ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಸ್ತೆಬದಿ ತ್ಯಾಜ್ಯ ಎಸೆಯುವವರ ವಿರುದ್ಧ ಕ್ರಮ ಜರುಗಿಸಿ: ಬೆಳಗಾವಿ ಡಿ.ಸಿ ಸೂಚನೆ

ಕೈಗಾರಿಕಾ ಇಲಾಖೆ ಜಿಲ್ಲಾಮಟ್ಟದ ಸಮಿತಿ ಸಭೆಯಲ್ಲಿ ಡಿ.ಸಿ ಮೊಹಮ್ಮದ್‌ ರೋಷನ್‌ ಸೂಚನೆ
Published 16 ಆಗಸ್ಟ್ 2024, 13:35 IST
Last Updated 16 ಆಗಸ್ಟ್ 2024, 13:35 IST
ಅಕ್ಷರ ಗಾತ್ರ

ಬೆಳಗಾವಿ: ‘ನಗರದಲ್ಲಿ ಕೈಗಾರಿಕೆಯವರು ರಸ್ತೆ ಬದಿ ತ್ಯಾಜ್ಯ ಎಸೆಯುವುದು ಕಂಡು ಬಂದರೆ ಕಠಿಣ ಕ್ರಮ ಜರುಗಿಸಬೇಕು’ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೈಗಾರಿಕೆ ಇಲಾಖೆಯ ಜಿಲ್ಲಾಮಟ್ಟದ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕೈಗಾರಿಕಾ ಪ್ರದೇಶದಲ್ಲಿನ ವಿವಿಧ ಕಾರ್ಖಾನೆಗಳ ತ್ಯಾಜ್ಯವನ್ನು ಮರುಬಳಕೆ ಮಾಡಲು ಅವಕಾಶವಿಲ್ಲ. ಹಾಗಾಗಿ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮಾರ್ಗಸೂಚಿ ಅನ್ವಯ, ತ್ಯಾಜ್ಯ ವಿಲೇವಾರಿಗೆ ಕ್ರಮ ವಹಿಸಬೇಕು’ ಎಂದು ತಿಳಿಸಿದರು.

‘ಕೈಗಾರಿಕಾ ಪ್ರದೇಶದ ಕ್ಯಾಂಟೀನ್ ಮತ್ತು ಹೋಟೆಲ್‌ಗಳ ಕಸ ವಿಲೇವಾರಿಗೆ ಮಾತ್ರ ನಮಗೆ ಅವಕಾಶವಿದೆ. ಕೈಗಾರಿಕೆಯ ಉಳಿದ ಪರಿಸರದಲ್ಲಿನ ತ್ಯಾಜ್ಯ ವಿಲೇವಾರಿಗೆ ಹೆಚ್ಚಿನ ಖರ್ಚು–ವೆಚ್ಚ ತಗುಲುವುದರಿಂದ ಅದು ಸಾಧ್ಯವಿಲ್ಲ’ ಎಂದು ಪಾಲಿಕೆ ಅಧಿಕಾರಿಗಳು ವಿವರಿಸಿದರು.

ಜಾಗೃತಿ ಮೂಡಿಸಿ: ‘ಬಳ್ಳಾರಿ ನಾಲೆಯ ಕಲುಷಿತ ನೀರನ್ನು ಕೆಲವು ರೈತರು ಕೃಷಿಗೆ ಬಳಸುತ್ತಿರುವುದು ಕಂಡು ಬಂದಿದೆ. ಇಂಥ ನೀರು ಬಳಸದಂತೆ ರೈತರಿಗೆ ಜಾಗೃತಿ ಮೂಡಿಸಬೇಕು. ಜನರಿಗೆ ಶುಚಿಯಾಗಿರುವ ತರಕಾರಿ ತಲುಪಿಸುವ ನಿಟ್ಟಿನಲ್ಲಿ ಸಮಿತಿ ರಚಿಸಬೇಕು’ ಎಂದು ಮೊಹಮ್ಮದ್‌ ರೋಷನ್‌ ತಿಳಿಸಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ‘ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ವಿಲೇವಾರಿಗೆ ಗುರುತಿಸಿದ ಸ್ಥಳಗಳಲ್ಲಿ ಮಾತ್ರ ಕಾರ್ಖಾನೆಯವರು ತ್ಯಾಜ್ಯ ತಂದು ಹಾಕಬೇಕು. ತಾಲ್ಲೂಕಿನ ಹೊನಗಾ, ನಾವಗೆ, ಕಿಣಯೇ, ವಾಘವಾಡೆ, ದೇಸೂರು ಗ್ರಾ.ಪಂ ವ್ಯಾಪ್ತಿಗೆ ಬರುವ ಕಾರ್ಖಾನೆಗಳಿಗೆ ಸರ್ಕಾರದ ಮಾರ್ಗಸೂಚಿ ಅನ್ವಯ, ತೆರಿಗೆ ನಿಗದಿಪಡಿಸಬೇಕು. ಒಂದುವೇಳೆ ಯಾರಾದರೂ ಹೆಚ್ಚಿನ ತೆರಿಗೆ ವಸೂಲಿ ಮಾಡುತ್ತಿರುವುದು ಕಂಡುಬಂದರೆ, ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಮಚ್ಛೆ–ಮಾರ್ಕಂಡೇಯ ನಗರದ ಮಾರ್ಗದಲ್ಲಿ ಕಾರ್ಖಾನೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹದಗೆಟ್ಟಿವೆ. ಇದರಿಂದ ಕಾರ್ಮಿಕರ ಸಂಚಾರಕ್ಕೆ ತೊಡಕಾಗಿದೆ. ಈ ರಸ್ತೆ ಸುಧಾರಣೆಗೆ ಕ್ರಮ ಕೈಗೊಳ್ಳಬೇಕು’ ಎಂದು ಕಾರ್ಖಾನೆಗಳ ಮಾಲೀಕರು ಮನವಿ ಮಾಡಿದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿನಿರ್ದೇಶಕ ಸೂರ್ಯನಾರಾಯಣ ಭಟ್ ಮಾತನಾಡಿದರು.

ಮಹಾನಗರ ಪಾಲಿಕೆ ಉಪ ಆಯುಕ್ತ ಉದಯಕುಮಾರ ತಳವಾರ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಹಾಂತೇಶ ಮುರಗೋಡ ಇತರರಿದ್ದರು.

ಗ್ರಾಮೀಣ ಪ್ರದೇಶಗಳಲ್ಲಿ ಸ್ವಉದ್ಯೋಗ ಕೈಗೊಳ್ಳಲು ಯುವಕ–ಯುವತಿಯರಿಗೆ ನೆರವಾಗುವ ದೃಷ್ಟಿಯಿಂದ ಸರ್ಕಾರಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕ್ರಮ ವಹಿಸಬೇಕು
ಮೊಹಮ್ಮದ್‌ ರೋಷನ್‌, ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT