ಕಬ್ಬಿನ ಬಿಲ್ ಬಾಕಿ: ಮುಂದುವರಿದ ಹೋರಾಟ

7
ಪ್ರತಿಭಟನಾಕಾರರ ಮನವೊಲಿಕೆಗೆ ಜಾರ್ಜ್‌ ಯತ್ನ

ಕಬ್ಬಿನ ಬಿಲ್ ಬಾಕಿ: ಮುಂದುವರಿದ ಹೋರಾಟ

Published:
Updated:
Deccan Herald

ಬೆಳಗಾವಿ: ಸಕ್ಕರೆ ಕಾರ್ಖಾನೆಗಳಿಂದ ಬಾಕಿ ಕೊಡಿಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ಪ್ರತಿಭಟನೆ ಮುಂದುವರಿಸಿದರು.

ಐದು ದಿನಗಳಿಂದ ಜಿಲ್ಲಾಧಿಕಾರಿ ಕಚೇರಿ ಅವರಣದಲ್ಲಿ ನಡೆಯುತ್ತಿದ್ದ ಧರಣಿ, 6ನೇ ದಿನವಾದ ಗುರುವಾರ ಸುವರ್ಣ ವಿಧಾನಸೌಧ ಬಳಿಯ ಕೊಂಡಸಕೊಪ್ಪಕ್ಕೆ ಸ್ಥಳಾಂತರಗೊಂಡಿತು. ಭಾರತೀಯ ಕೃಷಿಕ ಸಮಾಜ ಸಂಯುಕ್ತ ಸಂಘಟನೆ ಅಧ್ಯಕ್ಷ ಸಿದಗೌಡ ಮೋದಗಿ, ರೈತ ಸಂಘದ ಮುಖಂಡರಾದ ಅಶೋಕ ಯಮಕನಮರಡಿ, ಚೂನಪ್ಪ ಪೂಜಾರಿ, ಜಯಶ್ರೀ ಗುರನ್ನವರ ನೇತೃತ್ವದಲ್ಲಿ ಜಿಲ್ಲೆ ಹಾಗೂ ಬಾಗಲಕೋಟೆ ಜಿಲ್ಲೆಯ ನೂರಾರು ರೈತರು ಪಾಲ್ಗೊಂಡಿದ್ದರು.

ಹೆದ್ದಾರಿಗೆ ನುಗ್ಗಲು ಯತ್ನ:

ಮುಖ್ಯಮಂತ್ರಿಯೇ ಬರಬೇಕು. ಕಬ್ಬಿನ ದರ ಇಲ್ಲಿಯೇ ನಿಗದಿಪಡಿಸಬೇಕು. ಕಬ್ಬು ಬೆಳೆಗಾರರ ಸಂಕಷ್ಟಗಳ ಕುರಿತು ಅಧಿವೇಶನದಲ್ಲಿ ವಿಶೇಷವಾಗಿ ಚರ್ಚಿಸಬೇಕು ಎಂದು ಪಟ್ಟುಹಿಡಿದು, ಮಧ್ಯಾಹ್ನ 3ರವರೆಗೆ ಗಡುವು ನೀಡಿದ್ದರು. ಇದಕ್ಕೆ ಸರ್ಕಾರದ ಪ್ರತಿನಿಧಿಗಳಿಂದ ಸ್ಪಂದನೆ ಬಾರದಿರುವುದರಿಂದ ಆಕ್ರೋಶಗೊಂಡ ಕೆಲವು ರೈತರು ಪ್ರತಿಭಟನಾ ಸ್ಥಳದಿಂದ ತೆರಳಿ ಪುಣೆ– ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಮುತ್ತಿಗೆ ಹಾಕಲು ಮುಂದಾದರು. ಅವರನ್ನು ಪೊಲೀಸರು ತಡೆದು ಪ್ರತಿಭಟನಾ ಸ್ಥಳಕ್ಕೆ ಕರೆತಂದರು.

ಸ್ಥಳಕ್ಕೆ ಬಂದ ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಕಮಲ್‌ ಪಂಥ್‌ ಮುಖಂಡರೊಂದಿಗೆ ಚರ್ಚಿಸಿದರು. ‘ಕೆಲವು ಮುಖಂಡರು ಬಂದರೆ ಮುಖ್ಯಮಂತ್ರಿ ಬಳಿಗೆ ಕರೆದೊಯ್ಯಲಾಗುವುದು’ ಎಂದು ಭರವಸೆ ನೀಡಿದರು.

ಕೇಂದ್ರಕ್ಕೆ ಪತ್ರ ಬರೆಯಲಾಗುವುದು:

ಬಳಿಕ ಬಂದ ಸಕ್ಕರೆ ಸಚಿವ ಕೆ.ಜೆ. ಜಾರ್ಜ್‌ ಮಾತನಾಡಿ, ‘ನಾವು ಅಧಿಕಾರಕ್ಕೆ ಬರುವುದಕ್ಕೆ ಮುನ್ನ ₹ 2ಸಾವಿರ ಕೋಟಿ ಬಾಕಿ ಇತ್ತು. ಸಕ್ಕರೆ ಕಾರ್ಖಾನೆಗಳಿಗೆ ನೋಟಿಸ್ ಜಾರಿ ಮಾಡಬೇಕು. ಆಗಲೂ ಬಾಕಿ ಕೊಡದಿದ್ದರೆ ಸಕ್ಕರೆ ಜಪ್ತಿ ಮಾಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಇದರ ಪರಿಣಾಮ, ಈಗ ಕಳೆದ ಸಾಲಿನ ₹ 17 ಕೋಟಿ ಮಾತ್ರ ಬಾಕಿ ಇದೆ. ಆದಾಗ್ಯೂ ಯಾವುದಾದರೂ ಕಾರ್ಖಾನೆಯವರು ಬಾಕಿ ಉಳಿದುಕೊಂಡಿರುವ ಬಗ್ಗೆ ದಾಖಲೆ ನೀಡಿದರೆ ಕೊಡಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

‘ಕಾರ್ಖಾನೆಗಳವರು ಎಫ್‌ಆರ್‌ಪಿ ಪ್ರಕಾರ ದರ ಕೊಡಲೇಬೇಕು. ಇದರಲ್ಲಿ ಎರಡು ಮಾತಿಲ್ಲ. ಅಂತೆಯೇ, ಹಿಂದಿನ ಹಂಗಾಮುಗಳಲ್ಲಿ ರೈತರಿಗೆ ಕೊಟ್ಟ ಮಾತಿನಂತೆಯೇ ಬೆಲೆಯನ್ನು (ವ್ಯತ್ಯಾಸದ ಹಣ) ಕೊಡುವಂತೆ ತಾಕೀತು ಮಾಡಲಾಗಿದೆ. ಕಾರ್ಖಾನೆಯವರು ಜೂನ್‌ವರೆಗೆ ಸಮಯ ತೆಗೆದುಕೊಂಡಿದ್ದಾರೆ’ ಎಂದು ತಿಳಿಸಿದರು.

ಮೋಸವಾಗದಂತೆ ನೋಡಿಕೊಳ್ಳಲು:

‘ಕಾರ್ಖಾನೆಗಳನ್ನು ಏಕಾಏಕಿ ಬಂದ್ ಮಾಡಿಸಲು ಆಗುವುದಿಲ್ಲ. ಕಬ್ಬು ಕಟಾವು ಮಾಡುವುದು ನಿಲ್ಲಿಸಿದರೆ ರೈತರಿಗೂ ತೊಂದರೆಯಾಗುತ್ತದೆ. ಸರ್ಕಾರ ರೈತರ ಪರವಾಗಿದೆ. ಇದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಕೋರಿದರು.

‘ಇಳುವರಿಯಲ್ಲಿ ಮೋಸ ಮಾಡದಂತೆ ನೋಡಿಕೊಳ್ಲಲು ಪ್ರತಿ ಕಾರ್ಖಾನೆಗಳಲ್ಲೂ ಸುಧಾರಿತ ಯಂತ್ರಗಳನ್ನು ಅಳವಡಿಸಿಕೊಳ್ಳುವಂತೆ ಸೂಚಿಸಲಾಗಿದೆ. ಈ ಸಾಲಿಗೆ ನಿಗದಿಪಡಿಸಿರುವ ಎಫ್‌ಆರ್‌ಪಿ ಕಡಿಮೆಯಾಗಿದೆ ಎನಿಸಿದರೆ, ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ಕ್ರಮ ಕೈಗೊಳ್ಳಲಾಗುವುದು. ಸಕ್ಕರೆ ದರ ಕಡಿಮೆಯಾಗಿರುವುದರಿಂದ, ರಫ್ತು ಮಾಡಲು ಸಹಾಯಧನ ನೀಡಬೇಕು ಎಂದು ಕೋರಲಾಗುವುದು. ಕಬ್ಬು  ಬೆಳೆಗಾರರ ನಿಯೋಗವನ್ನು ಕೇಂದ್ರದ ಬಳಿಗೆ ಕರೆದೊಯ್ಯುವುದಕ್ಕೂ ಸಿದ್ಧವಿದ್ದೇವೆ’ ಎಂದು ತಿಳಿಸಿದರು.

ಮುಖಂಡ ಸಿದಗೌಡ ಮೋದಗಿ ಮಾತನಾಡಿ, ‘14 ದಿನದೊಳಗೆ ಬಿಲ್ ಪಾವತಿಸದಿದ್ದರೆ ಸಕ್ಕರೆ ಕಾರ್ಖಾನೆಯವರಿಗೆ ಶಿಕ್ಷೆ ವಿಧಿಸಬೇಕು. ಆಡಳಿತ ನಡೆಸುವವರು ಸಕ್ಕರೆ ಕಾರ್ಖಾನೆಗಳವರನ್ನು ನಂಬುತ್ತಿದ್ದೀರಿ. ಇದರಿಂದಾಗಿ ರೈತರು ಸಂಕಷ್ಟಕ್ಕೆ ಒಳಗಾಗಿದ್ದೇವೆ’ ಎಂದು ದೂರಿದರು.

ಜೆಡಿಎಸ್ ಮುಖಂಡ ಎನ್.ಎಚ್‌. ಕೋನರೆಡ್ಡಿ, ಜಿಲ್ಲಾಧಿಕಾರಿ ಎಸ್.ಬಿ. ಬೊಮ್ಮನಹಳ್ಳಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !