ಶನಿವಾರ, ಮೇ 21, 2022
23 °C

ಅಂಗಾಂಶ ಕೃಷಿ ಸಸಿಯಿಂದ ಇಳುವರಿ ಹೆಚ್ಚಳ: ಡಾ.ಆರ್.ಬಿ. ಖಾಂಡಗಾವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಇಲ್ಲಿನ ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಿಂದ ತಾಲ್ಲೂಕಿನ ಝಾಡಶಹಾಪೂರ ಸಂಶೋಧನಾ ಕೇಂದ್ರದಲ್ಲಿ ಕಬ್ಬು ಬೆಳೆಗಾರರಿಗೆ ಕಬ್ಬಿನ ಬೆಳೆಯ ಕ್ಷೇತ್ರೋತ್ಸವವನ್ನು ಶುಕ್ರವಾರ ನಡೆಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ನಿರ್ದೇಶಕ ಡಾ.ಆರ್.ಬಿ. ಖಾಂಡಗಾವೆ ಮಾತನಾಡಿ, ‘ರೈತರು ಕಬ್ಬಿನ ಅಂಗಾಂಶ ಕೃಷಿಯಿಂದ ಅಭಿವೃದ್ಧಿಪಡಿಸಿದ ತಳಿಗಳನ್ನು ತಮ್ಮ ಕ್ಷೇತ್ರದಲ್ಲಿ ಬೆಳೆದು ಇಳುವರಿಯನ್ನು ಹೆಚ್ಚಿಸಬೇಕು’ ಎಂದು ಸಲಹೆ ನೀಡಿದರು.

‘ಸಂಸ್ಥೆಯಲ್ಲಿ ಉತ್ಪಾದಿಸಲಾಗುತ್ತಿರುವ ಜೈವಿಕ ಪೀಡೆನಾಶಕಗಳು, ಕೀಟನಾಶಕಗಳು ಮತ್ತು ಎಲ್ಲ ರೀತಿ ಜೈವಿಕ ಗೊಬ್ಬರಗಳನ್ನು ತಮ್ಮ ಜಮೀನಿನ ಕಬ್ಬಿನ ಬೆಳೆಗೆ ಉಪಯೋಗಿಸಿ ಉತ್ಪಾದನೆ ಹೆಚ್ಚಿಸಿ, ಮಣ್ಣಿನ ಫಲವತ್ತತೆಯನ್ನು ಕಾಪಾಡಬೇಕು’ ಎಂದು ತಿಳಿಸಿದರು.

ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ (ಆತ್ಮ ಯೋಜನೆ) ಮಂಜುನಾಥ ಕುಸುಗಲ್ಲ, ‘ಕೃಷಿ ಇಲಾಖೆಯಿಂದ ದೊರೆಯುವ ಹನಿ ನೀರಾವರಿ ಯೋಜನೆಯ ಸೌಲಭ್ಯವನ್ನು ಕಬ್ಬಿನ ಬೆಳೆಯಲ್ಲಿ ಅಳವಡಿಸಿ ಅಧಿಕ ಇಳುವರಿ ಪಡೆಯಬೇಕು’ ಎಂದು ಹೇಳಿದರು.

ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ (ಬೇಸಾಯ ತಜ್ಞ) ಆರ್.ಬಿ. ಸುತಗುಂಡಿ, ‘ಮಣ್ಣು ಪರೀಕ್ಷೆ ಆಧಾರದ ಮೇಲೆ ರಾಸಾಯನಿಕ ಗೊಬ್ಬರಗಳನ್ನು ಬಳಸಬೇಕು. ನಾಟಿಗೆ ಮುಂಚೆ ಹಸಿರೆಲೆ ಗೊಬ್ಬರಗಳನ್ನು ಬಳಸಿ ಮಣ್ಣಿನ ಫಲವತ್ತತೆ ಕಾಪಾಡಿಕೊಂಡಲ್ಲಿ ಇಳುವರಿ ಹೆಚ್ಚಿಸಬಹುದು’ ಎಂದು ತಿಳಿಸಿದರು.

ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ (ಕೃಷಿ ಕೀಟಶಾಸ್ತ್ರಜ್ಞ) ಡಾ.ಮಂಜುನಾಥ ಚೌರಡ್ಡಿ ಕಬ್ಬಿನ ಬೆಳೆಯಲ್ಲಿ ಬರುವ ಕೀಟ ಮತ್ತು ರೋಗಗಳ ಸಮಗ್ರ
ನಿರ್ವಹಣೆ ಕುರಿತು ಮಾಹಿತಿ ನೀಡಿದರು. ‘ಕಬ್ಬಿನ ಬೀಜ ನಾಟಿಗೆ ಮುನ್ನ ಬೀಜೋಪಚಾರ ಮಾಡುವುದರಿಂದ ಕೀಟ ಮತ್ತು ರೋಗವನ್ನು ತಡೆಗಟ್ಟಬಹುದು’ ಎಂದರು.

ಹುಣಶ್ಯಾಳಶ ಸತೀಶ ಶುಗರ್ಸ್‌ ಸಕ್ಕರೆ ಕಾರ್ಖಾನೆಯ ಕಬ್ಬು ಅಭಿವೃದ್ಧಿ ಅಧಿಕಾರಿ ಪೂಜೇರಿ ಮಾತನಾಡಿದರು.

ಕಬ್ಬು ಅಭಿವೃದ್ಧಿ ವಿಸ್ತರಣಾಧಿಕಾರಿ ಸಚಿನ ಸಿ. ಘಟಕಾಂಬಳೆ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.