ಮಂಗಳವಾರ, ನವೆಂಬರ್ 12, 2019
19 °C

ಸಂವಹನ ಕೌಶಲ ಬೆಳೆಸಿಕೊಳ್ಳಲು ಸಲಹೆ

Published:
Updated:
Prajavani

ಬೆಳಗಾವಿ: ‘ವಿದ್ಯಾರ್ಥಿಗಳು ಸಂವಹನ ಕೌಶಲ ಬೆಳೆಸಿಕೊಳ್ಳಬೇಕು’ ಎಂದು ಕಾನೂನು ವಿಶ್ವವಿದ್ಯಾಲಯದ ಕುಲಸಚಿವ ಆರ್. ರವಿಶಂಕರ್ ಸಲಹೆ ನೀಡಿದರು.

ಇಲ್ಲಿನ ಕೆಎಲ್‌ಇ ಸಂಸ್ಥೆಯ ಬಿ.ವಿ. ಬೆಲ್ಲದ ಕಾನೂನು ಕಾಲೇಜಿನಲ್ಲಿ ಶನಿವಾರ ನಡೆದ ಕಾಲೇಜು ಒಕ್ಕೂಟ ಮತ್ತು ಕ್ರೀಡಾ ವಿಭಾಗದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

‘ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ಪಾಲ್ಗೊಳ್ಳುವುದರಿಂದ ವ್ಯಕ್ತಿತ್ವ ವಿಕಸನ ಸಾಧ್ಯವಾಗುತ್ತದೆ. ವಿವಿಧ ರೀತಿಯ ಪ್ರಗತಿಪರ ಸಂಘಟನೆಗಳಲ್ಲಿ ತೊಡಗಿಸಿಕೊಂಡು ಕಾನೂನು ವೃತ್ತಿಗೆ ಸಂಬಂಧಿಸಿದ ಕೌಶಲ, ಸಂವಹನ ಕಲೆ, ದಕ್ಷತೆ, ನಾಯಕತ್ವದ ಕಲೆಗಳನ್ನು ಕರಗತ ಮಾಡಿಕೊಳ್ಳಬೇಕು. ಪವಿತ್ರ ವಕೀಲಿ ವೃತ್ತಿಯಲ್ಲಿ ಯಶಸ್ಸು ಗಳಿಸಬೇಕಾದರೆ ಪರಿಮಿತ ವಲಯದಿಂದ ಹೊರಬಂದು, ಸಾಮಾಜಿಕ ಬೆಳವಣಿಗೆಯ ಅವಿಭಾಜ್ಯ ಅಂಗವಾಗಬೇಕು’ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ನಿರ್ದೇಶಕ ಆರ್.ಬಿ. ಬೆಲ್ಲದ ವಿದ್ಯಾರ್ಥಿ ಒಕ್ಕೂಟದ ಕಾರ್ಯದರ್ಶಿಗಳಿಗೆ ಪ್ರಮಾಣವಚನ ಬೋಧಿಸಿದರು.

ಸುನಂದಾ ಮತ್ತು ತಂಡದವರು ಹಾಡಿದರು. ಪ್ರಾಚಾರ್ಯ ಡಾ.ಬಿ. ಜಯಸಿಂಹ ಸ್ವಾಗತಿಸಿದರು. ಮಾಣಿಕಾ ನೇಸರಕರ್ ನಿರೂಪಿಸಿದರು. ವಿದ್ಯಾರ್ಥಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಅಭಿಷೇಕ ಹಪ್ಪಳಿ ವಂದಿಸಿದರು.

ಪ್ರತಿಕ್ರಿಯಿಸಿ (+)