7

ಜಾಗೃತಿ ವಹಿಸುವಂತೆ ಪ್ರವಾಸಿಗರಲ್ಲಿ ಶಾಸಕ ಬೆನಕೆ ಮನವಿ

Published:
Updated:

ಬೆಳಗಾವಿ:  ಪ್ರವಾಸಕ್ಕೆ ಹೋದಾಗ ಅತ್ಯಂತ ಜಾಗರೂಕತೆಯಿಂದ ನಡೆದುಕೊಳ್ಳಬೇಕು. ಬೆಟ್ಟ ಗುಡ್ಡ, ಜಲಪಾತ ಪ್ರದೇಶಗಳಿಗೆ ತೆರಳಿದಾಗ ಹಾಗೂ ವಾಹನ ಚಲಾಯಿಸುವಾಗ ಸುರಕ್ಷತೆಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಶಾಸಕ ಅನಿಲ ಬೆನಕೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಬೆಳಗಾವಿ ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳಲ್ಲಿ ಇತ್ತೀಚೆಗೆ ಸಂಭವಿಸಿದ ಅಪಘಾತಗಳಲ್ಲಿ ಎಂಟು ಜನ ಯುವಕರು ಅಸುನೀಗಿದ್ದಾರೆ. ಅವರನ್ನೇ ನಂಬಿಕೊಂಡಿದ್ದ ವಯಸ್ಸಾದ ತಂದೆ, ತಾಯಿ, ಸಹೋದರ, ಸಹೋದರಿಯರನ್ನು ಬಿಟ್ಟು ಹೋಗಿದ್ದಾರೆ. ಪ್ರವಾಸದ ಸಂದರ್ಭದಲ್ಲಿ ಸ್ವಲ್ಪ ಜಾಗೃತಿ ವಹಿಸಿದ್ದರೆ ಸಾವಿಗೀಡಾಗುವ ಪ್ರಸಂಗ ಒದಗಿ ಬರುತ್ತಿರಲಿಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಪಘಾತಗಳಲ್ಲಿ ಮೃತಪಟ್ಟ ದುರ್ದೈವಿಗಳ ಮನೆಗೆ ಭೇಟಿ ನೀಡಿದಾಗ, ಅಲ್ಲಿನ ದೃಶ್ಯ ಕಂಡು ಗದ್ಗದಿತನಾಗಿದ್ದೇನೆ. ತಂದೆ– ತಾಯಿ, ಸಹೋದರರಿಯರ ಆಕ್ರಂದನ ಸಹಿಸಲು ಅಸಾಧ್ಯ. ಪ್ರವಾಸಕ್ಕೆ ಹೊರಡುವ ಮುನ್ನ ತಮ್ಮ ಮಕ್ಕಳಿಗೆ ಪೋಷಕರು ತಾಕೀತು ಮಾಡಿ ಕಳುಹಿಸಬೇಕು ಎಂದು ಮನವಿ ಮಾಡಿದರು.

ಮನುಷ್ಯನ ಜೀವನ ಅತ್ಯಮೂಲ್ಯ. ಆ ಜೀವನದಲ್ಲಿ ಮನೋರಂಜನೆ, ಮೋಜು ಮಸ್ತಿ ಕೂಡಾ ಅವಶ್ಯಕ. ಆದರೆ ಅದನ್ನು ಮಾಡುವಾಗ ನಮ್ಮ ಮೈ ಮೇಲೆ ಪ್ರಜ್ಞೆ ಇರಬೇಕು ಮತ್ತು ನಾವು ಏನು ಮಾಡುತ್ತಿದ್ದೇವೆ ಎಂಬ ಅರಿವಿರಬೇಕು ಎಂದು ಕಿವಿ ಮಾತು ಹೇಳಿದ್ದಾರೆ.

ಬೆಳಗಾವಿ ಜಿಲ್ಲೆಗೆ ಹೊಂದಿಕೊಂಡಿರುವ ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಲ್ಲಿ ಅನೇಕ ಪ್ರವಾಸಿ ತಾಣಗಳಿವೆ. ಇಲ್ಲಿಗೆ ಪ್ರತಿವರ್ಷ ಬೆಳಗಾವಿಯ ಯುವಕ– ಯುವತಿಯರು ಭೇಟಿ ನೀಡುತ್ತಾರೆ. ಆ ಸಂದರ್ಭದಲ್ಲಿ ವಾಹನಗಳನ್ನು ಚಲಾಯಿಸುವವರು ಹೆಚ್ಚು ಜಾಗರೂಕತೆ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !