ಸರ್ಕಾರಕ್ಕೆ ವಿದ್ಯುತ್ ಮಾರುವ ಸಹೋದರರು

ಭಾನುವಾರ, ಜೂಲೈ 21, 2019
25 °C
ಅಥಣಿಯಲ್ಲಿ ಸೌರ ವಿದ್ಯುತ್‌ ಉತ್ಪಾದನೆ ಘಟಕ

ಸರ್ಕಾರಕ್ಕೆ ವಿದ್ಯುತ್ ಮಾರುವ ಸಹೋದರರು

Published:
Updated:
Prajavani

ಅಥಣಿ: ಉದ್ಯಮಿಗಳಾಗಿ ಗುರುತಿಸಿಕೊಂಡಿರುವ ಇಲ್ಲಿನ ಸಹೋದರರಾದ ಪ್ರಕಾಶ ಸಿಂದಗಿ ಮತ್ತು ರಮೇಶ ಸಿಂದಗಿ ಸರ್ಕಾರಕ್ಕೇ ವಿದ್ಯುತ್‌ ಮಾರುವ ಮೂಲಕ ಗಮನಸೆಳೆದಿದ್ದಾರೆ.

ಸತ್ತಿ ರಸ್ತೆಯ ಕೆಇಬಿ ಹಿಂದಿನ ಅವರ ಜಮೀನಿನಲ್ಲಿ ಖಾಸಗಿ ಕಂಪನಿಯೊಂದಿಗೆ ಒಡಂಬಡಿಕೆ ಮಾಡಿಕೊಂಡು ಸೋಲಾರ್‌ ವಿದ್ಯುತ್‌ ಘಟಕ ಸ್ಥಾಪಿಸಿದ್ದಾರೆ. ಅಲ್ಲಿ ಉತ್ಪಾದನೆಯಾಗುವ ವಿದ್ಯುತ್‌ ಅನ್ನು ಸರ್ಕಾರಕ್ಕೆ ಪೂರೈಸುತ್ತಿದ್ದಾರೆ. ಪಟ್ಟಣದ ಹೊರವಲಯದಲ್ಲಿರುವ 5 ಎಕರೆ ಸ್ವಂತ ಜಮೀನಿನಲ್ಲಿ ₹ 7 ಕೋಟಿ ವೆಚ್ಚದಲ್ಲಿ 250 ವಾಟ್‌ನ 400 ಸೋಲಾರ್ ಪ್ಯಾನಲ್‌ಗಳನ್ನು ಹಾಕಿದ್ದಾರೆ. ಇಲ್ಲಿ ದೊರೆಯುವ ವಿದ್ಯುತ್ತನ್ನು ಖಾಸಗಿ ಕಂಪನಿ ಮೂಲಕ ಸರ್ಕಾರಕ್ಕೆ ಯುನಿಟ್‌ಗೆ ₹ 8.40ರಂತೆ ಮಾರಾಟ ಮಾಡುತ್ತಾರೆ.

2015ರಲ್ಲಿ ರೆಡ್ ಅರ್ಥ್‌ ಗ್ರೀನ್‌ ಎನರ್ಜಿ ಪ್ರೈವೇಟ್ ಲಿಮಿಟೆಡ್‌ ಕಂಪನಿ ಮೂಲಕ ಕೆಆರ್‌ಇಡಿಎಲ್‌ (ಕರ್ನಾಟಕ ನವೀಕರಿಸಬಹುದಾದ ಇಂಧನ ನಿಯಮಿತ) ಮೂಲಕ ಹಲವಾರು ಕಂಪನಿಗಳು ಕೃಷಿಕರಿಗಾಗಿ ಈ ಯೋಜನೆಯಲ್ಲಿ ಪಾಲ್ಗೊಳ್ಳುವಕ್ಕಾಗಿ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಿದ್ದರು. ಕರ್ನಾಟಕದಲ್ಲಿ 300 ಮೆಗಾ ವಾಟ್‌ಗೆ ಅರ್ಜಿ ಆಹ್ವಾನಿಸಲಾಗಿತ್ತು. ಆ ಸಮಯದಲ್ಲಿ ಅರ್ಜಿ ಆಹ್ವಾನಿಸಿ 3 ನಿಮಿಷಗಳಲ್ಲೇ ಎಲ್ಲ ಅರ್ಜಿಗಳು ಸಲ್ಲಿಕೆಯಾಗಿದ್ದವು. ಆಗ, ಅಥಣಿಯಿಂದ ರಮೇಶ ಸಿಂದಗಿ ಮಾತ್ರ ಅರ್ಜಿ ತುಂಬಿದ್ದರು. ಹೀಗಾಗಿ, ಅವರಿಗೆ ಟೆಂಡರ್‌ ಆಗಿತ್ತು.

ರೆಡ್‌ ಅರ್ಡ್‌ ಗ್ರೀನ್‌ ಎನರ್ಜಿ ಕಂಪನಿಯಿಂದ ರಮೇಶ ಹಾಗೂ ಪ್ರಕಾಶ ಸಿಂದಗಿ ಅಥಣಿಯಲ್ಲಿ ಸೋಲಾರ್‌ ಘಟಕ ಸ್ಥಾಪಿಸಲು ಅವಕಾಶ ದೊರೆತಿದೆ. 2016ರಲ್ಲಿ ಅವರು ಈ ಕೆಲಸ ಶುರು ಮಾಡಿದರು. ಮೂರು ವರ್ಷಗಳಿಂದ ವಿದ್ಯುತ್‌ ಉತ್ಪಾದಿಸಿ, ಉದ್ಯಮಿಗಳಾಗಿ ಹೊರಹೊಮ್ಮಿದ್ದಾರೆ. ಈ ಘಟಕದಲ್ಲಿ ಏಳು ಮಂದಿಗೆ ಕೆಲಸ ಸಿಕ್ಕಿದೆ. ಇವರು ಹೋಟೆಲ್‌ ಕೂಡ ನಡೆಸುತ್ತಿದ್ದು, ಅಲ್ಲಿಯೂ ಏಳು ಮಂದಿದೆ ಉದ್ಯೋಗ ಒದಗಿಸಿದ್ದಾರೆ. ತಮ್ಮ ಊರಲ್ಲೇ ಸ್ವಾವಲಂಬಿಯಾಗಿ ಬೆಳೆಯುವುದಲ್ಲದೇ, ಇತರರಿಗೂ ಕೆಲಸ ಕೊಟ್ಟು ಗಮನಸೆಳೆದಿದ್ದಾರೆ.

‘ನಾವು ಕೆನರಾ ಬ್ಯಾಂಕ್‌ ಮೂಲಕ ₹ 7 ಕೋಟಿ ಸಾಲ ಪಡೆದು ಈ ಸೋಲಾರ್ ಘಟಕ ನಿರ್ಮಿಸಿದ್ದೇವೆ. ಇದರಲ್ಲಿ ಮಳೆಗಾಲ, ಚಳಿಗಾಲ ಮತ್ತು ಬೇಸಿಗೆಗಾಲ ಹೀಗೆ ಎಲ್ಲ ಸಂದರ್ಭದಲ್ಲೂ ಅಂದಾಜು 16 ಲಕ್ಷ ಯುನಿಟ್‌ ವಿದ್ಯುತ್‌ ಅನ್ನು ಸರ್ಕಾರಕ್ಕೆ ಮಾರುತ್ತಿದ್ದೇವೆ. ನಿತ್ಯವೂ ಸರಾಸರಿ 6ಸಾವಿರ ಯುನಿಟ್‌ ವಿದ್ಯುತ್‌ ಉತ್ಪಾದನೆಯಾಗುತ್ತದೆ’ ಎಂದು ಪ್ರಕಾಶ ಸಿಂದಗಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !