ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: 8 ವರ್ಷಗಳಿಂದ ಡಯಟ್‌ನಲ್ಲಿ ಶೂನ್ಯ ಪ್ರವೇಶಾತಿ

ಬಿ.ಇಡಿ.ಗೆ ಹೆಚ್ಚಿದ ಆಸಕ್ತು, ಜಿಲ್ಲೆಯ 75 ಡಿ.ಇಡಿ ಕಾಲೇಜುಗಳಿಗೆ ಬೀಗ, ಉಳಿದಿರುವುದು ಏಳು ಮಾತ್ರ
Last Updated 5 ಜುಲೈ 2022, 3:52 IST
ಅಕ್ಷರ ಗಾತ್ರ

ಬೆಳಗಾವಿ: ತಾಲ್ಲೂಕಿನ ಮಣ್ಣೂರಿನಲ್ಲಿರುವ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ (ಡಯಟ್‌) ಕಳೆದ ಎಂಟು ವರ್ಷಗಳಿಂದ ಡಿ.ಇಡಿ ಕೋರ್ಸ್‌ಗೆ ಒಬ್ಬರೂ ಪ್ರವೇಶ ಪಡೆದಿಲ್ಲ. 2022–23ನೇ ಸಾಲಿನ ಪ್ರವೇಶ ಪ್ರಕ್ರಿಯೆ ಆರಂಭವಾಗಲಿದ್ದು, ಈ ಬಾರಿಯೂ ‍ಪ್ರಶಿಕ್ಷಣಾರ್ಥಿಗಳು ಪ್ರವೇಶ ಪಡೆಯುವುದು ಅನುಮಾನ.

1994–95ರಲ್ಲಿ ಮಣ್ಣೂರಿನಲ್ಲಿ ಡಯಟ್‌ ತಲೆಎತ್ತಿದೆ. ನಿಯಮಿತವಾಗಿ ಪ‍್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ನಡೆದಿದ್ದರಿಂದ ಇದಕ್ಕೆ ಹೆಚ್ಚಿನ ಬೇಡಿಕೆ ಬಂದಿತ್ತು. 2011–12ನೇ ಸಾಲಿನವರೆಗೂ ಇಲ್ಲಿ ಪ್ರವೇಶ ಗಿಟ್ಟಿಸಿಕೊಳ್ಳಲು ಹರಸಾಹಸ ಮಾಡಬೇಕಾಗಿತ್ತು. ವಿವಿಧ ‘ಪ್ರಭಾವ’ ಬಳಸುವುದೂ ಅನಿವಾರ್ಯವಾಗಿತ್ತು. ಪ್ರತಿವರ್ಷ 50 ಮಂದಿಗೆ ಪ್ರವೇಶ ಪಡೆಯುತ್ತಿದ್ದರು. ಆದರೆ, 2014–15ನೇ ಸಾಲಿನಿಂದ ಇಲ್ಲಿ ಶೂನ್ಯ ದಾಖಲಾತಿಯಿದೆ.

ಬೇಡಿಕೆ ಕುಸಿತಕ್ಕೆ ಕಾರಣ?: ‘ಇತ್ತೀಚಿನ ವರ್ಷಗಳಲ್ಲಿ ಪ್ರಾಥಮಿಕ ಶಾಲೆಗಳ ಶಿಕ್ಷಕರ ನೇಮಕಾತಿಯೇ ಕಡಿಮೆ ಆಗಿದೆ. ಈಗ ಸರ್ಕಾರ 15 ಸಾವಿರ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಇದಕ್ಕೆ ಡಿ.ಇಡಿ ಜೊತೆಗೆ ಪದವಿಯನ್ನೂ ಕಡ್ಡಾಯಗೊಳಿಸಿದೆ. ಹಾಗಾಗಿ ಅಭ್ಯರ್ಥಿಗಳು ಪದವಿ, ಬಿ.ಇಡಿ ವ್ಯಾಸಂಗಕ್ಕೆ ಆಸಕ್ತಿ ತಳೆಯುತ್ತಿದ್ದಾರೆ. ಹೀಗಾಗಿ, ಡಿ.ಇಡಿ ಮಾಡುವವರು ಕಡಿಮೆ’ ಎನ್ನುತ್ತಾರೆ ಡಯಟ್ ಪ್ರಾಚಾರ್ಯ ಎಂ.ಎಂ. ಸಿಂಧೂರ.

ಬೆಳಗಾವಿ ಮಾತ್ರವಲ್ಲ, ಬಹುಪಾಲು ಜಿಲ್ಲೆಗಳಲ್ಲಿ ಡಯಟ್‌ಗಳದ್ದೂ ಇದೇ ಪರಿಸ್ಥಿತಿ. ರಾಜ್ಯದಲ್ಲಿ 34 ಡಯಟ್‌ಗಳಿದ್ದು, ಈ ಪೈಕಿ 20 ಡಯಟ್‌ಗಳಲ್ಲಿ ಒಬ್ಬರೂ ಪ್ರವೇಶ ಪಡೆದಿಲ್ಲ. 14 ಡಯಟ್‌ಗಳಲ್ಲಿ ಇರುವುದು ಕೆಲವೇ ಕೆಲವು ವಿದ್ಯಾರ್ಥಿಗಳು.

ಶೈಕ್ಷಣಿಕ ಅಭಿವೃದ್ಧಿ ಕೆಲಸಕ್ಕೆ ಬಳಕೆ: ‘ಡಯಟ್‌ನಲ್ಲಿ 12 ಸಿಬ್ಬಂದಿ ಇದ್ದಾರೆ. ಆದರೆ, ಡಿ.ಇಡಿ ವಿಭಾಗದಲ್ಲಿ ವಿದ್ಯಾರ್ಥಿಗಳಿಲ್ಲದ ಕಾರಣ, ಜಿಲ್ಲೆಯ ವಿವಿಧ ಶಾಲೆಗಳಿಗೆ ಸಿಬ್ಬಂದಿ ಭೇಟಿ ನೀಡಿ, ಶೈಕ್ಷಣಿಕ ಗುಣಮಟ್ಟ ಪರಿಶೀಲಿಸುತ್ತಿದ್ದಾರೆ.

ಜಿಲ್ಲೆಯ ವಿವಿಧ ಶಾಲೆಗಳ ಶಿಕ್ಷಕರಿಗೆ ವಿಷಯವಾರು ತರಬೇತಿ ನೀಡುವ ಜೊತೆಗೆ, ಹಲವು ಪರೀಕ್ಷೆಗಳನ್ನು ಸಂಘಟಿಸುತ್ತಿದ್ದಾರೆ. ಮಕ್ಕಳ ಕಲಿಕಾ ಕೊರತೆಗಳ ಕುರಿತು ಕ್ರಿಯಾ ಸಂಶೋಧನೆ ಕೈಗೊಳ್ಳುತ್ತಿದ್ದಾರೆ. ವಿವಿಧ ಶೈಕ್ಷಣಿಕ ಅಭಿವೃದ್ಧಿ ಕೆಲಸಕ್ಕೆ ಅವರನ್ನು ಬಳಸಿಕೊಳ್ಳಲಾಗುತ್ತಿದೆ ಎಂಬುದುಉ ಪ್ರಾಚಾರ್ಯರ ಹೇಳಿಕೆ.

ಇಲ್ಲಿ ಗಣಿತ ಪ್ರಯೋಗಾಲಯ, ವಿಜ್ಞಾನ ಪ್ರಯೋಗಾಲಯ, ಸಾಹಿತ್ಯ ಕೊಠಡಿ, ನಲಿ–ಕಲಿ ಚಟುವಟಿಕೆ ಕೊಠಡಿ, ಗ್ರಂಥಾಲಯ, ಕಂಪ್ಯೂಟರ್‌ ಲ್ಯಾಬ್‌ಗಳಿವೆ. ಇನ್ನೂ ನಾಲ್ಕು ಕೊಠಡಿಗಳ ಅಗತ್ಯವಿದೆ. ಅವು ನಿರ್ಮಾಣವಾದರೆ ಸಮಾಜವಿಜ್ಞಾನ ಪ್ರಯೋಗಾಲಯ ಸ್ಥಾಪನೆ ಮತ್ತಿತರ ಚಟುವಟಿಕೆ ಕೈಗೊಳ್ಳಲಾಗುವುದು ಎನ್ನುತ್ತಾರೆ ಅವರು.

75 ಡಿಇಡಿ ಕಾಲೇಜುಗಳಿಗೆ ಬೀಗ
ದಶಕದ ಹಿಂದೆ ಬೆಳಗಾವಿ ಜಿಲ್ಲೆಯಲ್ಲಿ 82 ಡಿ.ಇಡಿ ಕಾಲೇಜುಗಳಿದ್ದವು. ಆದರೆ, ಪ್ರಶಿಕ್ಷಣಾರ್ಥಿಗಳ ಅಭಾವದಿಂದ ಇತ್ತೀಚಿನ ವರ್ಷಗಳಲ್ಲಿ 75 ಕಾಲೇಜುಗಳಿಗೆ ಬೀಗ ಜಡಿಯಲಾಗಿದೆ. ಸದ್ಯ ಬೆಳಗಾವಿಯಲ್ಲಿ 5, ರಾಮದುರ್ಗ ಹಾಗೂ ಸವದತ್ತಿ ತಾಲ್ಲೂಕಿನ ಇಂಚಲದಲ್ಲಿ ತಲಾ ಒಂದು ಕಾಲೇಜು ಇದೆ. ಈ ಪೈಕಿ 5 ಅನುದಾನಿತ, 2 ಅನುದಾನರಹಿತ ಕಾಲೇಜುಗಳಿದ್ದು, ಅಲ್ಲಿಯೂ ಕೆಲ ವಿದ್ಯಾರ್ಥಿಗಳಷ್ಟೇ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT