ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿಯಾಗಿ ಸುರೇಶ ಅಂಗಡಿ ನಾಮಪತ್ರ ಸಲ್ಲಿಕೆ

ಅಧಿಸೂಚನೆ ಪ್ರಕಟ; ಏ.4ರಂದು ಮತ್ತೊಮ್ಮೆ ಸಲ್ಲಿಸಲು ನಿರ್ಧಾರ
Last Updated 28 ಮಾರ್ಚ್ 2019, 11:23 IST
ಅಕ್ಷರ ಗಾತ್ರ

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಸಂಸದ ಸುರೇಶ ಅಂಗಡಿ ಬುಧವಾರ ಜಿಲ್ಲಾ ಚುನಾವಣಾಧಿಕಾರಿ ಎಸ್.ಬಿ. ಬೊಮ್ಮನಹಳ್ಳಿ ಅವರಿಗೆ 2 ಸೆಟ್ ನಾಮಪತ್ರಗಳನ್ನು ಸಲ್ಲಿಸಿದರು.

ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಇಂದು ಮುಹೂರ್ತದ ಪ್ರಕಾರ ನಾಮಪತ್ರ ಸಲ್ಲಿಸಿದ್ದೇನೆ. ಏ.4ರಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ನಾಯಕ ಜಗದೀಶ ಶೆಟ್ಟರ್ ಮೊದಲಾದವರೊಂದಿಗೆ ಮೆರವಣಿಗೆ ನಡೆಸಿ, ಮತ್ತೊಂದು ಸೆಟ್ ಸಲ್ಲಿಸಲಿದ್ದೇನೆ. ಸತತ 4ನೇ ಬಾರಿಗೆ ಸ್ಪರ್ಧಿಸುತ್ತಿದ್ದೇನೆ. ಈ ಬಾರಿಯೂ ಮತದಾರರು ಬೆಂಬಲಿಸುವ ವಿಶ್ವಾಸವಿದೆ’ ಎಂದರು.

ಎಂಇಎಸ್ ಮುಖಂಡ ಹಾಗೂ ಮಾಜಿ ಶಾಸಕ ಸಂಭಾಜಿ ಪಾಟೀಲ ಅವರನ್ನು ಭೇಟಿಯಾದ ಕುರಿತು ಪ್ರತಿಕ್ರಿಯಿಸಿದ ಅವರು, ‘ಚುನಾವಣೆ ಸಂದರ್ಭದಲ್ಲಿ ಎಲ್ಲರನ್ನೂ ಭೇಟಿಯಾಗಿ ಮತ ಕೇಳಬೇಕಾಗುತ್ತದೆ; ಬೆಂಬಲ ಕೋರಬೇಕಾಗುತ್ತದೆ. ಹೀಗಾಗಿ, ಅವರನ್ನು ಭೇಟಿಯಾಗಿದ್ದೆ. ಭಾರತಕ್ಕಾಗಿ ನಡೆಯುತ್ತಿರುವ ಈ ಚುನಾವಣೆಯಲ್ಲಿ ನಮ್ಮನ್ನು ಬೆಂಬಲಿಸಬೇಕು ಎಂದು ಕೋರಿದ್ದೇನೆ’ ಎಂದರು.

ಇದಕ್ಕೂ ಮುನ್ನ ಪತ್ನಿ ಮಂಗಳಾ ಜೊತೆ ಚನ್ನಮ್ಮ ವೃತ್ತದಲ್ಲಿರುವ ಗಣೇಶ ಮಂದಿರದಲ್ಲಿ ಪೂಜೆ ಸಲ್ಲಿಸಿದರು.

ಗೆಲುವು ನಿಶ್ಚಿತ

ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಮಾತನಾಡಿ, ‘ಈ ಬಾರಿಯೂ ಅಂಗಡಿ ಗೆಲುವು ನಿಶ್ಚಿತ. 3 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಯಾರೇ ಆದರೂ ಅಲ್ಲಿಯೂ ಗೆಲ್ಲುತ್ತೇವೆ. ನಾನು ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಆದರೆ, ರಾಜ್ಯಸಭಾ ಸದಸ್ಯನ ಅಧಿಕಾರದ ಅವಧಿ ಇನ್ನೂ ಒಂದು ವರ್ಷವಿದೆ, ಹೀಗಾಗಿ ಈಗ ಸ್ಪರ್ಧೆ ಬೇಡ ಎಂದು ಪಕ್ಷದ ವರಿಷ್ಠರು ಹೇಳಿದರು. ಹೀಗಾಗಿ ನಾನು ಸುಮ್ಮನಾದೆ' ಎಂದು ಪ್ರತಿಕ್ರಿಯೆ ನೀಡಿದರು.

‘ಈಗ ರಮೇಶ ಕತ್ತಿ ಮತ್ತು ಅಣ್ಣಾಸಾಹೇಬ ಜೊಲ್ಲೆ ನಡುವೆ ಟಿಕೆಟ್‌ಗಾಗಿ ಪೈಪೋಟಿ ನಡೆದಿದೆ. ಯಾರಿಗೆ ಟಿಕೆಟ್ ಸಿಕ್ಕರೂ ನಾವು ಪಕ್ಷದ ಗೆಲುವಿಗೆ ಶ್ರಮಿಸುತ್ತೇವೆ’ ಎಂದು ಹೇಳಿದರು.

‘ಜೆಡಿಎಸ್‌ ಮುಖಂಡರ ಮನೆಗಳ ಮೇಲೆ ನಡೆದಿರುವ ಐಟಿ ದಾಳಿ ರಾಜಕೀಯಪ್ರೇರಿತ ಅಲ್ಲ. ದುಡ್ಡು ಇದ್ದೋರ ಮೇಲೆ ಐಟಿ ದಾಳಿ ನಡೆಯುತ್ತದೆ. ಇದೊಂದು ಸಹಜವಾದ ಪ್ರಕ್ರಿಯೆ’ ಎಂದು ಹೇಳಿದರು.

ಜನರು ಬಯಸಿದ್ದಾರೆ

ಪಕ್ಷದ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಉಸ್ತುವಾರಿ ಸಂಜಯ ಪಾಟೀಲ ಮಾತನಾಡಿ, ‘ದೇಶದ ಸಂಸ್ಕೃತಿ ಹಾಗೂ ಧರ್ಮ ರಕ್ಷಣೆಗಾಗಿ ಛತ್ರಪತಿ ಶಿವಾಜಿ ಮಹಾರಾಜ, ಕ್ರಾಂತಿವೀರ ಸಂಗೊಳ್ಳಿರಾಯಣ್ಣ, ವೀರ್ ಸಾವರ್ಕರ್‌ ಮೊದಲಾದವರಂತಹ ನಾಯಕತ್ವ ಗುಣಗಳನ್ನು ನರೇಂದ್ರ ಮೋದಿ ಅವರಲ್ಲಿ ಕಾಣುತ್ತಿದ್ದೇವೆ. ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಕಾಣಲು ಜನರು ಬಯಸಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಕಾಂಗ್ರೆಸ್ ಪಕ್ಷದಲ್ಲಿ ಕ್ಯಾಪ್ಟನ್ ಕೊರತೆ ಇದೆ. ಅವರಲ್ಲಿ ಅಧಿಕೃತ ನಾಯಕ ಯಾರೆಂದು ಗೊತ್ತಾಗುತ್ತಿಲ್ಲ. ಆದರೆ, ನಮ್ಮ ಪಕ್ಷದಲ್ಲಿ ಮೋದಿ ಒಬ್ಬರೇ ಕ್ಯಾಪ್ಟನ್ ಆಗಿದ್ದಾರೆ’ ಎಂದರು.

ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ, ಆನಂದ ಮಾಮನಿ, ಮಹಾದೇವಪ್ಪ ಯಾದವಾಡ, ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯಸಚೇತಕ ಮಹಾಂತೇಶ ಕವಗಿಮಠ, ಬಿಜೆಪಿ ರಾಜ್ಯ ಘಟಕದ ವಕ್ತಾರ ಎಂ.ಬಿ. ಝಿರಲಿ, ನಗರ ಘಟಕದ ಅಧ್ಯಕ್ಷ ರಾಜೇಂದ್ರ ಹರಕುಣಿ, ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷ ರಾಜು ಚಿಕ್ಕನಗೌಡರ, ಮುಖಂಡರಾದ ಈರಣ್ಣ ಕಡಾಡಿ, ಲಿಂಗರಾಜ ಪಾಟೀಲ, ಕಿರಣ ಜಾಧವ, ಆರ್‌.ಎಸ್. ಮುತಾಲಿಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT