ತೆಲಸಂಗ (ಬೆಳಗಾವಿ ಜಿಲ್ಲೆ): ‘ಚಳಿ, ಗಾಳಿ, ಮಳೆ, ಕೋವಿಡ್ ಲೆಕ್ಕಿಸದೆ ಮನೆ ಮನೆಗೆ ಪತ್ರಿಕೆಗಳನ್ನು ತಲುಪಿಸುವ ಶ್ರಮಜೀವಿಗಳಾದ ಪತ್ರಿಕಾ ವಿತರಕರಿಗೆ ಎಷ್ಟು ಸಲಾಂ ಹೇಳಿದರೂ ಕಡಿಮೆಯೇ’ ಎಂದು ಕಲಾ ಸಂಘದ ಅಧ್ಯಕ್ಷ ಡಾ.ಬಿ.ಎಸ್. ಕಾಮನ್ ತಿಳಿಸಿದರು.
ಗ್ರಾಮದಲ್ಲಿ ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಕಲಾ ಸಂಘದ ವತಿಯಿಂದ ವಿಶ್ವ ಪತ್ರಿಕಾ ವಿತರಕರ ದಿನದ ನಿಮಿತ್ತ ಪತ್ರಿಕಾ ವಿತರಕರಾದ ದಯಾನಂದ ದೇಸಂಗಿ ಮತ್ತು ಪವನ ಶಿಂಧೆ ಅವರನ್ನು ಶನಿವಾರ ಸತ್ಕರಿಸಿ ಅವರು ಮಾತನಾಡಿದರು.
‘ಅದೆಷ್ಟೋ ಬಡ ಯುವಕರು ಪತ್ರಿಕೆಗಳನ್ನು ವಿತರಿಸಿ ತಮ್ಮ ವಿದ್ಯಾಭ್ಯಾಸ ಮುಗಿಸಿರುವ ಉದಾಹರಣೆ ಬಹಳಷ್ಟಿವೆ. 15 ವರ್ಷಗಳಿಂದ ಬೆಳಿಗ್ಗೆ ಪತ್ರಿಕೆ ವಿತರಿಸಿ ನಂತರ ಇನ್ನೊಂದು ಕೆಲಸದಲ್ಲಿ ತೊಡಗುವ ದಯಾನಂದ ನಿರುದ್ಯೋಗಿ ಯುವಕರಿಗೆ ಮಾದರಿ ಆಗಿದ್ದಾರೆ. ಇಡಿ ದೇಶವೇ ಲಾಕ್‍ಡೌನ್ ಆಗಿದ್ದರೂ ಮನೆ ಮನೆಗೆ ಪತ್ರಿಕೆ ತಲುಪಿಸಿದ ಹೃದಯವಂತರಿವರು’ ಎಂದರು.
ಜಾನಪದ ಸಾಹಿತಿ ಮಹ್ಮದ ಮುಲ್ಲಾ ಮಾತನಾಡಿ, ‘ಪತ್ರಿಕಾ ವಿತರಿಕರಿಗೆ ಸರ್ಕಾರ ಮಾಸಾಶನ ನೀಡಿ ಈ ಉದ್ಯಮವನ್ನು ಉತ್ತೇಜಿಸಬೇಕು’ ಎಂದು ಹೇಳಿದರು.
ನಿವೃತ್ತ ಸೈನಿಕ ಮಹಾದೇವ ಬಾಣಿ, ಗ್ರಾ.ಪಂ. ಸದಸ್ಯ ರಾಮು ನಿಡೋಣಿ, ಸರ್ವೋದಯ ಸಹಕಾರಿ ಸಂಘದ ಅಧ್ಯಕ್ಷ ಸುರೇಶ ಖೊಳಂಬಿ, ಗಾಯಕ ರಾಜು ಹೊನಕಾಂಬಳೆ, ಗಣೇಶ ಪಟ್ಟಣ, ಸುರೇಶ ಹಡಪದ ಉಪಸ್ಥಿತರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.