ಭಾನುವಾರ, ಆಗಸ್ಟ್ 18, 2019
24 °C
ಅಧಿಕಾರಿಗಳಿಗೆ ಸರ್ಕಾರದಿಂದ ಅಧಿಕೃತ ಆದೇಶವೇ ಬಂದಿಲ್ಲ!

ಬಾಲಗ್ರಹಪೀಡಿತವಾದ ‘ಋಣಮುಕ್ತ’ ಕಾಯ್ದೆ

Published:
Updated:

ಬೆಳಗಾವಿ: ಲೇವಾದೇವಿದಾರದಿಂದ ಗ್ರಾಮೀಣ ಭಾಗದ ಬಡ ಜನರನ್ನು ರಕ್ಷಿಸುವುದಕ್ಕಾಗಿ, ಜೆಡಿಎಸ್‌–ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವು ಕೊನೆ ಕ್ಷಣದಲ್ಲಿ ಜಾರಿಗೊಳಿಸಿದ ಋಣ ಪರಿಹಾರ ಕಾಯ್ದೆ–2018 ಕುರಿತು ಕಂದಾಯ ಅಧಿಕಾರಿಗಳಿಗೆ ಅಧಿಕೃತ ಮಾಹಿತಿಯೇ ಬಂದಿಲ್ಲ.

ಕಾಯ್ದೆಯು ಜುಲೈ 23ರಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಲಾಗಿದೆ. ಮುಂದಿನ ಒಂದು ವರ್ಷ ಚಾಲ್ತಿಯಲ್ಲಿರುತ್ತದೆ. ಬಡ್ಡಿಗೆ ಸಾಲ ಪಡೆದು ನೊಂದ ಬಡವರು 90 ದಿನಗಳ ಒಳಗೆ ಹೆಸರು ನೋಂದಾಯಿಸಿಕೊಳ್ಳಬೇಕು. 2019ರ ಜುಲೈ 23ಕ್ಕಿಂತ ಹಿಂದೆ ಸಾಲ ಪಡೆದವರು ಸಂಬಂಧಿಸಿದ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ವಿವರಗಳನ್ನು ಪಡೆದು ಅವರ ಮುಂದೆ ಅರ್ಜಿ ಸಲ್ಲಿಸಿ ಖಾಸಗಿ ಸಾಲದ ಬಗ್ಗೆ ಮಾಹಿತಿ ಒದಗಿಸಬೇಕು. ಖಾಸಗಿ ಸಾಲಕ್ಕೆ ಮಾಡಿರುವ ಅಡಮಾನ ದಾಖಲೆಗಳನ್ನು ಒದಗಿಸಿ, ಯೋಜನೆಯ ಲಾಭ ಪಡೆಯಬಹುದು ಎಂದು ಆಗಿನ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಘೋಷಿಸಿದ್ದರು. ಆದರೆ, ಇದಾಗಿ 11 ದಿನಗಳಾದರೂ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಯೋಜನೆಯ ಕುರಿತು ಯಾವುದೇ ಮಾಹಿತಿ ದೊರೆಯುತ್ತಿಲ್ಲ.

ಯಾವುದೇ ಮಾರ್ಗಸೂಚಿಗಳಾಗಲಿ, ಅಧಿಕೃತ ಆದೇಶವಾಗಲಿ ಅಧಿಕಾರಿಗಳ ಕೈಸೇರಿಲ್ಲ.

ಯಾರ‍್ಯಾರಿಗೆ ಅನುಕೂಲ?:

ಸಣ್ಣ ರೈತರು, ಭೂರಹಿತ ಕಾರ್ಮಿಕರು, ಕಡುಬಡವರು, ವಾರ್ಷಿಕ ₹ 1.20 ಲಕ್ಷಕ್ಕಿಂತ ಕಡಿಮೆ ಆದಾಯ, 2 ಹೆಕ್ಟೇರ್‌ ಪಾಳು ಭೂಮಿ, 25 ಗುಂಟೆ ಮಳೆ ಆಶ್ರಿತ ನೀರಾವರಿ ಸೌಲಭ್ಯ ಹೊಂದಿರುವವರು, 50 ಗುಂಟೆಯಲ್ಲಿ ಒಮ್ಮೆ ನೀರಾವರಿ ಬೆಳೆ ಬೆಳೆಯುವವರಿಗೆ ಅನುಕೂಲ ಆಗುತ್ತದೆ ಎಂದು ಮುಖ್ಯಮಂತ್ರಿ ತಿಳಿಸಿದ್ದರು. ಇದನ್ನು ನಂಬಿ ಫಲಾನುಭವಿಗಳಾಗಲು ಉಪವಿಭಾಗಾಧಿಕಾರಿಗಳ ಕಚೇರಿಗೆ ಬರುತ್ತಿರುವವರು ಬರಿಗೈಲಿ ವಾಪಸಾಗುತ್ತಿದ್ದಾರೆ. ಅಧಿಕಾರಿಗಳ ಬಳಿಯೇ ವಿವರ ಇಲ್ಲದಿರುವುದು ಇದಕ್ಕೆ ಕಾರಣ. ಪರಿಣಾಮ, ಯೋಜನೆಯು ‘ಬಾಲಗ್ರಹ’ಪೀಡಿತವಾಗಿದೆ ಮತ್ತು ಗೊಂದಲವೂ ಉಂಟಾಗಿದೆ.

‘ಬಡ್ಡಿಯ ಸೂಲಕ್ಕೆ ಸಿಕ್ಕಿ ನಲುಗುತ್ತಿರುವ ಅಸಂಖ್ಯಾತ ಶ್ರಮಿಕ ವರ್ಗದವರಿಗೆ ನೆಮ್ಮದಿ ದೊರಕಿಸುವಲ್ಲಿ’ ಈ ಕಾಯ್ದೆಯು ಮಹತ್ವದ್ದಾಗಿದೆ ಎಂದು ಸರ್ಕಾರ ಹೇಳಿತ್ತು. ಇದನ್ನು ಜಾರಿಗೊಳಿಸುವಲ್ಲಿ, ನೂತನ ಬಿಜೆಪಿ ಸರ್ಕಾರ ಕಾಳಜಿ ವಹಿಸುವುದೋ ಇಲ್ಲವೋ ಎನ್ನುವ ಪ್ರಶ್ನೆಯೂ ಮೂಡುತ್ತಿದೆ. ಇದು, ಗೊಂದಲಕ್ಕೆ ಆಸ್ಪದ ಮಾಡಿಕೊಟ್ಟಿದೆ.

ಕಚೇರಿಗೆ ಬರುತ್ತಿದ್ದಾರೆ:

ಸರ್ಕಾರದ ಆದೇಶದ ಪ್ರಕಾರ, ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ 90 ದಿನಗಳಲ್ಲಿ ಉಳಿದಿರುವುದು 80 ದಿನಗಳಷ್ಟೇ. ಜಿಲ್ಲೆಯಲ್ಲಿ 3 ಉಪ ವಿಭಾಗಗಳಿವೆ (ಬೆಳಗಾವಿ, ಚಿಕ್ಕೋಡಿ ಹಾಗೂ ಬೈಲಹೊಂಗಲ). ಕಾಯ್ದೆ ಕುರಿತು ಈ ಕಚೇರಿಗಳಲ್ಲಿ ಮಾಹಿತಿ ಸಿಗುತ್ತಿಲ್ಲ.

ಈ ಬಗ್ಗೆ ಪ್ರತಿಕ್ರಿಯಿಸಿದ ಬೈಲಹೊಂಗಲ ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ, ‘ಋಣ ಮುಕ್ತ ಕಾಯ್ದೆ ಕುರಿತು ಸರ್ಕಾರದಿಂದ ಅಧಿಕೃತ ಮಾಹಿತಿ ಬಂದಿಲ್ಲ. ಮಾಹಿತಿ ಕೇಳಿಕೊಂಡು, ಅರ್ಜಿ ಸಲ್ಲಿಸುವುದಕ್ಕಾಗಿ ನಿತ್ಯವೂ ಹಲವರು ಕಚೇರಿಗೆ ಬರುತ್ತಿದ್ದಾರೆ. ನಮಗೂ ಮಾಹಿತಿ ಇಲ್ಲ ಎಂದೇ ಅವರಿಗೆ ಹೇಳಿ ಕಳುಹಿಸುತ್ತಿದ್ದೇವೆ. ಮಾರ್ಗಸೂಚಿ ಬಂದ ನಂತರ ಅರ್ಜಿ ಸ್ವೀಕರಿಸಬಹುದಾಗಿದೆ’ ಎಂದು ತಿಳಿಸಿದರು.

‘ನೂತನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಜಿಲ್ಲಾಧಿಕಾರಿಗಳ ಸಭೆ ನಡೆಸುತ್ತಿದ್ದಾರೆ. ಅಲ್ಲಿ ಸೂಚನೆ ಬರುವ ಸಾಧ್ಯತೆಗಳಿವೆ. ಸರ್ಕಾರದ ಮಟ್ಟದಲ್ಲಿ ನಿಯಮಗಳನ್ನು ರೂಪಿಸಲಾಗುತ್ತಿದೆ ಎನ್ನುವ ಮಾಹಿತಿ ಇದೆ. ಇನ್ನೊಂದು ವಾರದಲ್ಲಿ ಸ್ಪಷ್ಟ ಚಿತ್ರಣ ಸಿಗಬಹುದು’ ಎನ್ನುತ್ತಾರೆ ಅವರು.

ಈ ನಡುವೆ, ಸರ್ಕಾರದಿಂದ ಅಧಿಕೃತ ಆದೇಶ ಬರುವವರೆಗೆ ಬಡ್ಡಿ ಹಾಗೂ ಅಸಲು ವಸೂಲಿ ಮಾಡಲು ಲೇವಾದೇವಿದಾರರು ಒತ್ತಡ ಹೇರುತ್ತಿದ್ದಾರೆ. ಕಾಯ್ದೆ ಜಾರಿಯ ಕುರಿತು ಮಾಹಿತಿ ಇಲ್ಲದವರಿಂದ ತರಾತುರಿಯಲ್ಲಿ ವಸೂಲಿಗೆ ದುಂಬಾಲು ಬಿದ್ದಿದ್ದಾರೆ. ಇದಕ್ಕೆ ಮೂಗುದಾರ ಹಾಕಬೇಕು ಎಂಬ ಒತ್ತಾಯ ಕೇಳಿಬಂದಿದೆ.

Post Comments (+)