ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಯಲಾಟದಲ್ಲಿ ಸುಮಿತ್ರಾ ಸಾಧನೆ

ತಂಡ ಕಟ್ಟಿಕೊಂಡು ವಿವಿಧೆಡೆ ಪ್ರದರ್ಶನ
Last Updated 15 ಜನವರಿ 2022, 9:36 IST
ಅಕ್ಷರ ಗಾತ್ರ

ರಾಮದುರ್ಗ: ತಾಲ್ಲೂಕಿನ ಘಟನೂರಿನ ಕಲಾವಿದೆ ಸುಮಿತ್ರಾಬಾಯಿ ಹೊಸಮನಿ ಬಯಲಾಟ ಮತ್ತು ದಪ್ಪಿನಾಟಗಳ ಪ್ರದರ್ಶನಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಾಧನೆ ತೋರಿದ್ದಾರೆ.

ಉತ್ತರ ಕರ್ನಾಟಕದ ಭಾಗದ ಅಚ್ಚುಮೆಚ್ಚಿನ ಕಲೆ ಎಂದರೆ ಬಯಲಾಟ ಮತ್ತು ದಪ್ಪಿನಾಟ. ಗ್ರಾಮೀಣ ಭಾಗದಲ್ಲಿ ಜಾತ್ರೆ, ಹಬ್ಬದ ಆಚರಣೆ ವೇಳೆ ಬಯಲಾಟ ಪ್ರದರ್ಶನ ಇರುತ್ತದೆ. ಅದರಲ್ಲಿ ಪಾಲ್ಗೊಂಡು ಕಲಾಪ್ರತಿಭೆ ಮೆರೆದಿರುವ ಸುಮಿತ್ರಾಬಾಯಿ ಗಮನಸೆಳೆದಿದ್ದಾರೆ.

ಸಂಗ್ಯಾಬಾಳ್ಯಾ ಮತ್ತು ಪಾರಿಜಾತ ಕಲೆಯನ್ನು ಪ್ರದರ್ಶಿಸುವ ಅದ್ಭುತ ಕಲಾವಿದೆ. 70 ವರ್ಷದ ಪ್ರಾಯದಲ್ಲಿಯೂ ಕಲೆಗೆ ಕಪ್ಪು ಚುಕ್ಕೆ ತಗುಲದಂತೆ ಬಯಲಾಟದಲ್ಲಿ ನಟಿಸುವುದು ಅವರ ವಿಶೇಷ. ತಮ್ಮ 50 ವರ್ಷದ ಕಲಾ ಸೇವೆಯಲ್ಲಿ ಇಲ್ಲಿಯವರೆಗೆ ಸಾವಿರಕ್ಕೂ ಹೆಚ್ಚಿನ ಸಂಗ್ಯಾಬಾಳ್ಯಾ ಪ್ರದರ್ಶನ ನೀಡಿ ಗ್ರಾಮೀಣ ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಕಲೆಯಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.

ಕಿತ್ತು ತಿನ್ನುವ ಬಡ ಕುಟುಂಬದಲ್ಲಿ ಜನಿಸಿದ ಅವರು ಬಯಲಾಟ ಮತ್ತು ದಪ್ಪಿನಾಟದ ಮೊರೆ ಹೋದರು. ಅಲ್ಲಿ ಅವರು ಮಾಡಿದ ಸಾಧನೆ ಸರ್ಕಾರದ ಕಣ್ಣಿಗೆ ಬಿದ್ದಿಲ್ಲದಿರುವುದು ಕಲಾ ರಸಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಪಿಂಚಣಿ ಹೊರತುಪಡಿಸಿ ಸರ್ಕಾರದಿಂದ ಇತರ ಸೌಲಭ್ಯಗಳು ದೊರೆತಿಲ್ಲ ಎನ್ನುತ್ತಾರೆ ಅವರು.

ಹಲವು ಕಾರ್ಯಕ್ರಮಗಳಲ್ಲಿ:

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಬೆಂಗಳೂರು, ಬೆಳಗಾವಿ ಮತ್ತು ಬಾಗಲಕೋಟೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ನಾಟಕಗಳನ್ನು ಪ್ರದರ್ಶಿಸಿದ್ದಾರೆ. ಇಲಾಖೆಗಳು ನೀಡಿದ 40ಕ್ಕೂ ಹೆಚ್ಚಿನ ಪ್ರಶಸ್ತಿಗಳು ಅವರಲ್ಲಿವೆ.

ಪ್ರಾಯದಲ್ಲಿ ಅಲ್ಲಲ್ಲಿ ಬಯಲಾಟ ಮತ್ತು ದಪ್ಪಿನಾಟಗಳನ್ನು ಪ್ರದರ್ಶನ ನೀಡುತ್ತಿದ್ದ ಅವರು ಅಷ್ಟಕ್ಕೆ ಸೀಮಿತವಾಗಲಿಲ್ಲ. ಮಹಿಳೆಯರ ತಂಡ ಕಟ್ಟಿಕೊಂಡು ಸಂಗ್ಯಾಬಾಳ್ಯಾ ನಾಟಕ ಪ್ರದರ್ಶನಕ್ಕೆ ಮುಂದಾದರು. ನಾಟಕ ಪ್ರದರ್ಶನದಲ್ಲಿ ಎಲ್ಲರೂ ಮಹಿಳೆಯರೇ ಇರುವುದರಿಂದ ಗ್ರಾಮೀಣ ಭಾಗದಲ್ಲಿ ಅವರ ನಾಟಕಗಳು ಹೆಚ್ಚು ಜನಪ್ರಿಯವಾದವು. ಅದರಲ್ಲಿ ಸುಮಿತ್ರಾಬಾಯಿ ಅವರು ಸಂಗ್ಯಾನ ಪಾತ್ರ ಮಾಡಿ ರಂಜಿಸಿದ್ದಾರೆ. ತಮ್ಮ ಕಲಾ ಪ್ರೌಢಿಮೆ ಮೆರೆದಿದ್ದಾರೆ.

ನಾಟಕಗಳಲ್ಲಿ:

ನೇಕಾರ ಪೇಟೆಯ ದಪ್ಪಿನ ಮಾಸ್ತರ್ ವಾಸಪ್ಪ, ಹಾರ್ಮೋನಿಯಂ ವಾದಕ ಕಿಲಬನೂರಿನ ಫಕೃಸಾಬ ಅವರ ಗರಡಿಯಲ್ಲಿ ಬೆಳೆದ ಕಲಾವಿದೆ ಶಾಲೆಗೆ ಹೋಗಿಲ್ಲ. ಮಾರ್ಗದರ್ಶಕರ ಮಾತುಗಳನ್ನು ಮನದಲ್ಲಿಟ್ಟುಕೊಂಡು ಮನಮೋಹಕವಾಗಿ ನಾಟಕ ಪ್ರದರ್ಶನದಲ್ಲಿ ತೊಡಗಿಕೊಂಡಿದ್ದಾರೆ.

ಮೊದಲಿಗೆ ಅವರು ಸಾಮಾಜಿಕ ನಾಟಕಗಳಾದ ಕಲಿತ ಕಳ್ಳ, ಚಿನ್ನದ ಗೊಂಬೆ, ತವರೂರು, ಜಮೀನ್ದಾರರು, ಕಳ್ಳ ಗುರು– ಸುಳ್ಳು ಶಿಷ್ಯ ನಾಟಕಗಳನ್ನು ಆಡಿದ್ದಾರೆ. ಇತ್ತೀಚೆಗೆ ಸಂಗ್ಯಾಬಾಳ್ಯಾ ನಾಟಕ ಪ್ರದರ್ಶಿಸಿ ಹೆಚ್ಚು ಜನಪ್ರಿಯತೆ ಗಳಿಸಿದರು. ರಾಜ್ಯ ಮತ್ತು ಹೊರ ರಾಜ್ಯಗಳಲ್ಲೂ ನಾಟಕಗಳನ್ನು ಪ್ರದರ್ಶಿಸಿ ಅಲ್ಲಿನ ಜನಮನ ಗೆದ್ದಿದ್ದಾರೆ.

ಅವರಿಗೆ ಸಾಕಷ್ಟು ಪ್ರತಿಭೆ ಇದ್ದರೂ ನಿರ್ಲಕ್ಷ್ಯಕ್ಕೆ ಒಳಗಾಗಿರುವುದು ಇಲ್ಲಿನ ಕಲಾವಿದರ ಅಸಮಾಧಾನಕ್ಕೆ ಕಾರಣವಾಗಿದೆ. ಈಗಲಾದರೂ ಸರ್ಕಾರ ಗುರುತಿಸಿ ಪ್ರೋತ್ಸಾಹಿಸುವುದೇ ಎಂಬ ನಿರೀಕ್ಷೆ ಅವರದಾಗಿದೆ.

ಪ್ರೋತ್ಸಾಹಿಸಲಿ

ಸುಮಿತ್ರಾಬಾಯಿ ಹೊಸಮನಿ ಅವರು ಬಯಲಾಟದ ಸುಪ್ರಸಿದ್ಧ ಕಲಾವಿದೆ. ಸರ್ಕಾರ ಅಂಥವರನ್ನು ಗುರುತಿಸಿ ಪ್ರೋತ್ಸಾಹಿಸಬೇಕು.

–ಸಿದ್ದು ಮೋಟೆ, ಸೆನೆಟ್‌ ಮಾಜಿ ಸದಸ್ಯರು, ಜಾನಪದ ವಿಶ್ವವಿದ್ಯಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT