ಬುಧವಾರ, ಮಾರ್ಚ್ 3, 2021
30 °C

ಶಿಕ್ಷಕರ ದಿನಾಚರಣೆ: ಗುರುಗಳಿಗಿಲ್ಲ ‘ಭವನ’ದ ಆಸರೆ!

ಎಂ. ಮಹೇಶ Updated:

ಅಕ್ಷರ ಗಾತ್ರ : | |

ಬೆಳಗಾವಿ: ಶಿಕ್ಷಕರು ತಮ್ಮ ಸಂಘಟನೆಯ ಚಟುವಟಿಕೆಗಳನ್ನು ಕೈಗೊಳ್ಳಲು, ಸಭೆಗಳು ಅಥವಾ ಕಾರ್ಯಕ್ರಮಗಳನ್ನು ಆಯೋಜಿಸುವುದಕ್ಕೆ ನಗರದಲ್ಲಿ ಪ್ರತ್ಯೇಕ ಭವನವೇ ಇಲ್ಲ.

ಭೌಗೋಳಿಕವಾಗಿ ದೊಡ್ಡದಾದ ಈ ಜಿಲ್ಲೆಯನ್ನು ಶಿಕ್ಷಣ ಇಲಾಖೆಯು ಆಡಳಿತಾತ್ಮಕ ಹಿತದೃಷ್ಟಿಯಿಂದ ಬೆಳಗಾವಿ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳೆಂದು ವಿಂಗಡಿಸಿಕೊಂಡಿದೆ. ಇವುಗಳ ಕೇಂದ್ರ ಸ್ಥಾನವಾದ ಬೆಳಗಾವಿ ಹಾಗೂ ಚಿಕ್ಕೋಡಿಯಲ್ಲಿ ಶಿಕ್ಷಕರ ಅಥವಾ ಗುರು ಭವನಗಳಿಲ್ಲ. ಈ ವಿಷಯದಲ್ಲಿ ಬೆಳಗಾವಿಯು ಇತರ ಜಿಲ್ಲೆಗಳಿಗಿಂತ ಬಹಳ ಹಿಂದುಳಿದಿದೆ. ಸವದತ್ತಿ ಹಾಗೂ ಬೈಲಹೊಂಗದಲ್ಲಿ ಭವನ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆಯಾದರೂ, ಪೂರ್ಣಗೊಂಡಿಲ್ಲ.

ಭವನ ನಿರ್ಮಿಸಿಕೊಳ್ಳುವ ಸಂಬಂಧ ಶಿಕ್ಷಕರ ಸಂಘಟನೆಗಳಿಂದ ಪ್ರಯತ್ನಗಳು ನಡೆದಿವೆಯಾದರೂ, ಜನಪ್ರತಿನಿಧಿಗಳು ಅಥವಾ ಸರ್ಕಾರದಿಂದ ಸ್ಪಂದನೆ ದೊರೆತಿಲ್ಲ. ನಿವೇಶನವೂ ಮಂಜೂರಾಗಿಲ್ಲ. ಇದರಿಂದಾಗಿ, ಕಾರ್ಯಕ್ರಮಗಳನ್ನು ನಡೆಸುವುದಕ್ಕಾಗಿ ಶಿಕ್ಷಕರ ಸಂಘದ ಪದಾಧಿಕಾರಿಗಳು ಇತರ ಸಂಘ–ಸಂಸ್ಥೆಗಳ ಭವನಗಳನ್ನು ಕಾಯ್ದಿರಿಸಲು ಅಲೆದಾಡಬೇಕಾದ ಸ್ಥಿತಿ ಇದೆ. ಶಿಕ್ಷಕರ ದಿನಾಚರಣೆ ಸಮಾರಂಭವನ್ನು ಸ್ವಂತ ಸೂರಿನಲ್ಲಿ ಆಯೋಜಿಸಬೇಕು ಎನ್ನುವ ಗುರುಗಳ ಸಮೂಹದ ಬಯಕೆ ಈಡೇರುವುದು ಯಾವಾಗ ಎನ್ನುವುದು ಪ್ರಶ್ನೆಯಾಗಿದೆ.

ಬೇರೆ ಕಡೆಗಳಲ್ಲಿ

ಈ ಬಾರಿಯ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆಯನ್ನು ಕೆಪಿಟಿಸಿಎಲ್ ಸಮುದಾಯ ಭವನ, ತಾಲ್ಲೂಕು ಮಟ್ಟದ ಕಾರ್ಯಕ್ರಮವನ್ನು ರಾಮನಗರದ ಧರ್ಮನಾಥ ಭವನದಲ್ಲಿ ಆಯೋಜಿಸಲಾಗಿದೆ. ಹೀಗೆ, ಪ್ರತಿ ಬಾರಿಯೂ ಒಂದೊಂದು ಕಡೆಗಳಲ್ಲಿ ಸಭಾಂಗಣ ಹುಡುಕಬೇಕಾದ ಅನಿವಾರ್ಯ ಶಿಕ್ಷಕರ ಸಂಘಟನೆಯವರದಾಗಿದೆ.

‘ನಗರದಲ್ಲಿ ಶಿಕ್ಷಕರು ಹಾಗೂ ಮಕ್ಕಳಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸಲು ಸ್ವಂತ ಭವನ ಬಹಳ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ನಾವು ನಡೆಸಿರುವ ಪ್ರಯತ್ನಗಳಿಗೆ ಸರ್ಕಾರದಿಂದ ಅಥವಾ ಜನಪ್ರತಿನಿಧಿಗಳಿಂದ ಸರಿಯಾದ ಸ್ಪಂದನೆ ದೊರೆತಿಲ್ಲ’ ಎಂದು ಶಿಕ್ಷಕರ ಸಂಘ ಜಿಲ್ಲಾ ಘಟಕದ ಸಂಘಟನಾ ಕಾರ್ಯದರ್ಶಿ ಆನಂದಗೌಡ ಕಾದ್ರೋಳ್ಳಿ ವಿಷಾದ ವ್ಯಕ್ತಪಡಿಸಿದರು.

ಗಮನಕ್ಕೆ ತಂದಿದ್ದೇವೆ

‘ಸಂಘಟನೆಯ ಕಾರ್ಯಕ್ರಮಗಳನ್ನು, ಸಭೆಗಳನ್ನು ಬಿಇಒ ಕಚೇರಿ ಹಿಂದಿನ ಚಿಕ್ಕ ಕೊಠಡಿಯಲ್ಲಿ ನಡೆಸುತ್ತೇವೆ. ಅಲ್ಲಿ ಹೆಚ್ಚು ಜನರು  ಕುಳಿತುಕೊಳ್ಳುವುದಕ್ಕೆ ವ್ಯವಸ್ಥೆ ಇಲ್ಲ. ದೊಡ್ಡ ಮಟ್ಟದ ಸಮಾರಂಭಗಳಿದ್ದಲ್ಲಿ ಸರ್ಕಾರಿ ನೌಕರರ ಭವನದಲ್ಲೋ, ನ್ಯಾಯಾಲಯ ಸಂಕೀರ್ಣದಲ್ಲೋ, ಗಾಂಧಿ ಭವನದಲ್ಲೋ ಆಯೋಜಿಸುತ್ತೇವೆ. ಎಲ್ಲಿ ಖಾಲಿ ಇದೆ ಎನ್ನುವುದನ್ನು ಹುಡುಕಿ ಹೋಗಬೇಕಾದ ಪರಿಸ್ಥಿತಿ ಇದೆ. ನಮ್ಮ ಕಾರ್ಯಕ್ರಮಗಳಿಗೆ ನಮ್ಮದೂ ಅಂತ ಯಾವುದೇ ಜಾಗವಿಲ್ಲದಂತಾಗಿದೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

‘ಭವನ ಕಟ್ಟಿಸಿಕೊಳ್ಳುವುದಕ್ಕಾಗಿ ನಗರದಲ್ಲಿ ಸಂಘಕ್ಕೆ ನಿವೇಶನ ನೀಡುವಂತೆ ಕೋರಿ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಈ ಕುರಿತು ಜನಪ್ರತಿನಿಧಿಗಳ ಗಮನಕ್ಕೂ ತಂದಿದ್ದೇವೆ. ಆದರೆ, ಭರವಸೆಗಳು ಈಡೇರಿಲ್ಲ. ಹೋದ ವರ್ಷ ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ  ಅಂದಿನ ಶಾಸಕರಾಗಿದ್ದ ಫಿರೋಜ್‌ ಸೇಠ್‌, ಸಂಜಯ ಪಾಟೀಲ ಅವರಿಗೂ ಮನವಿ ಸಲ್ಲಿಸಿದ್ದೆವು’ ಎಂದು ಹೇಳಿದರು.

ಬೆಳಗಾವಿ ಶೈಕ್ಷಣಿಕ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ 9,000ಕ್ಕೂ ಹೆಚ್ಚು ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು