ಸೋಮವಾರ, ನವೆಂಬರ್ 18, 2019
27 °C

ದೇಹದಾರ್ಢ್ಯ ಪಟುವಿಗೆ ನ್ಯಾಷನಲ್ ಗೋಲ್ಡ್ ಕನಸು

Published:
Updated:
Prajavani

ಬೆಳಗಾವಿ: ಇಲ್ಲಿನ ಬಾಂದೂರ್‌ ಗಲ್ಲಿ ನಿವಾಸಿ ಪೃಥ್ವಿರಾಜ್ ಕಂಗ್ರಾಳಕರ ದೇಹದಾರ್ಢ್ಯ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಚಿನ್ನದ ಪದಕ ಗೆಲ್ಲಬೇಕು ಎಂಬ ಗುರಿಯೊಂದಿಗೆ ‘ಅಭ್ಯಾಸ’ ನಡೆಸುತ್ತಿದ್ದಾರೆ.

ಕೆಎಲ್‌ಇ ಸಂಸ್ಥೆಯ ಡಾ.ಎಂ.ಎಸ್. ಶೇಷಗಿರಿ ಎಂಜಿನಿಯರಿಂಗ್‌ ಮತ್ತು ತಾಂತ್ರಿಕ ಕಾಲೇಜಿನ ಕಂಪ್ಯೂಟರ್‌ ಸೈನ್ಸ್ ವಿಭಾಗದದಲ್ಲಿ ಅಧ್ಯಯನ ಮಾಡುತ್ತಿರುವ ಅವರು, 4 ವರ್ಷಗಳಿಂದ ವಿದ್ಯಾಭ್ಯಾಸದೊಂದಿಗೆ ನಿರಂತರವಾಗಿ ದೈಹಿಕ ಕಸರತ್ತು ನಡೆಸುತ್ತಿದ್ದಾರೆ. ಜಿಮ್‌ನಲ್ಲಿ ಬೆವರು ಹರಿಸುತ್ತಿದ್ದಾರೆ. ಹೆಚ್ಚೆಚ್ಚು ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಕೌಶಲ ಪ್ರದರ್ಶಿಸುವುದು ಅವರ ಗುರಿಯಾಗಿದೆ.

2016ರಿಂದ 2019ರವೆರಗೆ ಜಿಲ್ಲೆ ಹಾಗೂ ರಾಜ್ಯ ಮಟ್ಟದ ಅಂತರಕಾಲೇಜು ಮಟ್ಟದ ದೇಹದಾರ್ಢ್ಯ ಸ್ಪರ್ಧೆಗಳಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ‘ಈಗ ರಾಷ್ಟ್ರ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಪ್ರದರ್ಶನ ತೋರಿ, ಚಿನ್ನದ ಪದಕ ಗೆಲ್ಲಬೇಕು ಎನ್ನುವ ಗುರಿ ಹೊಂದಿದ್ದೇನೆ’ ಎಂದು ತಿಳಿಸುತ್ತಾರೆ. 2018ರಲ್ಲಿ ಕೇರಳದಲ್ಲಿ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಟ್ಟದ ಸ್ಪರ್ಧೆಯಲ್ಲಿ 6ನೇ ಸ್ಥಾನ ಪಡೆದು ಭರವಸೆ ಮೂಡಿಸಿದ್ದಾರೆ. ಈ ಬಾರಿ ಇದೇ ತಿಂಗಳಲ್ಲಿ ಒಡಿಸಾದಲ್ಲಿ ನಡೆಯಲಿರುವ ಸ್ಪರ್ಧೆಗೆ ತಯಾರಿ ನಡೆಸಿದ್ದಾರೆ. ಪ್ರದರ್ಶನ ಉತ್ತಮಗೊಳಿಸಿಕೊಳ್ಳಲು ಶ್ರಮಿಸುತ್ತಿದ್ದಾರೆ.

ಹಲವೆಡೆ ಸ್ಪರ್ಧೆ: ಬೆಂಗಳೂರಿನ ಸಾಯಿರಾಮ್‌ ತಾಂತ್ರಿಕ ಕಾಲೇಜಿನಲ್ಲಿ ಈಚೆಗೆ ಆಯೋಜಿಸಿದ್ದ ಅಂತರಕಾಲೇಜುಗಳ ಮಟ್ಟದ ಸ್ಪರ್ಧೆಯಲ್ಲಿ 80 ಕೆ.ಜಿ. ವಿಭಾಗದಲ್ಲಿ ಸತತ 2ನೇ ಬಾರಿಗೆ ಚಿನ್ನದ ಪದಕ ಪಡೆದು ಕಾಲೇಜು ಹಾಗೂ ನಗರಕ್ಕೆ ಕೀರ್ತಿ ತಂದಿದ್ದಾರೆ. ಅಖಿಲ ಭಾರತ ಅಂತರ ವಿಶ್ವವಿದ್ಯಾಲಯಗಳ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಅವರಿಗೆ ಚಿನ್ನದ ಪದಕ ಕೈ ತಪ್ಪಿದೆ. ಆದರೆ, ಮತ್ತೊಂದು ಬಾರಿ ಅವಕಾಶ ಒದಗಿ ಬಂದಿರುವ ಹಿನ್ನೆಲೆಯಲ್ಲಿ ಚಿನ್ನದ ಪದಕದ ಬೇಟೆಯ ವಿಶ್ವಾಸದಲ್ಲಿದ್ದಾರೆ.

‘ನನಗೆ ನನ್ನ ಕುಟುಂಬ ಬಹಳಷ್ಟು ಪ್ರೋತ್ಸಾಹ ನೀಡುತ್ತಿದೆ. ಕಾಲೇಜಿನಿಂದಲೂ ಎಲ್ಲ ರೀತಿಯ ಸಹಕಾರ ದೊರೆಯುತ್ತಿದೆ. ಸದೃಢತೆ ಕಾಪಾಡಿಕೊಳ್ಳಬೇಕು ಎಂಬ ಉದ್ದೇಶದಿಂದ ಜಿಮ್‌ಗೆ ಹೋಗುತ್ತಿದ್ದೆ. ಬಳಿಕ ದೇಹದಾರ್ಢ್ಯ ಸ್ಪರ್ಧೆ ಬಗ್ಗೆ ಒಲವು ಹೆಚ್ಚಾಯಿತು. ಬಳಿಕ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕ ಮೇಲೆ ಪ್ರೋತ್ಸಾಹ ನೀಡಿದಂತಾಯಿತು. ಓದಿನೊಂದಿಗೆ ಇದರಲ್ಲೂ ಮುಂದುವರಿಯಬೇಕು. ಸರ್ಕಾರಿ ನೌಕರಿ ಪಡೆಯಬೇಕು’ ಎಂಬ ಆಸೆ ನನ್ನದಾಗಿದೆ’ ಎಂದು ಪೃಥ್ವಿರಾಜ್ ತಿಳಿಸಿದರು.

ಪ್ರತಿಕ್ರಿಯಿಸಿ (+)