ಸೋಮವಾರ, ಮೇ 17, 2021
23 °C
ಇಲಾಖೆಯಿಂದ ಮೋಸ: ನ್ಯಾಯಬೆಲೆ ಅಂಗಡಿ ಮಾಲೀಕರ ಆರೋಪ

ಬಳಕೆಗೆ ಬಾರದಂತಾದ ಟ್ಯಾಬ್‌ಗಳು!

ಎಂ. ಮಹೇಶ Updated:

ಅಕ್ಷರ ಗಾತ್ರ : | |

ಬೆಳಗಾವಿಯಲ್ಲಿ ಖರೀದಿಸಿದ ಟ್ಯಾಬ್‌ ಅನ್ನು ರಾಜಶೇಖರ ತಳವಾರ ತೋರಿಸಿದರು

ಬೆಳಗಾವಿ: ಆಹಾರ ಇಲಾಖೆಯು, ನ್ಯಾಯಬೆಲೆ ಅಂಗಡಿಗಳ ಮಾಲೀಕರಿಗೆ ಪಡಿತರ ವಿತರಣೆಯಲ್ಲಿ ನೆರವಾಗುತ್ತದೆಂದು ಖಾಸಗಿ ಕಂಪನಿಯಿಂದ ಕೊಡಿಸಿದ್ದ ಟ್ಯಾಬ್‌ಲೆಟ್‌ಗಳು ಕೆಲವೇ ತಿಂಗಳಲ್ಲಿ ಬಳಕೆಗೆ ಬಾರದಂತಾಗಿವೆ.

ಪಡಿತರ ವಿತರಣೆ ವ್ಯವಸ್ಥೆಯಲ್ಲಿ ಸುಧಾರಣೆ ತರಲಾಗುತ್ತಿದೆ ಹಾಗೂ ಆಧುನಿಕ ತಂತ್ರಜ್ಞಾನಗಳ ಬಳಕೆಗೆ ಒತ್ತು ನೀಡಲಾಗುತ್ತಿದೆ ಎಂದು ಹೇಳಿದ್ದ ಇಲಾಖೆ ಅಧಿಕಾರಿಗಳು, ಈ ಟ್ಯಾಬ್‌ ಬಳಸಿಕೊಂಡು ಪಡಿತರ ಚೀಟಿದಾರರ ಬೆರಳಚ್ಚು (ಬಯೊಮೆಟ್ರಿಕ್‌) ಹಾಗೂ ಐ ಸ್ಕ್ಯಾನ್‌ ಮಾಡಬಹುದು ಎಂದು ತಿಳಿಸಿದ್ದರು. ಇದರಿಂದ ಕಂಪ್ಯೂಟರ್ (ಡೆಸ್ಕ್‌ಟಾಪ್‌ ಅಥವಾ ಲ್ಯಾಪ್‌ಟಾಪ್‌) ಅವಲಂಬನೆ ಕಡಿಮೆ ಮಾಡಬಹುದು. ಇಲಾಖೆಗೆ ಸಂಬಂಧಿಸಿದ ತಂತ್ರಾಂಶಗಳು ಅಡಕವಾಗರುವುದರಿಂದ, ಸರಳವಾಗಿ ಪ್ರಕ್ರಿಯೆ ನಡೆಸಬಹುದು. ಮೊಬೈಲ್‌ ಫೋನ್‌ನಂತೆ ಜೊತೆಯಲ್ಲಿ ತೆಗೆದುಕೊಂಡು ಹೋಗಬಹುದು ಎಂದೆಲ್ಲಾ ಹೇಳಲಾಗಿತ್ತು. ಆದರೆ, ಖರೀದಿಸಿದ ಕೆಲವೇ ತಿಂಗಳಲ್ಲಿ ಅವುಗಳಿಂದ ಪ್ರಯೋಜನ ಇಲ್ಲದಂತಾಗಿದೆ.

ಪ್ರಯೋಜನವೇನು?:

‘ಹೋದ ವರ್ಷ ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಇಲಾಖೆಯಿಂದ ಕಾರ್ಯಾಗಾರ ಆಯೋಜಿಸಿ ಟ್ಯಾಬ್‌ ಬಳಕೆಯ ಕುರಿತು ತಿಳಿಸಲಾಗಿತ್ತು. ₹ 15ಸಾವಿರ ಬೆಲೆಯ ಸಾಧನವನ್ನು ₹ 500ರ ರಿಯಾಯಿತಿಯಲ್ಲಿ ₹ 14500ಕ್ಕೆ ನೀಡಲಾಗಿತ್ತು. ಕೆಲಸ ಸರಳವಾಗಬಹುದು ಎನ್ನುವ ಉದ್ದೇಶದಿಂದ 50ಕ್ಕೂ ಹೆಚ್ಚು ಮಂದಿ ಖರೀದಿಸಿದ್ದರು. ಆದರೆ, ಇದರಲ್ಲಿ ಕೇವಲ ಒಂದು ತಿಂಗಳಷ್ಟೇ ಬೆರಳಚ್ಚು ಕೆಲಸವನ್ನು ಮಾಡಲಾಯಿತು. ನಂತರ, ಬದಲಾದ ತಂತ್ರಾಂಶಗಳಿಗೆ ತಕ್ಕಂತೆ ಟ್ಯಾಬ್‌ಗಳು ಸಪೋರ್ಟ್‌ ಮಾಡುತ್ತಿಲ್ಲ. ಇದರಿಂದಾಗಿ, ನಮಗೆ ಸಾವಿರಾರು ರೂಪಾಯಿ ನಷ್ಟವಾಯಿತು. ಉಪಯೋಗಿಸಲಾಗದ ಟ್ಯಾಬ್‌ ಇಟ್ಟುಕೊಂಡು ಪ್ರಯೋಜನವೇನು ಎನ್ನುವುದಕ್ಕೆ ಇಲಾಖೆ ಅಧಿಕಾರಿಗಳು ಉತ್ತರಿಸಬೇಕು’ ಎಂದು ಸರ್ಕಾರಿ ನ್ಯಾಯಬೆಲೆ ಅಂಗಡಿಗಳ ಮಾಲೀಕರ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ ತಳವಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಟ್ಯಾಬ್‌ ಜೊತೆಗೆ ಅನಿವಾರ್ಯವಾಗಿ ಕಂಪ್ಯೂಟರ್‌ ಅಥವಾ ಲ್ಯಾಪ್‌ಟಾಪ್‌ ಖರೀದಿಗೂ ಹೂಡಿಕೆ ಮಾಡಬೇಕಾಯಿತು. ಟ್ಯಾಬ್‌ನಿಂದ ಪ್ರಯೋಜನವಿಲ್ಲ ಎಂದು ತಿಳಿಸಿ, ಇತರರು ಖರೀದಿಸದಂತೆ ಮಾಡಿದೆವು. ಈ ವಿಷಯವನ್ನು ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಸಾಧನ ವಾಪಸ್‌ ಪಡೆದುಕೊಂಡು ಹಣ ಮರಳಿಸುವ ವ್ಯವಸ್ಥೆ ಮಾಡಬೇಕು ಎಂದು ಕೋರಿದ್ದೇವೆ. ಆದರೆ, ಪ್ರಯೋಜನವಾಗಿಲ್ಲ’ ಎಂದು ದೂರಿದರು.

ಒತ್ತಾಯ ಮಾಡಿರಲಿಲ್ಲ:

‘ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಾವಿರಾರು ಮಂದಿ ಈ ಟ್ಯಾಬ್‌ಗಳನ್ನು ಖರೀದಿಸಿದ್ದರು. ಅವರೆಲ್ಲರವೂ ಇಲಾಖೆಯವರನ್ನು ನಂಬಿ ಮೋಸಕ್ಕೆ ಒಳಗಾಗಿದ್ದಾರೆ. ಹಿರಿಯ ಅಧಿಕಾರಿಗಳು ಇತ್ತ ಗಮನಹರಿಸಬೇಕು ನ್ಯಾಯ ದೊರಕಿಸಿಕೊಡಬೇಕು’ ಎಂದು ಕೋರಿದರು.

ಈ ಕುರಿತು ಪ್ರತಿಕ್ರಿಯಿಸಿದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕಿ ಎಸ್‌.ಎಸ್‌. ಬಳ್ಳಾರಿ, ‘ನ್ಯಾಯಬೆಲೆ ಅಂಗಡಿಗಳ ಮಾಲೀಕರಿಗೆ ಕಾರ್ಯಾಗಾರ ನಡೆಸಿದ್ದು ನಿಜ. ಶಿಫಾರಸು ಕೂಡ ಮಾಡಲಾಗಿತ್ತು. ಆದರೆ, ಟ್ಯಾಬ್‌ಗಳನ್ನು ಖರೀದಿಸುವುದು ಕಡ್ಡಾಯ ಎಂದು ಸೂಚಿಸಿರಲಿಲ್ಲ. ಕೆಲವರು ಸ್ವಯಂಸ್ಫೂರ್ತಿಯಿಂದ ಖರೀದಿಸಿದ್ದರು. ಇಲಾಖೆಯ ಆಹಾರ ಎನ್ನುವ ತಂತ್ರಾಂಶ ಬಳಸುವುದಕ್ಕೆ ಅದು ಸಪೋರ್ಟ್‌ ಮಾಡುತ್ತಿದ್ದವು. ಆದರೆ, ಆಧಾರ್‌ ಪ್ರಾಧಿಕಾರದವರು ತಂತ್ರಾಂಶದಲ್ಲಿ ಬದಲಾವಣೆ ಮಾಡಿದ್ದರಿಂದ, ಆ ಟ್ಯಾಬ್‌ನಲ್ಲಿ ಬೆರಳಚ್ಚು ಪಡೆಯುವುದು, ಐ ಸ್ಕ್ಯಾನಿಂಗ್‌ ಸಾಧ್ಯವಾಗುತ್ತಿಲ್ಲ. ಬೇರೆ ಉದ್ದೇಶಕ್ಕೆ ಬಳಸಿಕೊಳ್ಳಬಹುದು’ ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು