ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಶಾಲೆಯ ವಿದ್ಯಾರ್ಥಿಗಳು ಪಠ್ಯೇತರ ವಿಷಯದಲ್ಲೂ ಮುಂದು

Last Updated 1 ನವೆಂಬರ್ 2019, 19:45 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು (ಬೆಳಗಾವಿ ಜಿಲ್ಲೆ): ಇಲ್ಲಿನ ಬಸಾಪುರ ರಸ್ತೆಯಲ್ಲಿರುವ ಶಕುಂತಲಾ ಗಡಿಗಿ ಅನುದಾನಿತ ಪ್ರೌಢಶಾಲೆ ವಿದ್ಯಾರ್ಥಿಗಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆ ಎರಡರಲ್ಲೂ ಗಮನಸೆಳೆದಿದ್ದಾರೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯ ಉತ್ತಮ ಫಲಿಂತಾಶ ಹಾಗೂ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಪಡೆದಿರುವ ಬಹುಮಾನಗಳು ಶಾಲೆಗೆ ಗರಿ ಮೂಡಿಸಿವೆ.

ಪ್ರತಿಭಾವಂತ ಶಿಕ್ಷಕರ ಸಮೂಹ, ಗುಣಮಟ್ಟದ ಬೋಧನೆ, ವಿಶೇಷ ತರಬೇತಿಗಳು ಮತ್ತು ವಿದ್ಯಾರ್ಥಿಗಳ ಬಗೆಗಿನ ಕಾಳಜಿಯಿಂದಾಗಿ ಶಾಲೆಯು ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ.

ರಜತ ಮಹೋತ್ಸವ:ನುಲಿಯ ಚಂದಯ್ಯ ಶಿಕ್ಷಣ ಸಂಸ್ಥೆ ವತಿಯಿಂದ 1994-95ರಲ್ಲಿ ಆರಂಭಗೊಂಡಿರುವ ಈ ಶಾಲೆ ಸದ್ಯ ರಜತ ಮಹೋತ್ಸವ ಸಂಭ್ರಮದಲ್ಲಿದೆ. ಈ ಸಂಸ್ಥೆಯಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ಬದುಕು ಕಟ್ಟಿಕೊಂಡಿದ್ದಾರೆ.

ನರ್ಸರಿಯಿಂದ ಎಸ್ಸೆಸ್ಸೆಲ್ಸಿಯವರೆಗೆ ತರಗತಿಗಳಿವೆ. ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಪ್ರೌಢಶಾಲೆ ತರಗತಿಗಳಿವೆ. ಒಟ್ಟು 600 ವಿದ್ಯಾರ್ಥಿಗಳು ಓದುತ್ತಿದ್ದಾರೆ.

ವಿಶೇಷ ಮುತುವರ್ಜಿ: ಪ್ರತಿ ಶೈಕ್ಷಣಿಕ ವರ್ಷದ ಆರಂಭದಿಂದಲೂ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ವಿಶೇಷ ಮುತುವರ್ಜಿ ವಹಿಸಿ ಬೋಧಿಸಲಾಗುತ್ತದೆ. 8 ಮತ್ತು 9ನೇ ತರಗತಿಯಲ್ಲಿ ಕಲಿಯುವ ವಿದ್ಯಾರ್ಥಿಗಳ 6 ಮತ್ತು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳನ್ನು 3 ಗುಂಪುಗಳಾಗಿ ವಿಂಗಡಿಸಲಾಗುತ್ತದೆ.

‘ಪ್ರತಿ ಗುಂಪಿಗೆ ಶಿಕ್ಷಕರೊಬ್ಬರು ಮುಖ್ಯಸ್ಥರಾಗಿತ್ತಾರೆ. ಬೆಳಿಗ್ಗೆ 5ಗಂಟೆಗೆ ಶಿಕ್ಷಕರಿಂದ ವಿದ್ಯಾರ್ಥಿಗಳ ಮನೆಗೆ ಮಿಸ್ಡ್ ಕಾಲ್ ಹೋಗುತ್ತದೆ. ಅವರು ಎದ್ದಿದ್ದಾರೋ, ಇಲ್ಲವೋ? ಓದುತ್ತಿದ್ದರೆ ಕೊಟ್ಟ ವಿಷಯ ಓದುತ್ತಿದ್ದಾರೋ, ಇಲ್ಲವೋ? ಎಂಬ ಮಾಹಿತಿ ಪಡೆಯಲಾಗುತ್ತದೆ. ಓದಿದ ವಿಷಯ ಕುರಿತು ಪ್ರತಿ ದಿನದ ಪ್ರಾರ್ಥನಾ ಸಮಯದಲ್ಲಿ ಗುಂಪು ಚರ್ಚೆ ಮಾಡಲಾಗುತ್ತದೆ. ಈ ಮೂಲಕ ವಿದ್ಯಾರ್ಥಿಗೆ ವಿಷಯ ಮನನ ಮಾಡಿಸಲಾಗುತ್ತದೆ’ ಎನ್ನುತ್ತಾರೆ ಮುಖ್ಯಶಿಕ್ಷಕ ಶ್ರೀನಿವಾಸಪ್ರಸಾದ್ ಭಜಂತ್ರಿ.

‘ಸ್ವಲ್ಪ ದಿನಗಳಾದ ನಂತರ ವಿದ್ಯಾರ್ಥಿಯೇ ಬೆಳಿಗೆ 5ಕ್ಕೆ ಎದ್ದು ಶಿಕ್ಷಕರಿಗೆ ಕರೆ ಮಾಡಬೇಕು. ಶಾಲಾ ಅವಧಿಯ ನಂತರವೂ ಪರಸ್ಪರ ಸಂಪರ್ಕದಿಂದಾಗಿ ವಿದ್ಯಾರ್ಥಿಗಳಲ್ಲಿ ಓದುವ ಮತ್ತು ಓದಿದ ವಿಷಯ ಮನದಟ್ಟು ಮಾಡಿಸುವ ಪ್ರಕ್ರಿಯೆ ಶೈಕ್ಷಣಿಕ ವರ್ಷವಿಡಿ ಇರುತ್ತದೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ರಾಜ್ಯಮಟ್ಟದಲ್ಲೂ ಮಿಂಚು: ‘ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಕ್ರೀಡಾಕೂಟ ಮತ್ತು ಪ್ರತಿಭಾ ಕಾರಂಜಿಯಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ರೂಪಕ ಮತ್ತು ದೃಶ್ಯಕಲೆ ಪ್ರದರ್ಶನ ವಿಭಾಗದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ. ಉರ್ದು ಮತ್ತು ಹಿಂದಿ ವಿಭಾಗದ ಭಾಷಣ ಸ್ಪರ್ಧೆಯಲ್ಲೂ ರಾಜ್ಯಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದ ಹೆಗ್ಗಳಿಕೆ ಇದೆ’ ಎಂದು ಮಾಹಿತಿ ನೀಡಿದರು.

‘ಕ್ರೀಡಾ ವಿಭಾಗದಲ್ಲೂ ಚೆಸ್ ಮತ್ತು ಹರ್ಡಲ್ಸ್‌ನಲ್ಲಿ ರಾಜ್ಯ ಮಟ್ಟದಲ್ಲಿ ಪ್ರತಿನಿಧಿಸಿದ್ದಾರೆ. ವಿದ್ಯಾರ್ಥಿಗಳ ಸರ್ವತೋಮುಖ ಪ್ರಗತಿಗಾಗಿ ಬೋಧಕ ಸಿಬ್ಬಂದಿ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ಶಾಲಾ ಅವಧಿ ಮುಗಿದ ನಂತರ ನಡೆಸುವ ವಿಶೇಷ ತರಗತಿಗಳು ವಿದ್ಯಾರ್ಥಿಗಳ ಪ್ರಗತಿಗೆ ಪೂರಕವಾಗಿವೆ’ ಎನ್ನುತ್ತಾರೆ ಸಂಸ್ಥೆ ಅಧ್ಯಕ್ಷ ವಸಂತ ಭಜಂತ್ರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT