ಮಂಗಳವಾರ, ಜೂನ್ 28, 2022
28 °C

ಸೌಲಭ್ಯ ವಂಚಿತ ಡಿ. ಹೊಸೂರು; ಅಧಿಕಾರಿಗಳು ನೆರವಾಗಲು ಗ್ರಾಮಸ್ಥರ ಆಗ್ರಹ

ಚನ್ನಪ್ಪ ಮಾದರ Updated:

ಅಕ್ಷರ ಗಾತ್ರ : | |

Prajavani

ರಾಮದುರ್ಗ: ನಗರಗಳು, ಪಟ್ಟಣಗಳು ಬದಲಾವಣೆ ಮತ್ತು ಸುಧಾರಣೆ ಕಾಣುತ್ತಿವೆ. ಆದರೆ, ಕಡಿಮೆ ಜನಸಂಖ್ಯೆ ಹೊಂದಿರುವ ಗ್ರಾಮಗಳಲ್ಲಿ ಶಾಲೆಗಳಿಲ್ಲ. ರಸ್ತೆಗಳಿಲ್ಲ. ಸಾರಿಗೆ ಬಸ್‌ಸೌಕರ್ಯವೂ ಇಲ್ಲ. ಕುಡಿಯುವ ನೀರು, ರಸ್ತೆ ದೀಪ, ಆಸ್ಪತ್ರೆಗಳಿಲ್ಲದೇ ಪರದಾಡುತ್ತಿದ್ದಾರೆ. ಅದಕ್ಕೊಂದು ಉತ್ತಮ ನಿದರ್ಶನ ತಾಲ್ಲೂಕಿನ ಡಿ. ಹೊಸೂರು ಗ್ರಾಮ.

ಗೊಣ್ಣಾಗರ ಗ್ರಾಮ ಪಂಚಾಯ್ತಿಗೆ ಒಳಪಡುವ ಈ ಹಳ್ಳಿಯಲ್ಲಿ 200 ಜನ ವಾಸಿಸುತ್ತಿದ್ದಾರೆ. 20 ವಿದ್ಯಾರ್ಥಿಗಳಿದ್ದಾರೆ. ಅವರು ಶಾಲೆಗೆ ಹೋಗಬೇಕೆಂದರೆ ಪಕ್ಕದ ಕೊಳಚಿ, ಘಟನೂರು ಇಲ್ಲವೇ ಹುಲಿಗೊಪ್ಪದ ಶಾಲೆಗಳಿಗೆ ಸುಮಾರು 4 ಕಿ.ಮೀ. ನಡೆದುಕೊಂಡೇ ಹೋಗಬೇಕು. ಏಕೆಂದರೆ ಇಲ್ಲಿ ಸಾರಿಗೆ ಬಸ್‌ ಇಲ್ಲವೇ ಖಾಸಗಿ ವಾಹನದ ವ್ಯವಸ್ಥೆಯೇ ಇಲ್ಲ.

ಮಲಪ್ರಭಾ ನದಿ ಪ್ರವಾಹ ಮತ್ತು ಗದ್ದೆಗಳು ಸಮೀಪ ಇರುವುದನ್ನು ನೆಚ್ಚಿಕೊಂಡಿದ್ದ ಜನ ಒಟ್ಟಾಗಿ ಸೇರಿ ಒಂದು ಗ್ರಾಮ ನಿರ್ಮಿಸಿಕೊಂಡು ಮನೆ ಕಟ್ಟಿಕೊಂಡು ವಾಸಕ್ಕೆ ಮುಂದಾಗಿದ್ದಾರೆ. ತೋಟದ ರಸ್ತೆಯೇ ಇವರಿಗೆ ಸಂಚಾರಕ್ಕೆ ಅನುಕೂಲವಾಗಿದೆ. ಇಲ್ಲಿಗೆ ವಲಸೆ ಬಂದಿರುವ ಬಹುತೇಕರು ಹುಲಿಗೊಪ್ಪ ಮತ್ತು ಕೊಳಚಿ ಗ್ರಾಮದವರು. ಗ್ರಾಮದಲ್ಲಿ ಜನರು ಮತ್ತು ಜಾನುವಾರುಗೆ ಆಸ್ಪತ್ರೆ ಇಲ್ಲ. ಹೆರಿಗೆ ನೋವು ಕಾಣಿಸಿಕೊಂಡರೆ ಅವರಿರನ್ನು ದುಂಬಾಲು ಬಿದ್ದು ಹತ್ತಿರದ ಆಸ್ಪತ್ರೆಗೆ ಸಾಗಿಸುವುದು ಅನಿವಾರ್ಯವಾಗಿದೆ.

ಘಟಕನೂರು ಮತ್ತು ಗೊಣ್ಣಾಗರ ಗ್ರಾಮ ಪಂಚಾಯ್ತಿಯ ಮಧ್ಯದಲ್ಲಿರುವ ಡಿ. ಹೊಸೂರು ಗ್ರಾಮದಲ್ಲಿ ಮೂಲ ಸೌಲಭ್ಯಗಳು ಮರೀಚಿಕೆಯಾಗಿವೆ. ಕುಡಿಯುವ ನೀರು, ರಸ್ತೆ, ಬೀದಿ ದೀಪ ಹೊಂದಲು ಇಲ್ಲಿಂದಲೇ ಗೆದ್ದಿರುವ ಗ್ರಾಮ ಪಂಚಾಯ್ತಿ ಸದಸ್ಯ ಯಲ್ಲಪ್ಪಗೌಡರ ಪ್ರಯತ್ನ ವಿಫಲವಾಗಿದೆ. ಅಲ್ಲಿನವರ ಅನುಕೂಲಕ್ಕೆ ಸೌಲಭ್ಯ ತಂದುಕೊಡಲು ಅವರು ನಿರಂತರವಾಗಿ ಯತ್ನಿಸುತ್ತಿದ್ದಾರೆ.

ಸರ್ಕಾರದ ಯೋಜನೆಗಳಾದ ಆಸರೆ ಮನೆ, ಶೌಚಾಲಯ ನಿರ್ಮಾಣಕ್ಕೆ ಪಂಚಾಯ್ತಿ ಅಧಿಕಾರಿಗಳು ಇತ್ತ ಇಣುಕಿಯೂ ನೋಡುತ್ತಿಲ್ಲ. ಗ್ರಾಮ ಮಟ್ಟದ ನಾಯಕರನ್ನು ದುಂಬಾಲು ಬಿದ್ದು ಅಷ್ಟಿಷ್ಟು ಸೌಲಭ್ಯಗಳನ್ನು ಪಡೆದುಕೊಂಡು ಜೀವನ ನಡೆಸುತ್ತಿದ್ದಾರೆ.

ಪ್ರತಿ ಕಿ.ಮೀ.ಗೊಂದರಂತೆ ಸರ್ಕಾರಿ ಶಾಲೆಗಳನ್ನು ತೆರೆಯಬೇಕು ಎಂದು ಸರ್ಕಾರದ ನಿಯಮ ಇದ್ದರೂ ಇಲ್ಲಿ ಶಾಲೆ ಮಾತ್ರ ಗಗನ ಕುಸುಮವಾಗಿ ಪರಿಣಮಿಸಿದೆ. ಈಗಿರುವ ಒಂದು ಅಂಗನವಾಡಿ ತುಂಬಿ ತುಳುಕುತ್ತಿದೆ. ಇನ್ನೊಂದು ಅಂಗನವಾಡಿ ನಿರ್ಮಿಸಬೇಕು ಎಂದು ಪ್ರಸ್ತಾವ ಸಲ್ಲಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು