ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾನಾಪುರದ ಯುವಕನ ಕೊಲೆ ಕೇಸ್: ಯುವತಿಯ ತಂದೆ, ತಾಯಿ ಸೇರಿ 10 ಮಂದಿ ಬಂಧನ

Last Updated 8 ಅಕ್ಟೋಬರ್ 2021, 15:57 IST
ಅಕ್ಷರ ಗಾತ್ರ

ಬೆಳಗಾವಿ: ಖಾನಾಪುರದ ಅರ್ಬಾಜ್ ಮುಲ್ಲಾ (24) ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಆ ಯುವಕ ಪ್ರೀತಿಸುತ್ತಿದ್ದ ಹಿಂದೂ ಯುವತಿಯ ತಂದೆ–ತಾಯಿ ಸೇರಿದಂತೆ 10 ಮಂದಿ ಆರೋಪಿಗಳನ್ನು ಶುಕ್ರವಾರ ಬಂಧಿಸಿದ್ದಾರೆ.

ಯುವತಿಯ ತಂದೆ ಖಾನಾಪುರದ ಮಾರುತಿನಗರದ ಈರಪ್ಪ ಕುಂಬಾರ ಮತ್ತು ತಾಯಿ ಸುಶೀಲಾ ಕುಂಬಾರ, ‘ಶ್ರೀರಾಮ ಸೇನಾ ಹಿಂದೂಸ್ತಾನ’ ಸಂಘಟನೆ ಖಾನಾಪುರ ತಾಲ್ಲೂಕು ಘಟಕದ ಪುಂಡಲೀಕ ಅಲಿಯಾಸ್ ಮಹಾರಾಜ ಮುತಗೇಕರ, ಕುತುಬುದ್ದೀನ್ ಬೇಪಾರಿ, ಮಾರುತಿ ಸುಗತೆ, ಮಂಜುನಾಥ ಗೊಂಧಳಿ, ಗಣಪತಿ ಸುಗತೆ, ಪ್ರಶಾಂತ ಪಾಟೀಲ, ಪ್ರವೀಣ ಪೂಜಾರಿ ಅಲಿಯಾಸ್ ಬಿರ್ಜೆ ಮತ್ತು ಶ್ರೀಧರ ಡೋಣಿ ಬಂಧಿತರು. ಇವರೆಲ್ಲರೂ ಖಾನಾಪುರದವರು. ಘಟನೆ ನಡೆದು 11 ದಿನಗಳ ನಂತರ ಆರೋಪಿಗಳ ಬಂಧನವಾಗಿದೆ.

ಯುವಕನ ಶವ ಖಾನಾಪುರ ಹೊರವಲಯದ ರೈಲು ಹಳಿಯಲ್ಲಿ ಸೆ. 28ರಂದು ಪತ್ತೆಯಾಗಿತ್ತು. ರುಂಡ, ಮುಂಡ ಕತ್ತರಿಸಿ ಬಿಸಾಡಲಾಗಿತ್ತು. ಅವರ ತಾಯಿ, ಉರ್ದು ಸರ್ಕಾರಿ ಶಾಲೆಯ ಶಿಕ್ಷಕಿ ನಾಜಿಮಾ ಶೇಖ್ ನೀಡಿದ ದೂರಿನ ಮೇರೆಗೆ ಸೆ. 29ರಂದು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಯುವತಿಯ ತಂದೆ, ತಾಯಿ, ಪುಂಡಲೀಕ ಹಾಗೂ ಬಿರ್ಜೆ ಕೊಲೆ ಮಾಡಿದ್ದಾರೆ ದೂರು ನೀಡಿದ್ದರು. ತನಿಖೆ ಆರಂಭಿಸಿದ್ದ ಅವರು, 8 ಮಂದಿಯನ್ನು ವಶಕ್ಕೆ ಪಡೆದಿದ್ದರು. 2 ವಾಹನಗಳನ್ನು ಜಪ್ತಿ ಮಾಡಿದ್ದರು. ಪ್ರಕರಣವನ್ನು ಅ.4ರಂದು ಜಿಲ್ಲಾ ಪೊಲೀಸರಿಗೆ ವರ್ಗಾಯಿಸಲಾಗಿತ್ತು. ಎಸ್ಪಿ ಲಕ್ಷ್ಮಣ ನಿಂಬರಗಿ ಮಾರ್ಗದರ್ಶನದಲ್ಲಿ, ಬೈಲಹೊಂಗಲ ಡಿವೈಎಸ್ಪಿ ಶಿವಾನಂದ ಕಟಗಿ ನೇತೃತ್ವದ ತಂಡ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.

‘ಪ್ರಮುಖ ಆರೋಪಿ ಪುಂಡಲೀಕನನ್ನು ವಿಚಾರಣೆಗೆ ಒಳಪಡಿಸಿದಾಗ ಪ್ರಕರಣ ಬಯಲಾಗಿದೆ’ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದರು.

ಪ್ರಕರಣದಲ್ಲಿ ಇನ್ನೂ ಕೆಲವರು ಭಾಗಿಯಾಗಿರುವ ಶಂಕೆ ಇದ್ದು, ಅವರನ್ನು ಬಂಧಿಸಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಪ್ರೀತಿ ವಿಷಯ ತಿಳಿದಾಗ..
‘ಒಂದೇ ಗಲ್ಲಿಯಲ್ಲಿದ್ದ ಯುವಕ–ಯುವತಿ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ವಿಷಯ ತಿಳಿದ ಯುವತಿಯ ಪೋಷಕರು ಅರ್ಬಾಜ್‌ಗೆ ಎಚ್ಚರಿಕೆ ನೀಡಿದ್ದರು. ಪುಂಡಲೀಕ ಹಾಗೂ ಸಹಚರರ ಮೂಲಕ ತೊಂದರೆ ಕೊಡಿಸುತ್ತಿದ್ದರು. ಹೀಗಾಗಿ, 2 ತಿಂಗಳ ಹಿಂದೆ ಅರ್ಬಾಜ್‌ ಮತ್ತು ಅವರ ತಾಯಿ ಬೆಳಗಾವಿಗೆ ಸ್ಥಳಾಂತರಗೊಂಡಿದ್ದರು. ಈ ನಡುವೆಯೂ ಪ್ರೀತಿ ಮುಂದುವರಿದಿದ್ದು ತಿಳಿದಿದ್ದರಿಂದ ಯುವತಿಯ ತಂದೆ–ತಾಯಿ ಅರ್ಬಾಜ್‌ ಕೊಲೆಗೆ ಸುಪಾರಿ ಕೊಟ್ಟಿದ್ದರು. ಏನೇ ಆದರೂ ನಾವು ಮುಂದಿರುತ್ತೇವೆ ಎಂದಿದ್ದರು’ ಎನ್ನುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

‘ಎರಡು ಕುಟುಂಬಗಳ ನಡುವಿನ ವಿಷಯವನ್ನು ಸ್ವಾರ್ಥಕ್ಕೆ ಬಳಸಿಕೊಳ್ಳಲು ಸಂಘಟನೆಯ ಮುಖಂಡರು ಯತ್ನಿಸಿದ್ದಾರೆ. ಯುವತಿಯ ತಾಯಿ–ತಂದೆಗೆ ಉಪಾಯಗಳನ್ನು ಕೊಟ್ಟಿದ್ದರು. ಸೆ.26ರಂದು ಮಾತುಕತೆ ನೆಪದಲ್ಲಿ ಅರ್ಬಾಜ್‌ ಹಾಗೂ ಅವರ ತಾಯಿಯನ್ನು ಕರೆಸಿಕೊಂಡಿದ್ದರು. ಬೆದರಿಕೆಯನ್ನೂ ಹಾಕಿದ್ದರು. ಆತನ ಮೊಬೈಲ್‌ನಲ್ಲಿದ್ದ ಫೋಟೊ, ವಿಡಿಯೊಗಳನ್ನು ಡಿಲೀಟ್ ಮಾಡಿದ್ದರು. ಸಿಮ್ ಕಾರ್ಡ್ ನಾಶಪಡಿಸಿದ್ದರು. ಯುವತಿಯ ತಂದೆ–ತಾಯಿಯು ಯುವಕನನ್ನು ಅಂದು ಕರೆಸಿಕೊಂಡಿದ್ದು ರಾಜಿ–ಸಂಧಾನಕ್ಕೆ ಅಲ್ಲ, ‘ಮುಗಿಸಬೇಕಾದವನು ಇವನೇ’ ಎಂದು ತೋರಿಸಲು ಎನ್ನುವ ಸಂಗತಿ ತನಿಖೆಯಿಂದ ಹೊರಬಿದ್ದಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಸೆ.28ರಂದು ಅರ್ಬಾಜ್ ಕರೆಸಿಕೊಂಡಿದ್ದ ಆರೋಪಿಗಳು, ಅವರಿಂದ ಹಣ ಪಡೆದು ಕೊಲೆ ಮಾಡಿದ್ದಾರೆ. ಸಾಕ್ಷಿ ನಾಶಪಡಿಸುವ ಉದ್ದೇಶದಿಂದ ರುಂಡ ಒಂದೆಡೆ, ಮುಂಡ ಇನ್ನೊಂದೆಡೆ ಎಸೆದಿದ್ದರು ಎನ್ನುವುದು ತನಿಖೆಯಿಂದ ತಿಳಿದುಬಂದಿದೆ’ ಎಂಬ ಮಾಹಿತಿ ದೊರೆತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT