ಬೆಳಗಾವಿ: ‘ಶಿಕ್ಷಣ ಅಭಿವೃದ್ಧಿಯ ಸಂಕೇತ. ಯಾವ ರಾಜ್ಯದವರು ಶಿಕ್ಷಣ ಮತ್ತು ಶಿಕ್ಷಕರಿಗೆ ಆದ್ಯತೆ ಕೊಟ್ಟಿದ್ದಾರೆಯೋ, ಅವರು ಅಭಿವೃದ್ಧಿಯತ್ತ ಸಾಗಿದ್ದಾರೆ’ ಎಂದು ಶಾಸಕ ಆಸೀಫ್ ಸೇಠ್ ಹೇಳಿದರು.
ಇಲ್ಲಿನ ಗಾಂಧಿ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬೆಳಗಾವಿ ಶೈಕ್ಷಣಿಕ ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆ, ಪ್ರತಿಭಾಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಶಿಕ್ಷಣವು ನಮ್ಮನ್ನು ಅಭಿವೃದ್ಧಿಪಥದಲ್ಲಿ ಕೊಂಡೊಯ್ಯುತ್ತದೆ. ಸಮಾಜದಲ್ಲಿ ಜಾಗೃತಿ ಮೂಡಿಸುತ್ತದೆ. ಶಿಕ್ಷಣಕ್ಕೆ ಆದ್ಯತೆ ಕೊಡದಿದ್ದರೆ ಅಭಿವೃದ್ಧಿ ಸಾಧ್ಯವಿಲ್ಲ’ ಎಂದು ಅಭಿಪ್ರಾಯಪಟ್ಟರು.
‘ಯುವಜನರು ಇಂದು ವೈದ್ಯ, ಎಂಜಿನಿಯರ್, ಐಎಎಸ್ ಅಧಿಕಾರಿ ಹೀಗೆ... ವಿವಿಧ ಹುದ್ದೆ ಅಲಂಕರಿಸುತ್ತಿದ್ದಾರೆ. ಇವರನ್ನೆಲ್ಲ ರೂಪಿಸಿದ ಹಿರಿಮೆ ಶಿಕ್ಷಕ ವರ್ಗಕ್ಕೆ ಸಲ್ಲುತ್ತದೆ. ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಬಳಗದ ಕೊಡುಗೆ ದೊಡ್ಡದಿದೆ. ಹಲವು ಕಷ್ಟ, ಸವಾಲುಗಳನ್ನು ಎದುರಿಸಿ ಶಿಕ್ಷಕರು ಸಮರ್ಥವಾಗಿ ತಮ್ಮ ಹೊಣೆಗಾರಿಕೆ ನಿಭಾಯಿಸುತ್ತಿದ್ದಾರೆ’ ಎಂದ ಅವರು, ‘ಬೆಳಗಾವಿಯ ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. ಪ್ರತಿ ಶಾಲೆ ವಿದ್ಯಾರ್ಥಿಗಳಿಗೆ ಡೆಸ್ಕ್ ವ್ಯವಸ್ಥೆ ಮಾಡಲಾಗುವುದು’ ಎಂದರು.
ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ‘ಸದೃಢವಾದ ರಾಷ್ಟ್ರ ನಿರ್ಮಾಣಕ್ಕೆ ಶಿಕ್ಷಕರ ಕೊಡುಗೆ ಅಪಾರ. ಅವರು ವಿದ್ಯಾರ್ಥಿಗಳಲ್ಲಿ ಇರುವ ಅಜ್ಞಾನ ದೂರಗೊಳಿಸಿ, ಜ್ಞಾನದ ಹಾದಿಯಲ್ಲಿ ಕೊಂಡೊಯ್ಯುತ್ತಾರೆ. ಗುಣಾತ್ಮಕ ಶಿಕ್ಷಣ, ಶಿಸ್ತು, ನೈತಿಕ ಮೌಲ್ಯಗಳ ಮೂಲಕ ಉತ್ತಮ ಪ್ರಜೆಗಳನ್ನು ರೂಪಿಸಿ, ಸಮಾಜಕ್ಕೆ ಅರ್ಪಿಸಬೇಕಾದ ಜವಾಬ್ದಾರಿ ಶಿಕ್ಷಕರ ಮೇಲಿದೆ’ ಎಂದರು.
ಶಿಕ್ಷಣ ರಂಗದಲ್ಲಿ ಸಾಧನೆಗೈದ ಶಿಕ್ಷಕರು, ನಿವೃತ್ತ ಶಿಕ್ಷಕರು ಹಾಗೂ ಶೈಕ್ಷಣಿಕವಾಗಿ ಸಾಧನೆ ಮೆರೆದ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು.
ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ಕಾರ್ಯದರ್ಶಿ ಸಕ್ರೆಪ್ಪಗೌಡ ಬಿರಾದಾರ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಲೀಲಾವತಿ ಹಿರೇಮಠ, ಡಯಟ್ ಪ್ರಾಚಾರ್ಯ ಬಸವರಾಜ ನಾಲತವಾಡ, ಬೆಳಗಾವಿ ನಗರ ಕ್ಷೇತ್ರ ಶಿಕ್ಷಣಾಧಿಕಾರಿ ಐ.ಡಿ.ಹಿರೇಮಠ, ಶಿಕ್ಷಕರ ಸಂಘಟನೆಗಳ ಮುಖಂಡರಾದ ಜಯಕುಮಾರ ಹೆಬಳಿ, ರಾಮು ಗುಗವಾಡ ಇತರರಿದ್ದರು.
ಶಿಕ್ಷಕರ ಕಲ್ಯಾಣ ನಿಧಿಯಿಂದ ನೀಡಲಾದ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತರು:
ಬಸಯ್ಯ ಪೂಜೇರ, ರಾಮಪ್ಪ ತೋರಣಗಟ್ಟಿ, ಮುಬಸ್ರೀನ್ ಬಾಗೇವಾಡಿ, ವಿರೂಪಾಕ್ಷಿ ಸುಬೇದಾರ, ರಮೇಶ ಬೆಣಚಿನಮರಡಿ, ಬಸಪ್ಪಗೌಡ ಪಾಟೀಲ, ರಾಮಚಂದ್ರ ಲೆಂಕನಟ್ಟಿ, ಗೀತಾ ಜಮಖಂಡಿ, ರವಿ ಹಲಕರ್ಣಿ, ಆರ್.ಎಸ್.ಪಾಟೀಲ, ಎಂ.ಪಿ.ಡಿಸೋಜಾ, ಎ.ಡಿ.ಪಾಟೀಲ, ಭುಜಂಗ ಗಾವಡೆ, ಉಮಾಕಾಂತ ಮಾಯಪ್ಪನವರ, ಎಲ್.ಎಲ್.ಕುರೇರ, ನಾಗರಾಜಗೌಡ ಪಾಟೀಲ, ಗಣಪತಿ ಚವ್ಹಾಣ, ಐ.ಜಿ.ಸುಬ್ಬಾಪುರಮಠ, ಈರಣ್ಣ ಖಾನಪೇಟ, ಕಲಾವತಿ ಗೌಡರ, ಚೆನ್ನಮಲ್ಲಯ್ಯ ಹಿರೇಮಠ.
ಜಿಲ್ಲಾ ಪಂಚಾಯ್ತಿ ವತಿಯಿಂದ ನೀಡಲಾದ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತರು:
ಎಸ್.ಎಸ್.ಬನಸಿ, ಚಂದ್ರಶೇಖರ ಶೀಗಿಹಳ್ಳಿ, ವಹೀದಾ ಜಮಾದಾರ, ಗುರುಸಿದ್ದಪ್ಪ ತಳವಾರ, ರುಕ್ಮಿಣಿ ಹೂಗಾರ, ಶಕೀಲಾಬೇಗಂ ರಾಜಗೋಳಕರ, ಶುಭಾಂಗಿ ಪಾಟೀಲ, ಸಂಜೀವ್ ಕೋಷ್ಟಿ, ಝಮೃದಾ ಶೇಖ್, ನಹೀಮಾ ಜಮಾದಾರ, ಸ್ಮಿತಾ ನವರತ್ತೆ, ಶೋಭಾ ಇತಾಪೆ, ಪ್ರಲ್ಹಾದ ದಳವತಿ, ಆನಂದ ಢಗೆ, ಬಿ.ಎಲ್.ಕುಂಬಾರ, ಡಿ.ಎಸ್.ದೇಸಾಯಿ, ಎಂ.ಐ.ತಿಗಡಿ, ಎಂ.ಎಂ.ದೇವಕರಿ, ಎಂ.ಎಸ್.ಬೈಲವಾಡ, ಸಂಧ್ಯಾ ಬೆಚಕೆಕರ, ಬುಡ್ಡೇಸಾಬ್ ಬಾವಾಖಾನ, ಅಶ್ವಿನಿ ಪಾತಾಳಿ, ಸಂಗೀತಾ ಹೊಸೂರ, ನಾಗಪ್ಪ ಮುದಕಟ್ಟಿ, ಮಹಾಂತೇಶ ಕಿತ್ತಲಿ, ವಿನಾಯಕ ಶೆಟ್ಟಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.