ಮಂಗಳವಾರ, ಸೆಪ್ಟೆಂಬರ್ 17, 2019
27 °C
ಅಥಣಿ: ಶಿಕ್ಷಕರ ದಿನಾಚರಣೆಯಲ್ಲಿ ಸ್ವಾಮೀಜಿ ಸಲಹೆ

‘ಸಮಾಜದ ಸ್ವಾಸ್ಥ್ಯ ಹಾಳಾಗದಂತೆ ನೋಡಿಕೊಳ್ಳಿ’

Published:
Updated:
Prajavani

ಅಥಣಿ: ‘ಗುರುವಿನ ಸ್ಥಾನದಲ್ಲಿರುವವರು ಸಮಾಜದ ಸ್ವಾಸ್ಥ್ಯ ಹಾಳಾಗದಂತೆ ನೋಡಿಕೊಳ್ಳಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು’ ಎಂದು ಗಚ್ಚಿನಮಠದ ಶಿವಬಸಬವ ಸ್ವಾಮೀಜಿ ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಪಂಚಾಯ್ತಿ, ಅಥಣಿ ಬಿಇಒ ಕಚೇರಿ ವತಿಯಿಂದ ಇಲ್ಲಿನ ಸುಕ್ಷೇತ್ರ ಗಚ್ಚಿನಮಠದಲ್ಲಿ ಗುರುವಾರ ನಡೆದ ತಾಲ್ಲೂಕುಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ವ್ಯಕ್ತಿ ಶಕ್ತಿಯಾಗಿ ಬೆಳೆಯಬೇಕಾದರೆ ಗುರುವಿನ ಮಾರ್ಗದರ್ಶನ ಅವಶ್ಯ. ಮಕ್ಕಳ ಮನಸ್ಸು ಖಾಲಿ ಕಾಗದದಂತೆ. ಆ ಕಾಗದದಲ್ಲಿ ಶಿಕ್ಷಕರು ಉತ್ತಮ ಭವಿಷ್ಯವನ್ನು ಬರೆಯಬೇಕು. ದೇಶದ ಭವಿಷ್ಯ ಕೂಡ ಶಿಕ್ಷಕರ ಮೇಲೆ ನಿಂತಿದೆ. ಶ್ರೇಷ್ಠ ಭಾರತ ಕಟ್ಟುವ ಪ್ರಜೆಗಳನ್ನು ರೂಪಿಸಬೇಕಾಗಿದೆ. ಇಡೀ ಸಮಾಜಕ್ಕೆ ಶಿಕ್ಷಣ ನೀಡುವ ಗುರುಗಳಾದಾಗ ಶಿಕ್ಷಕರ ಬದುಕು ಸಾರ್ಥಕವಾಗುತ್ತದೆ’ ಎಂದರು.

ಉಪನ್ಯಾಸ ನೀಡಿದ ವಿಜಯಪುರದ ವಿಶ್ರಾಂತ ಪ್ರಾಚಾರ್ಯ ಜಿ.ಆರ್. ಕುಲಕರ್ಣಿ ಮಾತನಾಡಿ, ‘ಶ್ರೇಷ್ಠ ಶಿಕ್ಷಣ ತಜ್ಞ ಡಾ.ಸರ್ವಪಲ್ಲಿ ರಾಧಾಕೃಷ್ಣನ್‌ ಅವರ ಚಿಂತನೆಗಳನ್ನು ಶಿಕ್ಷಕರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆಗ ಮಾತ್ರ ಅವರ ಜನ್ಮ ದಿನಾಚರಣೆ ಆಯೋಜಿಸಿದ್ದಕ್ಕೆ ಅರ್ಥ ಬರುತ್ತದೆ. ಶಿಕ್ಷಕರು ಸಂಬಳಕ್ಕಾಗಿ ಪಾಠ ಮಾಡದೇ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಶ್ರಮಿಸಿದರೆ ಶಿಕ್ಷಕ ವೃತ್ತಿ ಸಾರ್ಥಕವಾಗುತ್ತದೆ’ ಎಂದು ತಿಳಿಸಿದರು.

ನಿವೃತ್ತ ಶಿಕ್ಷಕರು, ನಲಿ-ಕಲಿ ವಿಭಾಗದ ಆದರ್ಶ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್‌ ಎಂ.ಎನ್. ಬಳಿಗಾರ ಮಾತನಾಡಿದರು. ಜಿಲ್ಲಾ ಪಂಚಾಯ್ತಿ ಸದಸ್ಯ ಗುರಪ್ಪ ದಾಶ್ಯಾಳ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಸವಿತಾ ನಾಯಿಕ, ನೌಕರರ ಸಂಘದ ಅಧ್ಯಕ್ಷ ರಾಮಣ್ಣ ಧರಿಗೌಡರ, ದೈಹಿಕ ಶಿಕ್ಷಣಾಧಿಕಾರಿ ಅರ್ಜುನ ಬಡಿಗೇರ, ಅಕ್ಷರ ದಾಸೋಹ ಯೋಜನೆ ನಿರ್ದೇಶಕ ಆರ್.ಎಂ. ಮುಲ್ತಾನಿ, ಶಿಕ್ಷಕ ಸಂಘಗಳ ಪದಾಧಿಕಾರಿಗಳಾದ ಪಿ.ಎಚ್. ಪತ್ತಾರ, ಶ್ರೀಶೈಲ ಗಸ್ತಿ, ಎಸ್.ಬಿ. ದೊಡಮನಿ, ಎಸ್.ಎ. ಜಂಬಗಿ, ಸಿ.ಎಂ. ಕಾಂಬಳೆ, ಜೆ.ಜಿ. ಕಾಂಬಳೆ, ಎ.ಬಿ. ಕುಟಕೋಳಿ, ಎಲ್.ಡಿ. ಇದ್ದರು.

ಬಿಇಒ ಸಿ.ಎಂ. ನೇಮಗೌಡ ಸ್ವಾತಿಸಿದರು. ಶಿವಾನಂದ ಮೇಲ್ಗಡೆ ಮತ್ತು ಎಸ್.ಎಸ್. ಹಚಡದ ನಿರೂಪಿಸಿದರು. ಎ.ವೈ. ಹೈಬತ್ತಿ ವಂದಿಸಿದರು.

Post Comments (+)