ಬೆಳಗಾವಿ: ‘ರಾಜಕೀಯ ಆರಂಭಿಸಿದ ದಿನದಿಂದಲೂ ನಾನು ದ್ವೇಷ ರಾಜಕಾರಣ ಮಾಡಿಲ್ಲ. ಅಭಿವೃದ್ಧಿ ಒಂದೇ ನಮ್ಮ ಮೂಲಮಂತ್ರ. ದ್ವೇಷ ರಾಜಕಾರಣ ನನ್ನ ಶಬ್ದಕೋಶದಲ್ಲೇ ಇಲ್ಲ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.
ತಾಲ್ಲೂಕಿನ ಮೋದಗಾದಲ್ಲಿ ಬುಧವಾರ ಗ್ರಾಮ ಪಂಚಾಯಿತಿ ಕಟ್ಟಡ ಉದ್ಘಾಟನೆ ಹಾಗೂ ರಾಜೀವ ಗಾಂಧಿ ಸೇವಾ ಕೇಂದ್ರ ಮತ್ತು ಸಂಜೀವಿನಿ ಸೇವಾ ಕೇಂದ್ರ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
‘ಭಾರತ ದೇಶ ಹಳ್ಳಿಗಳ ದೇಶ. ಹಳ್ಳಿಗಳು ಸುಧಾರಿಸಿದರೆ ದೇಶ ಸುಧಾರಿಸಿದಂತೆ. ಮಹಾತ್ಮ ಗಾಂಧಿ ಅವರ ಪರಿಕಲ್ಪನೆಯಡಿ ಗ್ರಾಮಗಳ ಅಭಿವೃದ್ದಿಗೆ ಶ್ರಮಿಸುತ್ತಿದ್ದೇನೆ’ ಎಂದರು.
‘ಗ್ರಾಮ ಪಂಚಾಯಿತಿಯಲ್ಲಿ ಮಹಿಳೆಯರೂ ಅಡಳಿತ ನಡೆಸಬೇಕು ಎಂಬ ದೃಷ್ಟಿಯಿಂದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮಹಿಳೆಯರಿಗೆ ಶೇ 33 ಮೀಸಲಾತಿಯನ್ನು ಜಾರಿಗೆ ತಂದರು. ಗ್ರಾಮ ಸುಧಾರಣೆಗೆ ಅವರೇ ಅಡಿಪಾಯ ಹಾಕಿದ್ದಾರೆ’ ಎಂದರು.
‘ಅಧಿಕಾರ ಇದ್ದಾಗ ಕೆಲಸ ಮಾಡೋಣ. ಜನರಿಗೆ ಸಹಾಯ ಮಾಡೋಣ. 2018ರಲ್ಲಿ ಶಾಸಕಿಯಾದ ನಂತರ ಉದ್ಯೋಗ ಖಾತ್ರಿ ಯೋಜನೆಯಲ್ಲಿ 180 ಶಾಲೆಗಳಿಗೆ ಕಾಂಪೌಂಡ್ ಹಾಕಿಸಿದ್ದೇನೆ. ಈ ರೀತಿ ಉದ್ಯೋಗ ಖಾತ್ರಿ ಯೋಜನೆಯನ್ನು ಶಾಲೆಗಳ ಕಾಂಪೌಂಡ್‌ಗೆ ಬಳಸಿದ್ದು ರಾಜ್ಯದಲ್ಲೇ ಮೊದಲು. ನಂತರ ನಮ್ಮ ಮಾದರಿ ನೋಡಿ ಬೇರೆ ಕಡೆಯೂ ಆರಂಭಿಸಿದರು’ ಎಂದರು.
‘ಮೋದಗಾದಲ್ಲಿ ಗ್ರಾಮ ಪಂಚಾಯಿತಿ ನೂತನ ಕಟ್ಟಡ ಉದ್ಘಾಟನೆ ಹಾಗೂ ಸೇವಾ ಕೇಂದ್ರಗಳು ಆರಂಭಗೊಂಡಿದ್ದು ಖುಷಿಯ ವಿಚಾರ. ಇದೀಗ ಎಲ್ಲರ ಶ್ರಮದಿಂದ ಈ ಕನಸು ನನಸಾಗಿದೆ’ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಹುಣಶಿಕಟ್ಟಿ ಹೊನ್ನಿಹಾಳ ಹಿರೇಮಠದ ಬಸವರಾಜ ದೇವರು ಹಾಗೂ ಹುಕ್ಕೇರಿ ಕ್ಯಾರಗುಡ್ಡ ಇಂಚಗೇರಿ ಮಠದ ಅಭಿನವ ಮಂಜುನಾಥ ಸ್ವಾಮಿಗಳು ಆಶೀರ್ವಚನ ನೀಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಖಾ ಕಟಬುಗೋಳ, ಉಪಾಧ್ಯಕ್ಷೆ ವಿಜಯಲಕ್ಷ್ಮಿ ರಾ. ತಳವಾರ, ಪಿಡಿಒ ಪ್ರಶಾಂತ ಮುನವಳ್ಳಿ, ಕಾರ್ಯನಿರ್ವಾಹಕ ಅಧಿಕಾರಿ ರಮೇಶ ಹೆಡಗೆ, ಶಂಕರಗೌಡ ಪಾಟೀಲ, ನಾಗೇಶ ದೇಸಾಯಿ, ಬಸವರಾಜ ಮ್ಯಾಗೋಟಿ, ಮಹೇಶ ಸುಗ್ನೆಣ್ಣವರ, ಸುರೇಶ ಕಟಬುಗೋಳ, ಕಾಜೇಸಾಬ್ ಯರಗಟ್ಟಿ, ಮೋದಗಾ ಗ್ರಾಮ ಪಂಚಾಯಿತಿ ಎಲ್ಲ ಸದಸ್ಯರೂ ಇದ್ದರು.
ಮೋದಗಾದಲ್ಲಿ ಸುಸಜ್ಜಿತ ಸಮುದಾಯ ಭವನ ಕೆಲಸ ಆರಂಭವಾಗಿದ್ದು ತುಮ್ಮರಗುದ್ದಿಯಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಆರಂಭಿಸಲಾಗುವುದುಚನ್ನರಾಜ ಹಟ್ಟಿಹೊಳಿ ವಿಧಾನ ಪರಿಷತ್ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.