ಬುಧವಾರ, ಏಪ್ರಿಲ್ 21, 2021
23 °C
ಮಧುಮೇಹ ನ್ಯೂನತೆಯುಳ್ಳ ಮಕ್ಕಳಿಗೆ ಬೇಸಿಗೆ ಶಿಬಿರ

ಅನಾರೋಗ್ಯವೆಂದು ಎದೆಗುಂದದಿರಿ: ಕತೆಗಾರ್ತಿ ಮೋನಿಕಾ ಕಕ್ಕರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಅನಾರೋಗ್ಯವೆಂದು ಎದೆಗುಂದದೇ ಅದನ್ನೇ ಸವಾಲಾಗಿ ಸ್ವೀಕರಿಸಿ, ಸಾಧನೆ ಮಾಡಬೇಕು. ಸಣ್ಣ ಖುಷಿಗಳನ್ನೇ ಮೆಟ್ಟಿಲುಗಳನ್ನಾಗಿ ಪರಿವರ್ತಿಸಿಕೊಂಡು ಮುನ್ನುಗ್ಗಬೇಕು. ಯಶಸ್ಸಿಗೆ ಕಾರಣವಾದ ಘಟನೆಗಳಿಗೆ ಅಭಿನಂದನೆ ಸಲ್ಲಿಸಬೇಕು. ಆಗ ಮತ್ತಷ್ಟು ಪ್ರೇರಣೆ ದೊರೆಯುತ್ತದೆ’ ಎಂದು ಕತೆಗಾರ್ತಿ ಮೋನಿಕಾ ಕಕ್ಕರ ಹೇಳಿದರು.

ಇಲ್ಲಿನ ಕೆಎಲ್‌ಇ–ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಮಧುಮೇಹ ಕೇಂದ್ರವು ‘ಮಧುಮೇಹ ನ್ಯೂನತೆಯುಳ್ಳ ಮಕ್ಕಳಿಗೆ’ ವಿಶ್ವ ತಾಯಿಂದಿರ ದಿನದ ಅಂಗವಾಗಿ ಉಚಿತವಾಗಿ ಆಯೋಜಿಸಿರುವ 15ನೇ ವಾರ್ಷಿಕ ಬೇಸಿಗೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

‘ನಮ್ಮ ಯಶಸ್ಸುಗಳೇ ಜೀವನವನ್ನು ಧನಾತ್ಮಕ ಭಾವನೆಗಳಿಗೆ ಕರೆದುಕೊಂಡು ಹೋಗುತ್ತವೆ. ಸೋತಾಗ ಕುಗ್ಗದೇ ಮತ್ತೆ ಪುಟಿದೇಳಬೇಕು’ ಎಂದು ಸಲಹೆ ನೀಡಿದರು.

ಧೈರ್ಯ ತುಂಬುವ ಕಾರ್ಯ:

ಸಮಾಜಸೇವಕಿ ವೃಂದಾ ಕಲ್ವಾಡ ಮಾತನಾಡಿ, ‘ತಾಯಿ ಕೇವಲ ಗುರುವಾಗಿಲ್ಲ. ಮಕ್ಕಳನ್ನು ಸಕಲ ದೃಷ್ಟಿಯಿಂದ ಪೋಷಿಸಿ ತಿದ್ದಿ ಅವರಿಗೆ ಒಂದು ರೂಪ ನೀಡುವಲ್ಲಿ, ಗುರು, ಗೆಳತಿ, ಸಹೋದರಿಯಾಗಿ ಎಲ್ಲದರಲ್ಲೂ ಅವಳ ಶ್ರಮ ಅತ್ಯಧಿಕವಾಗಿದೆ. ಅದರಲ್ಲೂ ಮಧುಮೇಹ ನ್ಯೂನತೆಯುಳ್ಳ ಮಕ್ಕಳ ಕಾಳಜಿ ಮಾಡುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯ. ಅದರಲ್ಲಿ ತೃಪ್ತಿ ಕಾಣುವ ತಾಯಿ ಸ್ವಾರ್ಥ ಬಿಟ್ಟು ಸಮಾಜಕ್ಕೆ ತನ್ನ ಜೀವನ ಧಾರೆ ಎರೆಯುತ್ತಾಳೆ’ ಎಂದು ತಿಳಿಸಿದರು.

‘ಹಣವೊಂದರಿಂದಲೇ ಸಮಾಜ ಸೇವೆ ಮಾಡಲು ಸಾಧ್ಯವಿಲ್ಲ. ಕೌಶಲ ಆಧರಿಸಿದ ಶಿಕ್ಷಣ, ಜೀವನಶೈಲಿ, ಆರೋಗ್ಯಯುತ ಜೀವನ ಕಲ್ಪಿಸಲು ಸಹಾಯ ಮಾಡಬೇಕು’ ಎಂದರು.

ಕೆಎಲ್‌ಇ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿಯ ಕುಲಸಚಿವ ಡಾ.ವಿ.ಡಿ. ಪಾಟೀಲ ಮಾತನಾಡಿ, ‘ಮಧುಮೇಹ ಕೇಂದ್ರದ ಮೂಲಕ ಮಕ್ಕಳು ಹಾಗೂ ಪೋಷಕರಿಗೆ ಧೈರ್ಯ ತುಂಬುತ್ತಿರುವುದು ಕಾರ್ಯ ಶ್ಲಾಘನೀಯ. ಈ ಸಮಸ್ಯೆ ಇರುವ ಎಲ್ಲ ಮಕ್ಕಳಿಗೂ ಚಿಕಿತ್ಸೆ ದೊರೆಯುವಂತಾಗಬೇಕು. ಧನಾತ್ಮಕ ಚಿಂತೆಯಲ್ಲಿ ತೊಡಗಬೇಕು’ ಎಂದು ಕಿವಿಮಾತು ಹೇಳಿದರು.

ತಾಯಿ ಪಾತ್ರ ಮುಖ್ಯ:

ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಎಂ.ವಿ. ಜಾಲಿ ಮಾತನಾಡಿ, ‘ಮಧುಮೇಹ ನ್ಯೂನತೆಯ ಮಕ್ಕಳು ಸಾಮಾನ್ಯ ಮಕ್ಕಳಂತೆ ಸಹಜ ಜೀವನ ನಡೆಸಲು ಅವರನ್ನು ಸಿದ್ಧಗೊಳಿಸುವಲ್ಲಿ ತಾಯಿಯ ಪಾತ್ರವು ವೈದ್ಯರಷ್ಟೇ ಮುಖ್ಯವಾಗಿದೆ. ಅಂತರರಾಷ್ಟ್ರೀಯ ಮಧುಮೇಹ ಪ್ರತಿಷ್ಠಾನದಿಂದ ಸಹಾಯ ದೊರೆಯುತ್ತಿದ್ದು, ಸವಾಲನ್ನು ಎದುರಿಸುವ ಶಕ್ತಿ ನೀಡಲಾಗುತ್ತಿದೆ. ಪಾಲಕರಲ್ಲಿ ಅರಿವು ಮೂಡಿಸಲಾಗುತ್ತಿದೆ. ಮಕ್ಕಳು ಆರೋಗ್ಯಯುತ ಜೀವನ ನಡೆಸಬೇಕು ಎನ್ನುವ ಮಹತ್ವಾಕಾಂಕ್ಷೆಯಿಂದ ಕಾರ್ಯನಿರ್ವಹಿಸಲಾಗುತ್ತಿದೆ’ ಎಂದು ತಿಳಿಸಿದರು.

ಮಧುಮೇಹ ನಿಯಂತ್ರಣದಲ್ಲಿಟ್ಟುಕೊಂಡಿರುವ, ತಾಯಂದಿರಾದ ಮನೋಜ್‌ ಮಲಬಸರಿ, ಟಿ.ಎನ್. ಯಶಸ್ವಿನಿ ಹಾಗೂ ಶಿಲ್ಪಾ ಕಟ್ಟಿ ಅವರಿಗೆ ಸ್ವರ್ಣ ಪದಕ ನೀಡಿ ಗೌರವಿಸಲಾಯಿತು. ಚಿತ್ರಕಲೆ, ಸಂಗೀತ, ನೃತ್ಯ, ರಸಪ್ರಶ್ನೆ, ಯೋಗ ಮತ್ತು ಧ್ಯಾನ, ಆಹಾರ ಸೇವನೆ ಪದ್ಧತಿ ಸೇರಿದಂತೆ ವಿವಿಧ ಕಾರ್ಯಕ್ರಮ ಏರ್ಪಡಿಸಲಾಗಿತ್ತು. 110 ಮಕ್ಕಳು ಪಾಲ್ಗೊಂಡಿದ್ದರು.

ಡಾ.ಆರ್.ಎಸ್. ಮುಧೋಳ ಮಾತನಾಡಿದರು. ಡಾ.ಜ್ಯೋತಿ ವಾಸೇದಾರ ಇದ್ದರು.

ಡಾ.ನಂದಿತಾ ಪವಾರ ನಿರೂಪಿಸಿದರು. ಡಾ.ಸಂಜಯ ಕಂಬಾರ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು