ಬುಧವಾರ, ಮೇ 25, 2022
31 °C

‘‍ಪಟಾಕಿ ತ್ಯಜಿಸಿ, ಹಣತೆ ಬೆಳಗಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ದೀಪಾವಳಿ ಆಚರಣೆಯಲ್ಲಿ ಬೆಳಕೆ ಪ್ರಧಾನವಾಗಿರುವುದರಿಂದ ಪಟಾಕಿಗಳನ್ನು ತ್ಯಜಿಸಿ ಹಣತೆಗಳನ್ನು ಬೆಳಗಿಸಿ ಸಂಭ್ರಮಿಸಬೇಕು’ ಎಂದು ಪರಿಸರಪ್ರೇಮಿ ರಾಮನಾಥ್ ನಾಯ್ಕ ತಿಳಿಸಿದರು.

ಇಲ್ಲಿನ ಮಹಾಂತೇಶ ನಗರದ ಎಚ್.ಎನ್. ಸೋನವಾಲ್ಕರ್ ಪ್ರೌಢಶಾಲೆಯಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ರಾಜ್ಯ ವಿಜ್ಞಾನ ಪರಿಷತ್ತು, ಡಾ.ಸ.ಜ. ನಾಗಲೋಟಿಮಠ ವಿಜ್ಞಾನ ಕೇಂದ್ರ ಮತ್ತು ಬೆಳಗಾವಿ ವಿಜ್ಞಾನ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ‘ಪರಿಸರ ಸ್ನೇಹಿ ದೀಪಾವಳಿ ಆಚರಣೆ’ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದೀಪಾವಳಿ ಹಬ್ಬದಂದು ಪಟಾಕಿಗಳನ್ನು ಸಿಡಿಸುವ ವೇಳೆ ನೂರಾರು ಮಂದಿ ದೃಷ್ಟಿ ಕಳೆದುಕೊಂಡು ಶಾಶ್ವತ ಕುರುಡತನ ಅನುಭವಿಸುತ್ತಿದ್ದಾರೆ. ಮಕ್ಕಳು, ಗರ್ಭಿಣಿಯರು ಮತ್ತು ವೃದ್ಧರ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ. ಸ್ಫೋಟಕಗಳ ಸದ್ದಿನಿಂದ ಒತ್ತಡ, ನಿದ್ರಾಹೀನತೆ, ಕಿವುಡುತನ, ರಕ್ತದೊತ್ತಡ, ಹೃದಯಾಘಾತ ಮುಂತಾದ ಅಪಾಯಗಳು ಉಂಟಾಗುತ್ತವೆ. ಹೀಗಾಗಿ, ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸಬೇಕು’ ಎಂದು ಸಲಹೆ ನೀಡಿದರು.

ಮಾಲಿನ್ಯ ನಿಯಂತ್ರಣ ಮಂಡಳಿಯ ಉಪ ಪರಿಸರ ಅಧಿಕಾರಿ ರಾಜಶ್ರೀ ಕುಳ್ಳಿ, ‘ರಾತ್ರಿ 10ರಿಂದ ಬೆಳಿಗ್ಗೆ 6ರವರೆಗೆ ಪಟಾಕಿ ಸುಡುವಂತಿಲ್ಲ’ ಎಂದರು.

ಬೆಳಗಾವಿ ವಿಜ್ಞಾನ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಕೆ.ಬಿ. ಹಿರೇಮಠ, ‘ಪಟಾಕಿಗಳು ಹೊರಸೂಸುವ ವಿಷಯುಕ್ತ ಅನಿಲ ಆರೋಗ್ಯದ ಮೇಲೆ ಹಾನಿ ಮಾಡುವುದಲ್ಲದೆ ಪರಿಸರ ಮಾಲಿನ್ಯಕ್ಕೂ ಕಾರಣವಾಗುತ್ತದೆ. ಹಬ್ಬಗಳ ಆಚರಣೆಯ ಸಂದರ್ಭದಲ್ಲಿ ಗಿಡ–ಮರಗಳು ಪ್ರಾಣಿ–ಪಕ್ಷಿಗಳಿಗೆ ತೊಂದರೆ ಆಗದಂತೆ ಎಲ್ಲರೂ ಎಚ್ಚರ ವಹಿಸಬೇಕು’ ಎಂದು ತಿಳಿಸಿದರು.

ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ ನಡೆಸಲಾಯಿತು.

ಎಚ್.ಎನ್. ಸೋನವಾಲ್ಕರ್ ಪ್ರೌಢಶಾಲೆಯ ಮುಖ್ಯಶಿಕ್ಷಕ ಎಸ್.ಎಂ. ಬಡ್ಡೂರ ಅಧ್ಯಕ್ಷತೆ ವಹಿಸಿದ್ದರು. ವಿಜ್ಞಾನ ಕೇಂದ್ರದ ಯೋಜನಾ ಸಹಾಯಕ ರಾಜಶೇಖರ ಪಾಟೀಲ ಸ್ವಾಗತಿಸಿದರು. ಮಾಲಿನ್ಯ ನಿಯಂತ್ರಣ ಮಂಡಳಿಯ ವೈಜ್ಞಾನಿಕ ಅಧಿಕಾರಿ ಡಾ.ಜಿ.ಎಂ. ಪಾಟೀಲ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.