ಭಾರತದಲ್ಲಲ್ಲದೇ, ಪಾಕಿಸ್ತಾನದಲ್ಲಿ ಕೇಸರೀಕರಣ ಮಾಡಲಾದೀತೇ?: ಸಂಸದ ಶಾಸಕ ವಾಕ್ಸಮರ

7
ಸತೀಶ– ಸುರೇಶ ಜಟಾಪಟಿ

ಭಾರತದಲ್ಲಲ್ಲದೇ, ಪಾಕಿಸ್ತಾನದಲ್ಲಿ ಕೇಸರೀಕರಣ ಮಾಡಲಾದೀತೇ?: ಸಂಸದ ಶಾಸಕ ವಾಕ್ಸಮರ

Published:
Updated:

ಬೆಳಗಾವಿ: ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ (ಆರ್‌ಸಿಯು)ದಲ್ಲಿ ಸೋಮವಾರ ನಡೆದ ದಾಂದಲೆ ಪ್ರಕರಣ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಹಾಗೂ ಸಂಸದ, ಬಿಜೆಪಿಯ ಸುರೇಶ ಅಂಗಡಿ ನಡುವಿನ ಜಟಾಪಟಿಗೆ ಕಾರಣವಾಗಿದೆ.

ಬುಧವಾರ ಪತ್ರಕರ್ತರೊಂದಿಗೆ ಪ್ರತ್ಯೇಕವಾಗಿ ಮಾತನಾಡಿದ ಅವರು, ಆರೋಪ–ಪ್ರತ್ಯಾರೋಪ ಮಾಡಿದರು.

‘ಆರ್‌ಸಿಯುನಲ್ಲಿ ಸಿಂಡಿಕೇಟ್ ಸದಸ್ಯ ರಾಜು ಚಿಕ್ಕನಗೌಡ ಸೇರಿದಂತೆ ಕೆಲವರು ಎಬಿವಿಪಿ ಸಂಘಟನೆ ಮುಂದಿಟ್ಟುಕೊಂಡು ಕೇಸರೀಕರಣ ಮಾಡುತ್ತಿದ್ದಾರೆ. ಇದರ ವಿರುದ್ಧ ಹೋರಾಟ ನಡೆಸಲಾಗುವುದು. ವಿಶ್ವವಿದ್ಯಾಲಯದ ವಿಷಯದಲ್ಲಿ ರಾಜಕೀಯ ಮಾಡಬಾರದು ಎಂದು ಸುಮ್ಮನಿದ್ದೆ. ಇನ್ಮುಂದೆ ರಾಜಕೀಯ ಆರಂಭಿಸಬೇಕಾಗುತ್ತದೆ’ ಎಂದು ಸತೀಶ ಎಚ್ಚರಿಕೆ ನೀಡಿದರು.

‘ವಿಶ್ವವಿದ್ಯಾಲಯದಲ್ಲಿ ಅವ್ಯವಹಾರ, ಅಕ್ರಮ ನಡೆದಿರುವ ಬಗ್ಗೆ ದೂರುಗಳಿವೆ. ಆ ಬಗ್ಗೆ ಪ್ರಶ್ನಿಸಲು ಕೆಲವರು ಅಲ್ಲಿಗೆ ಹೋಗಿದ್ದಾರೆ. ಆದರೆ ಅಲ್ಲಿ ನಡೆದ ದಾಂದಲೆಗೂ ನನಗೂ ಸಂಬಂಧವಿಲ್ಲ. ಹೀಗಾಗಿ, ಪೊಲೀಸರ ಮೇಲೆ ಒತ್ತಡ ಹೇರುವ ಪ್ರಶ್ನೆಯೇ ಇಲ್ಲ’ ಎಂದು ಹೇಳಿದರು.

ಜಿಲ್ಲಾಧಿಕಾರಿ ಎಸ್.ಬಿ. ಬೊಮ್ಮನಹಳ್ಳಿ ಭೇಟಿಯಾದ ನಂತರ ಮಾತನಾಡಿದ ಸಂಸದ ಸುರೇಶ ಅಂಗಡಿ, ‘ಕೇಸರೀಕರಣವನ್ನು ಭಾರತದಲ್ಲಲ್ಲದೇ ಪಾಕಿಸ್ತಾನದಲ್ಲಿ ಮಾಡಲಾದೀತೆ? ಕೇಸರಿ ನಮ್ಮ ದೇಶದ ಹೆಮ್ಮೆಯ ಸಂಕೇತ’ ಎಂದು ತಿರುಗೇಟು ನೀಡಿದರು. ‘ಶಾಸಕರು ರಾಜಕಾರಣ ಮಾಡಲಿ ಬಿಡಿ’ ಎಂದು ಸವಾಲು ಹಾಕಿದರು.

‘ದಾಂದಲೆ ಪ್ರಕರಣದಲ್ಲಿ ಶಾಸಕರ ಬೆಂಬಲಿಗರು ಭಾಗಿಯಾಗಿದ್ದಾರೆ. ಕುಲಪತಿ ಪ್ರೊ.ಎಸ್.ಬಿ. ಹೊಸಮನಿ ಮೇಲೆ ಹಲ್ಲೆ ನಡೆದಿದೆ. ಪೊಲೀಸರು ಒಂದು ದಿನದೊಳಗೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಬೇಕು. ಜಿಲ್ಲಾಧಿಕಾರಿ ಕ್ರಮಕ್ಕೆ ಸೂಚಿಸಬೇಕು. ಇಲ್ಲವಾದಲ್ಲಿ, ಮುಖ್ಯಮಂತ್ರಿ ಗೃಹ ಕಚೇರಿ ಎದುರು ಧರಣಿ ನಡೆಸುತ್ತೇನೆ. ಅ. 4ರಂದು ಬೆಂಗಳೂರಿಗೆ ಹೋಗುತ್ತಿದ್ದೇನೆ’ ಎಂದು ತಿಳಿಸಿದರು.

‘ಕಾನೂನು, ಸುವ್ಯವಸ್ಥೆ ಕಾಪಾಡಲು ಆಗಿದ್ದರೆ ಅಧಿಕಾರಿಗಳು ಇಲ್ಲಿಂದ ಜಾಗ ಖಾಲಿ ಮಾಡಲಿ’ ಎಂದು ಗುಡುಗಿದರು.

ದಾಂದಲೆ ಪ್ರಕರಣ ಖಂಡಿಸಿ ಎಬಿವಿಪಿ ಕಾರ್ಯಕರ್ತರು ಆರ್‌ಸಿಯು ಬಂದ್‌ ಮಾಡಿ ಪ್ರತಿಭಟನೆ ನಡೆಸಿದರು. ಬೈಲಹೊಂಗಲ ಪಟ್ಟಣದಲ್ಲಿ ಮುಖಂಡರು, ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟಿಸಿದರು.

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 0

  Sad
 • 1

  Frustrated
 • 5

  Angry

Comments:

0 comments

Write the first review for this !