ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ| ನಿಷೇಧವಿದ್ದರೂ ಮಾರಾಟ, ಬಳಕೆ ತಪ್ಪಿಲ್ಲ!

ಭೂತಾಯಿಯ ಒಡಲು ಸೇರುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯ
Last Updated 29 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ನಿಷೇಧವಿದ್ದರೂ ಪ್ಲಾಸ್ಟಿಕ್‌ ಮಾರಾಟ ಮತ್ತು ಬಳಕೆ ಅವ್ಯಾಹತವಾಗಿ ನಡೆಯುತ್ತಿದೆ. ಈ ತ್ಯಾಜ್ಯವು ದೊಡ್ಡ ಪ್ರಮಾಣದಲ್ಲಿ ಭೂತಾಯಿ ಹಾಗೂ ಜಲಮೂಲಗಳ ಒಡಲು ಸೇರುತ್ತಿದೆ!

40 ಮೈಕ್ರಾನ್‌ಗಿಂತ ಕಡಿಮೆ ತೆಳ್ಳಗಿನ ಪ್ಲಾಸ್ಟಿಕ್ ಬ್ಯಾಗ್‌ಗಳ ಬಳಕೆಯನ್ನು 2011ರಲ್ಲಿ ಕೇಂದ್ರ ಸರ್ಕಾರ ನಿಷೇಧಿಸಿತು. 2016ರಲ್ಲಿ ಪ್ಲಾಸ್ಟಿಕ್ ನಿಷೇಧ ನಿಯಮವನ್ನು ಮತ್ತಷ್ಟು ಬಲಗೊಳಿಸಿ, 50 ಮೈಕ್ರಾನ್‌ಗಿಂತ ತೆಳುವಾದ ಪ್ಲಾಸ್ಟಿಕ್ ಉತ್ಪಾದನೆ ಮತ್ತು ಬಳಕೆಯನ್ನು ನಿರ್ಬಂಧಿಸಿತು. ನಿಯಮ ಉಲ್ಲಂಘಿಸಿದವರ ವಿರುದ್ಧ ದಂಡದ ‘ಅಸ್ತ್ರ’ ಪ್ರಯೋಗಿಸುವುದಕ್ಕೂ ಅವಕಾಶ ಕೊಡಲಾಗಿದೆ.

ನಗರಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳು ತಮ್ಮ ಭಾಗದಲ್ಲಿ ದಾಳಿ ನಡೆಸಿ, ವ್ಯಾಪಾರಿಗಳಿಗೆ ‘ದಂಡ’ ವಿಧಿಸಿದ ಉದಾಹರಣೆಗಳೂ ಇವೆ. ಆದರೂ ಇದರಿಂದ ಪರಿಣಾಮಕಾರಿ ಸುಧಾರಣೆ ಆಗಿಲ್ಲ. ಮಾರುಕಟ್ಟೆಯಲ್ಲೊಂದು ಸುತ್ತು ಹಾಕಿದರೆ, ಪ್ಲಾಸ್ಟಿಕ್‌ ಮಾರಾಟ ನಿಂತಿಲ್ಲ ಎನ್ನುವುದಕ್ಕೆ ಹಲವು ಉದಾಹರಣೆಗಳು ಸಿಗುತ್ತವೆ.

ಬಂದಿದ್ದೆಲ್ಲಿ?: ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ನೂರಾರು ಕೆ.ಜಿ.ಯಷ್ಟು ‍ಪ್ಲಾಸ್ಟಿಕ್‌ ಪತ್ತೆಯಾಗಿದೆ. ಇದು ಬಂದಿದ್ದೆಲ್ಲಿ?! ಅಂದರೆ ಮೂಲದಲ್ಲೇ (ತಯಾರಿಕೆ) ಕಡಿವಾಣ ಹಾಕಿಲ್ಲದಿರುವುದನ್ನು ಇದು ಸ್ಪಷ್ಟವಾಗಿ ತೋರಿಸುತ್ತಿದೆ. ತಯಾರಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಂಡರೆ ಸಮಸ್ಯೆ ನಿವಾರಿಸುವುದಕ್ಕೆ ಅವಕಾಶವಿದೆ. ವಿತರಕರು, ಮಾರುವವರು ಹಾಗೂ ಬಳಸುವವರು ವಿರುದ್ಧ ದಂಡ ಪ್ರಯೋಗಿಸಿದರೆ ಹೆಚ್ಚಿನ ಪರಿಣಾಮ ಉಂಟಾಗುವುದಿಲ್ಲ. ಬೇರೆ ಕಡೆಗಳಿಂದ ಆಗುತ್ತಿರುವ ‘ಪೂರೈಕೆ’ಗೂ ಕಡಿವಾಣ ಹಾಕಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಅವರ ನಿರ್ಲಕ್ಷ್ಯದ ಪರಿಣಾಮ ಪ್ಲಾಸ್ಟಿಕ್ ಬಳಕೆಗೆ ಅಂಕುಶ ಹಾಕುವುದು ಸಾಧ್ಯವಾಗಿಲ್ಲ.

ಪ್ಲಾಸ್ಟಿಕ್‌ ಬಳಕೆಯಿಂದ ಕ್ಯಾನ್ಸರ್‌, ನರಸಂಬಂಧಿ, ಹೃದ್ರೋಗ, ಥೈರಾಯ್ಡ್‌, ಅಸ್ತಮಾ, ಕೂದಲು, ಚರ್ಮದ ಸಮಸ್ಯೆಗಳು ಬರುತ್ತವೆ ಎನ್ನುವ ಸಂಶೋಧನಾ ವರದಿಗಳನ್ನು ತಿಳಿಸಿ ಮನವರಿಕೆ ಮಾಡಿಕೊಡಲಾಗುತ್ತಿದೆ. ದಂಡ ವಿಧಿಸಲಾಗುತ್ತಿದೆ ಎನ್ನುವುದು ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ಸಮರ್ಥನೆ. ಆದರೆ, ಪ್ಲಾಸ್ಟಿಕ್‌ ಅವಲಂಬನೆಯಿಂದ ದೂರಾಗಲು ಜನ ಹಿಂದೇಟು ಹಾಕುತ್ತಿದ್ದಾರೆ. ಅಧಿಕಾರಿಗಳು ಆಗೊಮ್ಮೆ ಈಗೊಮ್ಮೆ ನಡೆಸುವ ಕೆಲವು ಪ್ರಯತ್ನಗಳಿಗೆ ಯಶಸ್ಸು ಸಿಗದಿರುವುದಕ್ಕೆ ಜನರ ‘ಮನಸ್ಥಿತಿ’ ಬದಲಾಗದಿರುವುದೇ ಕಾರಣ ಎಂದು ಹೇಳಲಾಗುತ್ತಿದೆ.

ಕದ್ದು–ಮುಚ್ಚಿ: ‘ಕ್ಯಾರಿಬ್ಯಾಗ್ ಕೊಡದಿದ್ದರೆ ಈ ವಸ್ತುಗಳನ್ನು ಒಯ್ಯುವುದು ಹೇಗೆ ಎಂದು ಕೇಳುತ್ತಿದ್ದಾರೆ. ನಿಮ್ಮಲ್ಲಿಗೆ ವ್ಯಾಪಾರಕ್ಕೆ ಬರುವುದೇ ಇಲ್ಲ ಎಂದು ಹೇಳುತ್ತಾರೆ. ಹೀಗಾಗಿ, ವ್ಯಾಪಾರಿಗಳು ಕದ್ದುಮುಚ್ಚಿ ಪ್ಲಾಸ್ಟಿಕ್‌ ಬಳಸುವುದು ಅನಿವಾರ್ಯವಾಗಿದೆ. ಪರ್ಯಾಯ ವ್ಯವಸ್ಥೆಗಳಿಗೆ ಜನರನ್ನು ಒಗ್ಗಿಸಬೇಕು. ಅವರಲ್ಲಿ ಜಾಗೃತಿ ಮೂಡಿಸಬೇಕು. ಇಲ್ಲದಿದ್ದರೆ ನಿಷೇಧ ಸಂಪೂರ್ಣವಾಗಿ ಜಾರಿಯಾಗುವುದಿಲ್ಲ’ ಎಂದು ವ್ಯಾಪಾರಿಯೊಬ್ಬರು ಅನಿಸಿಕೆ ವ್ಯಕ್ತಪಡಿಸಿದರು.

ಪ್ಲಾಸ್ಟಿಕ್ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡುವುದು ಕೂಡ ಸಾಮಾನ್ಯವಾಗಿದೆ. ರಸ್ತೆಗಳ ಬದಿಯಲ್ಲಿ, ಚರಂಡಿ, ನಾಲೆ ಹಾಗೂ ಮಳೆ ನೀರು ಚರಂಡಿಯಲ್ಲಿ ಘನತ್ಯಾಜ್ಯದೊಂದಿಗೆ ಈ ತ್ಯಾಜ್ಯ ಬೆರೆಯುತ್ತಿದೆ. ಇದರಿಂದಾಗಿ ಚರಡಿಗಳಲ್ಲಿ ನೀರು ಸರಾಗವಾಗಿ ಹರಿಯುತ್ತಿಲ್ಲ. ಈಚೆಗೆ ಸುರಿದ ಧಾರಾಕಾರ ಮಳೆಯ ಸಂದರ್ಭದಲ್ಲಿ ಚರಂಡಿಗಳು ಕಟ್ಟಿಕೊಳ್ಳುವುದಕ್ಕೆ ಹಾಗೂ ಮನೆಗಳಿಗೆ ನೀರು ನುಗ್ಗುವುದಕ್ಕೆ ಪ್ಲಾಸ್ಟಿಕ್ ತ್ಯಾಜ್ಯವೂ ಪ್ರಮುಖ ಕಾರಣವಾಗಿತ್ತು. ಇದಾದ ನಂತರವೂ ಸ್ಥಳೀಯ ಸಂಸ್ಥೆಯಾಗಲೀ, ಸಾರ್ವಜನಿಕರಾಗಲಿ ‘ಪಾಠ’ ಕಲಿತಿಲ್ಲ. ಅವಾಂತರಗಳು ತಪ್ಪಿಲ್ಲ.

ಇವುಗಳಿಗೆ ನಿರ್ಬಂಧ

* ಪ್ಲಾಸ್ಟಿಕ್‌ ಕ್ಯಾರಿಬ್ಯಾಗ್‌

* ಪ್ಲಾಸ್ಟಿಕ್‌ ಭಿತ್ತಿಪತ್ರ

* ಪ್ಲಾಸ್ಟಿಕ್‌ ತಟ್ಟೆ, ಲೋಟ, ಚಮಚ

* ಹಣ್ಣು, ಹೂವು ಮೇಲೆ ಸುತ್ತುವ ಹಾಳೆ

* ಪ್ಲಾಸ್ಟಿಕ್‌ ತೋರಣ

* ಊಟದ ಟೇಬಲ್ ಮೇಲೆ ಹರಡುವ ಪ್ಲಾಸ್ಟಿಕ್‌

* ಪ್ಲಾಸ್ಟಿಕ್‌ ಬಾವುಟ, ಫ್ಲೆಕ್ಸ್‌

* ಥರ್ಮೊಕೋಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT