ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬುದ್ಧನ ಗುಣಗಳನ್ನು ಅಳವಡಿಸಿಕೊಳ್ಳಿ’

Last Updated 28 ಡಿಸೆಂಬರ್ 2019, 14:21 IST
ಅಕ್ಷರ ಗಾತ್ರ

ಬೆಳಗಾವಿ: ‘ಯುಪಿಎಸ್‌ಸಿ, ಕೆಪಿಎಸ್‌ಸಿ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಪರೀಕ್ಷಾರ್ಥಿಗಳು ಬುದ್ಧನ ಗುಣಗಳನ್ನು ಅಳವಡಿಸಿಕೊಳ್ಳಬೇಕು’ ಎಂದು ವಾಣಿಜ್ಯ ತೆರಿಗೆ ಅಧಿಕಾರಿ ಅಶೋಕ ಮಿರ್ಜಿ ಸಲಹೆ ನೀಡಿದರು.

‘ಬುದ್ಧ ಅರಮನೆ‌ ಬಿಟ್ಟು, ಸಂಪತ್ತು‌ ಬಿಟ್ಟು ಬಂದ. ಹಾಗೆಯೇ, ನೀವು ಮತ್ತು ಓದಷ್ಟೇ ಇರಬೇಕು. ಇದರೊಂದಿಗೆ ಆತ್ಮವಿಶ್ವಾಸವೂ ಬಹಳ ಮುಖ್ಯ’ ಎಂದರು.

‘ನನಗೆ ಬಸ್ ಕಂಡಕ್ಟರ್ ಆಗುವ ಆಸೆ ಇತ್ತು. ಪೊಲೀಸ್ ಕಾನ್‌ಸ್ಟೆಬಲ್‌ ಆದೆ. ಬಳಿಕ ಪಿಎಸ್ಐ, ನಂತರ ಪಿಡಿಒ ಆಗಿದ್ದೆ. ಕೆಲಸದಲ್ಲಿ ಶ್ರದ್ಧೆ ಇರಬೇಕು. ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವವರಿಗೆ ‘ಪ್ರಜಾವಾಣಿ’ ಪತ್ರಿಕೆ ಬಹಳ ಮಹತ್ವದ್ದಾಗಿದೆ. ಅದು ಪತ್ರಿಕೆಯಷ್ಟೇ ಅಲ್ಲ; ದೊಡ್ಡ ಶಕ್ತಿ. ಅದರಿಂದ ನನಗೆ ಬಹಳ ಅನುಕೂಲವಾಗಿದೆ’ ಎಂದು ಅಭಿಮಾನದಿಂದ ಹೇಳಿದರು.

‘ಕೆಎಎಸ್‌ ಅಧಿಕಾರಿಯಾಗಲು, ಅಂಕಗಳಿಗಾಗಿಯೇ ಓದಬೇಕು. ಅತಿ ಹೆಚ್ಚು ಅಂಕ ತಂದುಕೊಡುವ ವಿಷಯಕ್ಕೆ ಒತ್ತು ಕೊಡಬೇಕು. ನಾನು ಪ್ರಿಲಿಮ್ಸ್ ಹಾಗೂ ಮೇನ್ಸ್‌ನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಆದ್ಯತೆ ‌ನೀಡಿದ್ದೆ. ಇವು ಹೆಚ್ಚಿನ ಅಂಕ ತಂದುಕೊಡುತ್ತವೆ. ಸಂವಿಧಾನ ವಿಷಯಕ್ಕೆ 2ನೇ ಆದ್ಯತೆ ಕೊಡಬೇಕು. ಪ್ರಚಲಿತ ವಿದ್ಯಮಾನ ತಿಳಿಯಲು ದಿನಪತ್ರಿಕೆ ಓದಬೇಕು. ಅರ್ಥಶಾಸ್ತ್ರ, ಭೂಗೋಳಶಾಸ್ತ್ರ, ಮಾನಸಿಕ‌ ಸಾಮರ್ಥ್ಯ ಹಾಗೂ ಇತಿಹಾಸಕ್ಕೆ ನಂತರದ ಆದ್ಯತೆ ಕೊಡಬೇಕು’ ಎಂದು ಸಲಹೆ ನೀಡಿದರು.

‘ಐವತ್ತು ನಿಮಿಷ ಓದಿ 10 ನಿಮಿಷ ಆ ವಿಷಯವನ್ನು ಭಿನ್ನ ದೃಷ್ಟಿಕೋನದಿಂದ ಅವಲೋಕಿಸಬೇಕು. ಮೇನ್ಸ್‌ ಪರೀಕ್ಷೆಯಲ್ಲಿ ಮಹತ್ವದ ಶಬ್ದಕ್ಕೆ ಅಂಡರ್‌ಲೈನ್ ಮಾಡಬೇಕು. ಆಗ ಅದು ಮೌಲ್ಯಮಾಪಕರ ಗಮನಸೆಳೆಯುತ್ತದೆ’ ಎಂದು ಕಿವಿಮಾತು ಹೇಳಿದರು.

‘ಜೀವನವು ಬೆವರಿನ ಹನಿಗಳಿಂದ ಬದಲಾಗುತ್ತದೆಯೇ ಹೊರತು ಕಣ್ಣೀರಿನಿಂದಲ್ಲ. ಹೀಗಾಗಿ, ಅವಕಾಶ ಸದ್ಬಳಕೆ ಮಾಡಿಕೊಳ್ಳಬೇಕು. ಪರೀಕ್ಷೆ ಮುಗಿಯುವವರೆಗೂ ಏಕಾಂಗಿಯಾಗಿರಬೇಕು. 5ರಿಂದ 8 ವರ್ಷಗಳ ಹಳೆಯ ಪ್ರಶ್ನೆಪತ್ರಿಕೆಗಳನ್ನು ಪರಾಮರ್ಶಿಸಿದರೆ ಅನುಕೂಲವಾಗುತ್ತದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT