ತೆರಿಗೆ ‘ಇ–ಪಾವತಿ’ಗೆ ಚಾಲನೆ

ಶುಕ್ರವಾರ, ಜೂಲೈ 19, 2019
22 °C
ಎಚ್‌ಡಿಎಫ್‌ಸಿ ಬ್ಯಾಂಕ್‌ನಿಂದ ಯಂತ್ರಗಳ ಪೂರೈಕೆ

ತೆರಿಗೆ ‘ಇ–ಪಾವತಿ’ಗೆ ಚಾಲನೆ

Published:
Updated:
Prajavani

ಬೆಳಗಾವಿ: ನಗರದ ನಾಗರಿಕರು ಆಸ್ತಿ ತೆರಿಗೆ ಪಾವತಿಗೆ ಇನ್ಮುಂದೆ ನಗರಪಾಲಿಕೆ ಕಚೇರಿಗೆ ಹೋಗಬೇಕಾದ ಅಗತ್ಯವಿಲ್ಲ. ಬಿಲ್‌ ಕಲೆಕ್ಟರ್‌ಗಳೇ ಮನೆಗಳಿಗೆ ಇಡಿಟಿ (ಎಲೆಕ್ಟ್ರಾನಿಕಲಿ ಡೇಟಾ ಕ್ಯಾಪ್ಚರ್) ಯಂತ್ರಗಳೊಂದಿಗೆ ಬಂದು ತೆರಿಗೆ ಕಟ್ಟಿಸಿಕೊಳ್ಳುತ್ತಾರೆ. ಈ ಹೊಸ ಸೇವೆಗೆ ಗುರುವಾರ ಚಾಲನೆ ನೀಡಲಾಯಿತು.

ಪ್ರಾದೇಶಿಕ ಆಯುಕ್ತ, ಪಾಲಿಕೆ ಆಡಳಿತಾಧಿಕಾರಿ ಪಿ.ಎ. ಮೇಘಣ್ಣವರ ಉದ್ಘಾಟಿಸಿ, ಸ್ವೈಪಿಂಗ್ ಮಷಿನ್ ಮಾದರಿಯ ಈ ಯಂತ್ರಗಳ ಕಾರ್ಯವೈಖರಿಯನ್ನು ವೀಕ್ಷಿಸಿದರು. ಆಯುಕ್ತ ಶಶಿಧರ ಕುರೇರ ಹೊಸ ವ್ಯವಸ್ಥೆ ಕುರಿತು ಪ್ರಾತ್ಯಕ್ಷಿಕೆ ನೀಡಿದರು. ಎಚ್‌ಡಿಎಫ್‌ಸಿ ಬ್ಯಾಂಕ್‌ನಿಂದ ಯಂತ್ರಗಳನ್ನು ಪಾಲಿಕೆಗೆ ಒದಗಿಸಲಾಗಿದೆ. ಮನೆ ಮನೆಗೆ ತೆರಳಿ ತೆರಿಗೆಯನ್ನು ಸಂಗ್ರಹಿಸಲಾಗುವುದು, ಇದಕ್ಕಾಗಿ ಸುಧಾರಿತ ತಂತ್ರಜ್ಞಾನ ಬಳಸಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಅದನ್ನು ಈಗ ಅನುಷ್ಠಾನಗೊಳಿಸಲಾಗಿದೆ.

‘ಎಲ್ಲ 58 ವಾರ್ಡ್‌ಗಳಿಗೂ ಒಂದೊಂದರಂತೆ 58 ಯಂತ್ರಗಳನ್ನು ಬಳಸಲಾಗುವುದು. ಪ್ರಸ್ತುತ 20 ಮಷಿನ್‌ಗಳು ದೊರೆತಿವೆ. ಕೆಲವೇ ದಿನಗಳಲ್ಲಿ ಎಲ್ಲವೂ ಪೂರೈಕೆಯಾಗಲಿವೆ. ಇವುಗಳನ್ನು ಬಿಲ್‌ ಕಲೆಕ್ಟರ್‌ಗಳು ತೆಗೆದುಕೊಂಡು ಹೋಗಿ, ಮನೆಗಳ ಮಾಲೀಕರಿಂದ ಅಲ್ಲಿಯೇ ವಿದ್ಯುನ್ಮಾನ ವಿಧಾನದಲ್ಲಿ ಪಾವತಿ ಮಾಡಿಕೊಳ್ಳುತ್ತಾರೆ. ಇದರಲ್ಲಿ ಪ್ರಿಂಟ್ ಕೂಡ ತೆಗೆಯಬಹುದು. ಡೆಬಿಟ್ ಕಾರ್ಡ್‌ ಅಥವಾ ಕ್ರೆಡಿಟ್ ಕಾರ್ಡ್‌ ಬಳಸಿ ಅನ್‌ಲೈನ್‌ನಲ್ಲಿ ಆಸ್ತಿ ತೆರಿಗೆ ಪಾವತಿಸಬಹುದು. ಪಾವತಿಸಿದವರಿಗೆ ಸ್ಥಳದಲ್ಲಿಯೇ ರಸೀದಿ ನೀಡಲಾಗುವುದು. ಸರಳ ಕ್ರಮದ ಮೂಲಕ ತೆರಿಗೆ ಸಂಗ್ರಹಕ್ಕೆ ಕ್ರಮ ವಹಿಸಲಾಗಿದೆ’ ಎಂದು ಆಯುಕ್ತ ಶಶಿಧರ ಕುರೇರ ‘ಪ್ರಜಾವಾಣಿ’ಗೆ ತಿಳಿಸಿದರು.

ಆನ್‌ಲೈನ್‌ ಪಾವತಿಗೆ ಬಯಸದವರು ಬಿಲ್‌ ಕಲೆಕ್ಟರ್‌ಗಳಿಗೆ ಚೆಕ್‌ ಅಥವಾ ಡಿಡಿ ಕೊಡಬಹುದು. ರಸೀದಿಯನ್ನು ನಂತರ ಪಡೆದುಕೊಳ್ಳಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು.

‘ಈ ಆರ್ಥಿಕ ವರ್ಷದಲ್ಲಿ ₹ 37 ಕೋಟಿ ಆಸ್ತಿ ತೆರಿಗೆ ವಸೂಲಿ ಗುರಿ ಹೊಂದಲಾಗಿದೆ. ಏಪ್ರಿಲ್‌ ತಿಂಗಳೊಂದರಲ್ಲೇ ₹ 18 ಕೋಟಿ ತೆರಿಗೆ ಸಂಗ್ರಹವಾಗಿದೆ. ಆಗ ಶೇ 5ರಷ್ಟು ವಿನಾಯಿತಿ ಇತ್ತು. ಮೇನಲ್ಲಿ ₹ 4 ಕೋಟಿ ಸಂಗ್ರಹವಾಗಿದೆ’ ಎಂದು ಮಾಹಿತಿ ನೀಡಿದರು.

‘ಆಸ್ತಿ ತೆರಿಗೆ ಸಂಗ್ರಹದ ‍ಪ್ರಮಾಣ ಹೆಚ್ಚಿಸುವುದಕ್ಕಾಗಿ, ಕಟ್ಟಟಗಳ ಮರುಮೌಲ್ಯೀಕರಣ ಮಾಡಲಾಗುತ್ತಿದೆ. ಪ್ರತಿ ಆಸ್ತಿ ವಿವರ ತೆಗೆದುಕೊಂಡು ಅವರ ವಿಸ್ತೀರ್ಣ, ಅಂತಸ್ತು ಮೊದಲಾದವುಗಳನ್ನು ಮರುಪರಿಶೀಲಿಸಲಾಗುತ್ತಿದೆ. ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗುಳಿದವರನ್ನು ತೆರಿಗೆಯ ಜಾಲಕ್ಕೆ ತರುವುದಕ್ಕೂ ಕ್ರಮ ವಹಿಸಲಾಗಿದೆ. ಈವರೆಗೆ 8,500 ಆಸ್ತಿಗಳ ಮರುಮೌಲ್ಯೀಕರಣ ಮುಗಿದಿದೆ.  ₹ 8 ಕೋಟಿ ವ್ಯತ್ಯಾಸ ಕಂಡುಬಂದಿದೆ’ ಎಂದು ತಿಳಿಸಿದರು.

‘ಪ್ರತಿ ಬಿಲ್‌ ಕಲೆಕ್ಟರ್‌ ನಿತ್ಯ ಕಡ್ಡಾಯವಾಗಿ 3 ಮರುಮೌಲ್ಯೀಕರಣ ಮಾಡಬೇಕು. ಸದ್ಯ 46 ವಾರ್ಡ್‌ ಕ್ಲರ್ಕ್‌ ಬಿಮ್‌ ಬಿಲ್‌ ಕಲೆಕ್ಟರ್‌ಗಳಿದ್ದಾರೆ. ಅವರು ನಿತ್ಯ 180ರಂತೆ ತಿಂಗಳಲ್ಲಿ 5400 ಆಸ್ತಿಗಳ ಮರುಮೌಲ್ಯೀಕರಣ ಮಾಡುತ್ತಾರೆ. ಈ ಕುರಿತು ವರದಿ ಪಡೆಯಲಾಗುತ್ತಿದೆ. ನಗರದಲ್ಲಿ ಒಟ್ಟು ₹ 50 ಕೋಟಿವರೆಗೆ ಆಸ್ತಿ ತೆರಿಗೆ ಸಂಗ್ರಹವಾಗುವ ನಿರೀಕ್ಷೆ ಇದೆ’ ಎನ್ನುತ್ತಾರೆ ಅವರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !