ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣದಿಂದ ಬಾಲಕಾರ್ಮಿಕ ಪದ್ಧತಿಗೆ ಕಡಿವಾಣ

ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ
Last Updated 12 ಜೂನ್ 2019, 12:10 IST
ಅಕ್ಷರ ಗಾತ್ರ

ಬೆಳಗಾವಿ: ‘ಪ್ರತಿ ಮಗುವಿಗೂ ಕಡ್ಡಾಯವಾಗಿ ಶಿಕ್ಷಣ ನೀಡುವುದರಿಂದ ಬಾಲಕಾರ್ಮಿಕ ಪದ್ಧತಿಯನ್ನು ತಡೆಗಟ್ಟಬಹುದಾಗಿದೆ’ ಎಂದು ನಗರ ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶ್‌ಕುಮಾರ್‌ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕರ ಯೋಜನೆ, ವಿವಿಧ ಇಲಾಖೆಗಳು, ಕಾರ್ಮಿಕ ಸಂಘಗಳು ಮತ್ತು ಸರ್ಕಾರೇತರ ಸಂಸ್ಥೆಗಳ ವತಿಯಿಂದ ಇಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಬಾಲಕಾರ್ಮಿಕ ಮಕ್ಕಳನ್ನು ಕೆಲಸದಿಂದ ಮುಕ್ತಗೊಳಿಸಿ ಅವರಿಗೆ ಉತ್ತಮ ಶಿಕ್ಷಣ ಒದಗಿಸಿ ಅವರ ಭವಿಷ್ಯವನ್ನು ಉಜ್ವಲಗೊಳಿಸಬೇಕು. ಶಿಕ್ಷಣವೇ ಸಂಪತ್ತು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದರೆ ಅವರ ಮುಂದಿನ ಭವಿಷ್ಯ ಉಜ್ವಲವಾಗುತ್ತದೆ. ವಿದ್ಯಾವಂತರಾಗಿ ಉತ್ತಮ ಉದ್ಯೋಗ ಪಡೆದುಕೊಳ್ಳುತ್ತಾರೆ’ ಎಂದರು.

ಕಾನೂನು ಕ್ರಮ:

‘ಕೌಟುಂಬಿಕ ಮತ್ತು ಸಾಮಾಜಿಕ ಸಮಸ್ಯೆಗಳಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಈ ರೀತಿಯಾಗಬಾರದು. ಯಾವುದೇ ವ್ಯಕ್ತಿ ಮಕ್ಕಳನ್ನು ಬಾಲಕಾರ್ಮಿಕರನ್ನಾಗಿ ಕೆಲಸದಲ್ಲಿ ತೊಡಗಿಸಿದ್ದರೆ ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಬೆಳಗಾವಿ ಪ್ರಾದೇಶಿಕ ವಿಭಾಗದ ಉಪಕಾರ್ಮಿಕ ಆಯುಕ್ತ ಎ.ಎಚ್. ಉಮೇಶ ಮಾತನಾಡಿ, ‘ತಿಳಿವಳಿಕೆ ಕೊರತೆಯೇ ಬಾಲಕಾರ್ಮಿಕ ಪದ್ಧತಿಗೆ ದಾರಿ ಮಾಡಿಕೊಡುತ್ತಿದೆ. 14 ವರ್ಷದೊಳಗಿನ ಯಾವುದೇ ಮಕ್ಕಳನ್ನು ಕೆಲಸಕ್ಕೆ ನೇಮಕ ಮಾಡಿಕೊಳ್ಳಬಾರದು. ಒಂದು ವೇಳೆ ಮಾಡಿಕೊಂಡಿದ್ದರೆ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಪ್ರತಿ ಮಗುವೂ ಶಿಕ್ಷಣ ಪಡೆದುಕೊಳ್ಳಬೇಕು. ಇದಕ್ಕೆ ಪೂರಕವಾದ ವಾತಾವರಣ ಕಲ್ಪಿಸಬೇಕು. ಯಾವ ಮಗುವೂ ಶಿಕ್ಷಣದಿಂದ ವಂಚಿತರಾಗಬಾರದು’ ಎಂದರು.

ಸಮುದಾಯವೇ ಸಹಕರಿಸಬೇಕು:

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿಜಯ ದೇವರಾಜ ಅರಸ ಮಾತನಾಡಿ, ‘ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಬಾಲಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಲ್ಲದೇ ಕೈಗಾರಿಕಾ ದೇಶಗಳಲ್ಲಿ ಬಾಲಕರನ್ನು ಒತ್ತಾಯಪೂರ್ವಕವಾಗಿ ಕೆಲಸ ಮಾಡಿಸಲಾಗುತ್ತದೆ. ಶಾಲೆಗಳಲ್ಲಿ ಶೈಕ್ಷಣಿಕ ವಿಷಯಗಳನ್ನು ಮಾತ್ರ ಬೋಧಿಸದೇ ಅವರಲ್ಲಿರುವ ಪ್ರತಿಭೆಯನ್ನು ಹೊರತರುವ ಕೆಲಸವನ್ನು ಶಿಕ್ಷಕರು ಮಾಡಬೇಕು’ ಎಂದರು.

ಸಹಾಯಕ ಕಾರ್ಮಿಕ ಆಯುಕ್ತ ಡಿ.ಜಿ. ನಾಗೇಶ ಮಾತನಾಡಿ, ‘ತಂದೆ–ತಾಯಿಗಿಂತಲೂ ಶಿಕ್ಷಕರನ್ನು ಹೇಳಿದ್ದನ್ನು ಮಕ್ಕಳು ನಂಬುತ್ತಾರೆ. ಹೀಗಾಗಿ, ಶಿಕ್ಷಕರಾದವರು ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ಮಾಡಬೇಕು. ಬಾಲಕಾರ್ಮಿಕ ಪದ್ಧತಿ ತಡೆಯಲು ಇಡೀ ಸಮಾಜ ಸಹಕರಿಸಬೇಕು’ ಎಂದು ಕೋರಿದರು.

ಬಾಲಕಾರ್ಮಿಕ ಪದ್ಧತಿಯಿಂದ ಮುಕ್ತರಾದ ಮಕ್ಕಳಿಗೆ ಜಿಲ್ಲಾಡಳಿತದಿಂದ ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು. ಬಾಲಕಾರ್ಮಿಕ ಪದ್ಧತಿ ತಡೆಯುವ ಕುರಿತು ನೆರೆದಿದ್ದವರಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.

ತಾಲ್ಲೂಕು ತಹಶೀಲ್ದಾರ್‌ ಮಂಜುಳಾ ನಾಯಕ, ಜಿಲ್ಲಾ ಪಂಚಾಯ್ತಿ ಸಹಾಯಕ ಕಾರ್ಯದರ್ಶಿ ಬಿ.ಆರ್. ಗಂಗಾಧರ, ಬಿಇಒ ಕೆ.ಡಿ. ಬಡಿಗೇರ, ಮಹಿಳಾ ಮತ್ತು ಮಕ್ಕಳ ಇಲಾಖೆ ಉಪನಿರ್ದೇಶಕ ರವೀಂದ್ರ ರಾಠೋಡ, ಸಹಾಯಕ ನಿರ್ದೇಶಕ ಅರುಣ ನಿರಗಟ್ಟಿ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಸಿಸ್ಟರ್ ಮೇರಿ ಜೆ., ಬೆಳಗಾವಿ ವಕೀಲರ ಸಂಘದ ಅಧ್ಯಕ್ಷ ಎಸ್.ಎಸ್. ಕಿವಡಸನ್ನವರ, ವಾಣಿಜ್ಯ ಮತ್ತು ಕೈಗಾರಿಕೆಗಳ ಸಂಘದ ಅಧ್ಯಕ್ಷ ಮಹೇಶ ಬಾಗಿ ಇದ್ದರು.

ಮಹೇಶ್ವರಿ ಅಂಧ ಮಕ್ಕಳ ಶಾಲೆ ವಿದ್ಯಾರ್ಥಿಗಳು ಪ್ರಾರ್ಥನಾ ಗೀತೆ ಹಾಗೂ ನಾಡಗೀತೆಯನ್ನು ಹಾಡಿದರು. ಕಾರ್ಮಿಕ ಅಧಿಕಾರಿ ಶ್ರೀಕಾಂತ ಪಾಟೀಲ ಸ್ವಾಗತಿಸಿದರು. ಬಾಲಕಾರ್ಮಿಕ ಇಲಾಖೆ ಯೋಜನಾ ನಿರ್ದೇಶಕಿ ಜ್ಯೋತಿ ಕಾಂತೆ ವಂದಿಸಿದರು.

ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಜಾಗೃತಿ ಜಾಥಾ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT