ಭಾನುವಾರ, ಜೂನ್ 13, 2021
25 °C
ಅಲ್ಲಲ್ಲಿ ಧರೆಗುರುಳಿದ ವಿದ್ಯುತ್‌ ಕಂಬಗಳು, ತರಕಾರಿ ಮಾರಾಟಕ್ಕೆ ಅಡ್ಡಿ

‘ತೌಕ್ತೆ’ ಅಬ್ಬರಕ್ಕೆ ನಡುಗಿದ ಬೆಳಗಾವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ತೌಕ್ತೆ’ ಚಂಡಮಾರುತದ ಪರಿಣಾಮ ನಗರದಲ್ಲಿ ಭಾನುವಾರ ನಸುಕಿನಿಂದ ಇಡೀ ದಿನ ಜೋರು ಗಾಳಿಯೊಂದಿಗೆ ಮಳೆ ಸುರಿಯಿತು.

ಶನಿವಾರ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಆಗಾಗ ಮಳೆಯಾಗಿತ್ತು. ಗಾಳಿಯ ಅಬ್ಬರವೂ ಜೋರಾಗಿತ್ತು. ಈ ವಾತಾವರಣ 2ನೇ ದಿನವೂ ಮುಂದುವರಿಯಿತು.

ಕೋವಿಡ್–19 ಲಾಕ್‌ಡೌನ್ ಹಿನ್ನೆಲೆಯಲ್ಲಿ ಬೆಳಿಗ್ಗೆ 6ರಿಂದ 10ರವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ಈ ಸಮಯದಲ್ಲಿ ರಸ್ತೆ ಬದಿ ವ್ಯಾಪಾರಿಗಳು ಒಂದಷ್ಟು ವ್ಯಾಪಾರ ಮಾಡಿಕೊಳ್ಳುತ್ತಿದ್ದರು ಮತ್ತು ಗ್ರಾಹಕರು ತರಕಾರಿ, ಹಾಲು, ಹಣ್ಣು, ಮಾಂಸ ಮೊದಲಾದವುಗಳನ್ನು ತಂದುಕೊಳ್ಳುತ್ತಿದ್ದರು. ಮಳೆಯಿಂದಾಗಿ ವ್ಯಾಪಾರ ಹಾಗೂ ಖರೀದಿಗೆ ಅಡ್ಡಿಯಾಯಿತು. ವಾಯುವಿಹಾರಕ್ಕೆ ಹೋಗುವವರಲ್ಲಿ ಬಹುತೇಕರು ಮನೆಯಲ್ಲೇ ಉಳಿದರು. ಗಾಳಿಯ ರಭಸಕ್ಕೆ ಅಲ್ಲಲ್ಲಿ, ಮರಗಳು, ವಿದ್ಯುತ್‌ ಕಂಬಗಳು ಧರೆಗುಳಿದಿವೆ. ಮುಂಗಾರಿಗೂ ಮುನ್ನವೇ ಮುಂಗಾರಿನ ವಾತಾವರಣ ನಿರ್ಮಾಣವಾಗಿತ್ತು.

ಹಿರೇಬಾಗೇವಾಡಿ, ಸವದತ್ತಿ, ಗೋಕಾಕ, ರಾಯಬಾಗ, ಕಿತ್ತೂರು, ಚಿಕ್ಕೋಡಿ, ನಿಪ್ಪಾಣಿ, ಹಾರೂಗೇರಿ ಸೇರಿದಂತೆ ಹಲವೆಡೆ ಮಳೆ ಬಿದ್ದಿತು.


ಬೆಳಗಾವಿಯ ಸಿಪಿಇಡಿ ಕಾಲೇಜು ಮೈದಾನದ ತಾತ್ಕಾಲಿಕ ಮಾರುಕಟ್ಟೆಯಲ್ಲಿ ಮಾರಾಟವಾಗದಿದ್ದರಿಂದ ದಪ್ಪಮೆಣಸಿಕಾಯಿಯನ್ನು ರೈತರೊಬ್ಬರು ಸುರಿದು ಹೋಗಿದ್ದರು- ಪ್ರಜಾವಾಣಿ ಚಿತ್ರ

ಮಳೆ-ಗಾಳಿಯಿಂದಾಗಿ ತಾಲ್ಲೂಕಿನ ಖನಗಾಂವ ಕೆ.ಎಚ್. ಗ್ರಾಮದಲ್ಲಿ 4 ವಿದ್ಯುತ್ ಕಂಬಗಳು ಧರೆಗುರುಳಿ ತೊಂದರೆ ಉಂಟಾಯಿತು. ಕೆಲವು ಮನೆಗಳ ಶೀಟುಗಳು ಹಾರಿ ಹೋಗಿ ವಿದ್ಯುತ್ ತಂತಿಗಳ ಮೇಲೆ ಬಿದ್ದಿವೆ. ಹೀಗಾಗಿ, ಕಂಬಗಳು ಧರೆಗುರುಳಿದ್ದವು. ಪರಿಣಾಮ ಸುತ್ತಲಿನ ಓಣಿಗಳ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಮನೆಯ ಮೇಲಿನ ಶೀಟುಗಳು ಹಾರಿ ಹೋಗುತ್ತಿದ್ದಂತೆಯೇ ಒಳಗಿದ್ದವರು ಹೊರಗೆ ಓಡಿ ಬಂದಿದ್ದಾರೆ. ಇದರಿಂದ ಭಾರಿ ಅನಾಹುತ ತಪ್ಪಿದೆ. ಹೆಸ್ಕಾಂನವರು ಮಾರ್ಗ ದುರಸ್ತಿ ಕಾರ್ಯ ಕೈಗೊಂಡರು.

ಲಾಕ್‍ಡೌನ್ ಕಾರಣದಿಂದ ನಗರದ ಸಿಪಿಇಡಿ ಕಾಲೇಜು ಮೈದಾನದಲ್ಲಿ ತೆರೆದಿರುವ ತಾತ್ಕಾಲಿಕ ಮಾರುಕಟ್ಟೆಯಲ್ಲಿ ಅಂಗಡಿಗಳಿಗೆ ನೀರು ನುಗ್ಗಿತು. ಆವರಣವೆಲ್ಲವೂ ಕೆಸರುಗದ್ದೆಯಂತಾಗಿತ್ತು. ಸಂಗ್ರಹಿಸಿದ್ದ ತರಕಾರಿಗಳು ತೊಯ್ದು ಹೋದವು. ಖರೀದಿಸುವವರು ಬಾರದೆ ರೈತರು ಕಂಗಾಲಾದರು. ಕೆಲವರು, ತರಕಾರಿಗಳನ್ನು ಅಲ್ಲೇ ಚೆಲ್ಲಿ ಕಣ್ಣೀರು ತುಂಬಿಕೊಂಡು ಹೋದರು.ಬೆಳಗಾವಿಯ ಸಿಪಿಇಡಿ ಕಾಲೇಜು ಮೈದಾನದಲ್ಲಿ ತೆರೆದಿರುವ ತಾತ್ಕಾಲಿಕ ಮಾರುಕಟ್ಟೆ ಆವರಣವು ಮಳೆಯಿಂದಾಗಿ ಕೆಸರು ಗದ್ದೆಯಂತಾಗಿ ರೈತರು ಹಾನಿ ಅನುಭವಿಸಿದರು

‘ಎಪಿಎಂಸಿಯಲ್ಲಿ ಮಾರುಕಟ್ಟೆ ಚೆನ್ನಾಗಿದೆ. ಅಲ್ಲಿ ಬಂದ್ ಮಾಡಿ ಇಲ್ಲಿ ತಾತ್ಕಾಲಿಕ ಮಾರುಕಟ್ಟೆ ಮಾಡಿಕೊಟ್ಟಿದ್ದಾರೆ. ಮಳೆಯಿಂದಾಗಿ ಎಲ್ಲವೂ ಅಸ್ತವ್ಯಸ್ತವಾಗಿದೆ. ಮೊದಲೇ ತರಕಾರಿ ಬೆಲೆ ಕುಸಿದಿತ್ತು. ಹಾಕಿದ ಬಂಡವಾಳವೂ ಸಿಗುತ್ತಿರಲಿಲ್ಲ. ಈಗ, ಮಳೆಯಿಂದ ಹಾನಿ ಸಂಭವಿಸಿದ್ದು ಗಾಯದ ಮೇಲೆ ಬರೆ ಎಳೆದಂತಾಗಿದೆ’  ಎಂದು ರೈತರು ಅಳಲು ತೋಡಿಕೊಂಡರು. ‘ಜಿಲ್ಲಾಡಳಿತ ನಮ್ಮ ನೆರವಿಗೆ ಬರಬೇಕು’ ಎಂದು ಒತ್ತಾಯಿಸಿದರು.


ಮಳೆಯಲ್ಲಿ ತೋಯ್ದ ಬೆಳಗಾವಿ

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು