರೆದೊಯ್ಯಬೇಕು. ಅವರ ಸಮ್ಮುಖದಲ್ಲಿಯೇ ಪರಿಶೀಲನೆ ನಡೆಸಬೇಕು. ಪ್ರಕ್ರಿಯೆ ದಾಖಲು ಮಾಡಬೇಕು’ ಎಂದು ಸೂಚಿಸಿದರು.

ಪರಿಹಾರ ಪಾವತಿಗೆ ಕ್ರಮ:

‘2016–17ನೇ ಸಾಲಿನ ಹಿಂಗಾರು ಹಂಗಾಮಿಗೆ ಸಂಬಂಧಿಸಿದಂತೆ ಬಾಕಿ ಉಳಿದಿರುವ ₹ 5.76 ಕೋಟಿ ಪರಿಹಾರವನ್ನು ತಕ್ಷಣವೇ ರೈತರ ಖಾತೆಗೆ ಜಮಾ ಮಾಡಬೇಕು’ ಎಂದು ವಿಮಾ ಕಂಪನಿಗೆ ಸೂಚಿಸಿದರು. ‘ಜಿಲ್ಲೆಯ 13,671 ರೈತರ ಖಾತೆಗೆ ವಾರದೊಳಗೆ ವಿಮಾ ಪರಿಹಾರ ಜಮಾ ಮಾಡಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಹಾಗೂ ಸಹಕಾರ ಸಂಘಗಳ ಉಪ ನಿಬಂಧಕರು ಕ್ರಮ ಕೈಗೊಳ್ಳಬೇಕು’ ಎಂದು ತಿಳಿಸಿದರು.

22 ಮೇವು ಬ್ಯಾಂಕ್ ಸ್ಥಾಪನೆ:

‘ಅಥಣಿಯಲ್ಲಿ 21 ಹಾಗೂ ರಾಮದುರ್ಗದಲ್ಲಿ 1 ಸೇರಿ 22 ಮೇವು ಬ್ಯಾಂಕ್ ಸ್ಥಾಪಿಸಲಾಗಿದೆ. ಗೋಶಾಲೆಗಳ ಅಗತ್ಯತೆ ಆಧರಿಸಿ ಗೋಶಾಲೆಗಳನ್ನು ಆರಂಭಿಸಲು ತಹಶೀಲ್ದಾರರಿಗೆ ಸೂಚಿಸಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಕಂಡುಬಂದರೆ ತಕ್ಷಣವೇ ಟ್ಯಾಂಕರ್ ಮೂಲಕ ಪೂರೈಸುವಂತೆ ನಿರ್ದೇಶನ ಕೊಡಲಾಗಿದೆ. ಜಿಲ್ಲೆಯಲ್ಲಿ 140 ಖಾಸಗಿ ಕೊಳವೆಬಾವಿಗಳನ್ನೂ ಗುರುತಿಸಲಾಗಿದ್ದು, ಅಗತ್ಯಬಿದ್ದರೆ ಅವುಗಳೆಲ್ಲವನ್ನೂ ಬಾಡಿಗೆಗೆ ಪಡೆಯಲಾಗುತ್ತದೆ. ಬರಗಾಲ ನಿರ್ವಹಣೆಗೆ ₹ 6.50 ಬಿಡುಗಡೆಗೆ ಜಿಲ್ಲಾಡಳಿತ ಅನುಮೋದನೆ ನೀಡಿದೆ’ ಎಂದು ವಿವರಿಸಿದರು.

‘ಅಧಿಕಾರಿಗಳು ಐದಾರು ಸಭೆ ನಡೆಸಿ ಗಡುವು ನೀಡಿದರೂ ಕಾರ್ಖಾನೆಗಳವರು ಬಾಕಿ ಪಾವತಿಸಿಲ್ಲ. ಹೀಗಾಗಿ, ಶೇ.15ರಷ್ಟು ಬಡ್ಡಿ ಸಮೇತ ಬಾಕಿ ಪಾವತಿಸುವಂತೆ ಕ್ರಮ ವಹಿಸಬೇಕು’ ಎಂದು ರೈತ ಮುಖಂಡ ಶಶಿಕಾಂತ ಜೋಶಿ ಆಗ್ರಹಿಸಿದರು.

‘ತೂಕ ಮತ್ತು ಅಳತೆಯಲ್ಲಿ ಕಾರ್ಖಾನೆಗಳು ರೈತರಿಗೆ ಮೋಸ ಮಾಡುತ್ತಿವೆ. ಇದಕ್ಕೆ ಕಡಿವಾಣ ಹಾಕಬೇಕು. ಆನ್‌ಲೈನ್ ವ್ಯವಸ್ಥೆ ಜಾರಿಗೊಳಿಸಬೇಕು’ ಎಂದು ಮುಖಂಡರಾದ ಚೂನಪ್ಪ ಪೂಜಾರಿ, ಅಶೋಕ ಯಮಕನಮರಡಿ, ಜಯಶ್ರೀ ಗುರಣ್ಣವರ ಒತ್ತಾಯಿಸಿದರು.

ಜಿಲ್ಲಾ ಪಂಚಾಯ್ತಿ ಸಿಇಒ ಕೆ.ವಿ. ರಾಜೇಂದ್ರ, ಪ್ರೊಬೆಷನರಿ ಐಎಎಸ್ ಅಧಿಕಾರಿ ಭವರಸಿಂಗ್ ಮೀನಾ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಿಲಾನಿ ಮೊಖಾಶಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ರಮೇಶ್ ಕೋಲಕಾರ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರವೀಂದ್ರ ಹಕಾಟಿ, ಕಾನೂನು ಮಾಪನಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕ ಎಸ್.ಎಸ್. ಉಪ್ಪಾರ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ದೊಡ್ಡಬಸವರಾಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT